ದೊಡ್ಡಬಳ್ಳಾಪುರದಲ್ಲಿ ಕಳ್ಳರ ಹಾವಳಿ: ಸರ, ಬೈಕ್‌ನಿಂದ ಹಸುಗಳವರೆಗೆ ಕಳವು – ಜನರಲ್ಲಿ ಹೆಚ್ಚಿದ ಆತಂಕ

ದೊಡ್ಡಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕಳ್ಳತನ ಪ್ರಕರಣಗಳು ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದು, ಜನಸಾಮಾನ್ಯರ ನೆಮ್ಮದಿ ಕದಡಿದೆ.

ಮಹಿಳೆಯರ ಚಿನ್ನಾಭರಣ, ಬೈಕ್, ಪೆಟ್ರೋಲ್-ಡೀಸಲ್, ಗ್ಯಾಸ್ ಸಿಲಿಂಡರ್, ಹಸುಗಳು, ಎಳೆನೀರು, ರೈತರ ಹೊಲಗಳಲ್ಲಿ ಇರುವ ಕೊಳವೆ ಬಾವಿಗಳ ಕೇಬಲ್ ಕಳವು‌ ಸೇರಿದಂತೆ ಕೈಗೆ ಸಿಕ್ಕ ವಸ್ತುಗಳನ್ನೆಲ್ಲ ಕಳ್ಳರು ಗುರಿಯಾಗಿಸುತ್ತಿದ್ದಾರೆ. ಒಂದರ ಹಿಂದೆ ಒಂದರಂತೆ ಬೆಳಕಿಗೆ ಬರುತ್ತಿರುವ ಕಳವು ಪ್ರಕರಣಗಳು ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿವೆ.

ತಾಲೂಕಿನ ವಿವಿಧ ಭಾಗಗಳಲ್ಲಿ ನಡೆದಿರುವ ಕಳ್ಳತನಗಳ ಸರಣಿ ಇದೀಗ ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸಿದೆ. ವಿದ್ಯಾನಗರದಲ್ಲಿ ಹಸುಗಳ ಕಳ್ಳತನ ನಡೆದಿರುವುದು ರೈತ ಸಮುದಾಯವನ್ನು ಕಂಗಾಲಾಗುವಂತೆ ಮಾಡಿದ್ದರೆ, ಮಾನಸ ಆಸ್ಪತ್ರೆ ಸಮೀಪ ಮಾರಾಟಕ್ಕೆ ಇಟ್ಟಿದ್ದ ಎಳೆನೀರು ಕಳವು ಪ್ರಕರಣ ವ್ಯಾಪಾರಿಗಳಲ್ಲಿ ಆತಂಕ ಮೂಡಿಸಿದೆ. ಡಿ-ಕ್ರಾಸ್ ಪ್ರದೇಶದಲ್ಲಿ ಟಿವಿಎಸ್ ಎಕ್ಸ್‌ಎಲ್-100 ವಾಹನವನ್ನು ರಾಜಾರೋಷವಾಗಿ ಕಳವು ಮಾಡಿಕೊಂಡು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇನ್ನೊಂದೆಡೆ, ವಿವೇಕಾನಂದ ನಗರದಲ್ಲಿ ಮಹಿಳೆಯೊಬ್ಬರ ಚಿನ್ನದ ಮಾಂಗಲ್ಯ ಸರ ಕಳುವಾಗಿರುವ ಘಟನೆ ಮಹಿಳೆಯರ ಸುರಕ್ಷತೆ ಬಗ್ಗೆ ಕಳವಳ ಹೆಚ್ಚಿಸಿದೆ. ಕೊಡಿಗೇಹಳ್ಳಿ ಗ್ರಾಮದ ಗಣಪತಿ ದೇವಸ್ಥಾನದ ಹಿಂಭಾಗದ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಎಗರಿಸಿದ್ದಾರೆ.

ಸಿಸಿಟಿವಿ ಇದ್ದರೂ ಕಳ್ಳರಿಗೆ ಭಯವಿಲ್ಲ!

ಬಹುತೇಕ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳಿದ್ದರೂ ಕಳ್ಳರು ಯಾವುದೇ ಭಯವಿಲ್ಲದೆ ಕೃತ್ಯ ಎಸಗುತ್ತಿರುವುದು ಗಮನಾರ್ಹ. ಕೆಲವು ಪ್ರಕರಣಗಳಲ್ಲಿ ದೃಶ್ಯಗಳು ದಾಖಲಾಗಿದ್ದರೂ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ವಿಳಂಬವಾಗುತ್ತಿರುವುದರಿಂದ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಇದರ ಜೊತೆಗೆ ಕೆರೆಗಳಲ್ಲಿ ರಾತ್ರಿ ವೇಳೆ ಅಕ್ರಮವಾಗಿ ಮಣ್ಣು ತೆಗೆಯುವ ಪ್ರಕರಣಗಳು ಹೆಚ್ಚುತ್ತಿದ್ದು, ಕೆರೆಗಳ ಸ್ವಾಭಾವಿಕ ರಚನೆಗೆ ಧಕ್ಕೆಯಾಗುತ್ತಿದೆ. ಕೆಲವೆಡೆ ಟಿಪ್ಪರ್ ಲಾರಿಗಳು ಹಾಗೂ ಜೆಸಿಬಿಗಳ ಮೂಲಕ ದೊಡ್ಡ ಪ್ರಮಾಣದಲ್ಲಿ ಮಣ್ಣು ಸಾಗಾಟ ನಡೆಸಲಾಗುತ್ತಿದ್ದು, ಕೆರೆಗಳ ಆಳ, ದಂಡೆ ಮತ್ತು ನೀರು ಹಿಡಿದಿಡುವ ಸಾಮರ್ಥ್ಯ ಕುಂಠಿತವಾಗುತ್ತಿದೆ. ಇತ್ತೀಚೆಗೆ ಬಾಶೆಟ್ಟಿಹಳ್ಳಿ ಕೆರೆಯಲ್ಲಿ ಅನುಮತಿ‌‌ ಇಲ್ಲದೇ ಮಣ್ಣು ಸಾಗಾಟ ಮಾಡುತ್ತಿದ್ದ ಸುಮಾರು 7 ಟಿಪ್ಪರ್ ಲಾರಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ರಾತ್ರಿ ಗಸ್ತು ಹೆಚ್ಚಿಸುವಂತೆ ಒತ್ತಾಯ

ಕಳ್ಳತನ ಪ್ರಕರಣಗಳ ಹೆಚ್ಚಳದಿಂದ ಸ್ಥಳೀಯರು ಪೊಲೀಸ್ ಇಲಾಖೆಯು ರಾತ್ರಿ ಗಸ್ತು ಹೆಚ್ಚಿಸಬೇಕು, ಪ್ರಮುಖ ರಸ್ತೆ ಹಾಗೂ ವಸತಿ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಪೊಲೀಸ್ ಬೀಟ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.

ಜನರಲ್ಲಿ ಭಯದ ವಾತಾವರಣ

“ಮನೆಯ ಮುಂದೆ ನಿಲ್ಲಿಸಿದ ವಾಹನ ಸುರಕ್ಷಿತವಿಲ್ಲ, ಜಾನುವಾರುಗಳನ್ನು ಕಟ್ಟಿ ಬಿಟ್ಟರೂ ಭದ್ರತೆ ಇಲ್ಲ, ಮಹಿಳೆಯರು ಚಿನ್ನ ಧರಿಸಿ ಓಡಾಡುವುದಕ್ಕೂ ಆತಂಕವಾಗಿದೆ” ಎಂದು ಸಾರ್ವಜನಿಕರು ಅಳಲು ತೋಡಿಕೊಳ್ಳುತ್ತಿದ್ದಾರೆ. ನಿರಂತರ ಕಳ್ಳತನಗಳಿಂದ ಜನರು ರಾತ್ರಿ ವೇಳೆ ಹೆಚ್ಚಿನ ಎಚ್ಚರಿಕೆ ವಹಿಸುವಂತಾಗಿದೆ.

ಪೊಲೀಸರಿಗೆ ಸವಾಲಾದ ಕಳ್ಳರ ಜಾಲ

ಒಂದೇ ತಾಲೂಕಿನ ವಿವಿಧ ಭಾಗಗಳಲ್ಲಿ ವಿಭಿನ್ನ ರೀತಿಯ ಕಳ್ಳತನಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಂಘಟಿತ ಕಳ್ಳರ ಜಾಲ ಕಾರ್ಯನಿರ್ವಹಿಸುತ್ತಿದೆಯೇ ಎಂಬ ಅನುಮಾನವೂ ಮೂಡಿದೆ. ಪ್ರಕರಣಗಳ ತ್ವರಿತ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವ ಮೂಲಕ ಜನರ ವಿಶ್ವಾಸವನ್ನು ಮರುಸ್ಥಾಪಿಸಬೇಕಾದ ಹೊಣೆ ಇದೀಗ ಪೊಲೀಸ್ ಇಲಾಖೆಯ ಮೇಲಿದೆ.

ಒಟ್ಟಾರೆ, ದೊಡ್ಡಬಳ್ಳಾಪುರದಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳು ಜನರ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿದ್ದು, ಕಳ್ಳರ ಅಟ್ಟಹಾಸಕ್ಕೆ ಕಡಿವಾಣ ಹಾಕುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಕಳವು ಘಟನೆ ನಡೆದ ತಕ್ಷಣವೇ ಸಾರ್ವಜನಿಕರು ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು. ದೂರು ದಾಖಲಾಗಿದರೆ ಕಳ್ಳರ ಪತ್ತೆ ಕಾರ್ಯವನ್ನು ತ್ವರಿತಗೊಳಿಸಲು ಸಹಕಾರಿಯಾಗುತ್ತದೆ. ಸರಗಳ್ಳತನ ಸೇರಿದಂತೆ ವಿವಿಧ ಕಳವು ಪ್ರಕರಣಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಸಬ್ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದ್ದು, ತಂಡ ಈಗಾಗಲೇ ಕಾರ್ಯಾಚರಣೆಯಲ್ಲಿ ತೊಡಗಿದೆ. ಇತ್ತೀಚೆಗೆ ಕೊಳವೆಬಾವಿಗಳ ಪಂಪ್‌, ಮೋಟರ್ ಹಾಗೂ ಕೇಬಲ್ ಕಳವು ಪ್ರಕರಣಗಳ ಆರೋಪಿಗಳನ್ನು ಪತ್ತೆಹಚ್ಚಲಾಗಿದೆ. ಕಳವು ಪ್ರಕರಣಗಳು ಮರುಕಳಿಸದಂತೆ ದೊಡ್ಡಬಳ್ಳಾಪುರ ವಿಭಾಗದ ವ್ಯಾಪ್ತಿಯ ಎಲ್ಲಾ ಪೊಲೀಸ್ ಠಾಣೆಗಳ ಇನ್ಸ್‌ಪೆಕ್ಟರ್‌ಗಳಿಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗುವುದು ಎಂದು ದೊಡ್ಡಬಳ್ಳಾಪುರ ಉಪವಿಭಾಗದ ಡಿವೈಎಸ್ ಪಿ ಪಾಂಡುರಂಗ ಎಸ್ ತಿಳಿಸಿದ್ದಾರೆ.

ಹಗಲಿರುಳು ದುಡಿದು ಜೀವನ ಸಾಗಿಸುವ ಬಡ ಹಾಗೂ ಬೀದಿಬದಿ ವ್ಯಾಪಾರಿಗಳು, ಮಧ್ಯಮ ವರ್ಗದ ಜನರನ್ನೇ ಗುರಿಯಾಗಿಸಿಕೊಂಡು ಕಳ್ಳತನಗಳು ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಕಳ್ಳತನ ಇದೀಗ ಹೈಟೆಕ್ ದಂಧೆಯ ರೂಪ ಪಡೆದುಕೊಂಡಿದ್ದು, ಸಂಘಟಿತ ಗ್ಯಾಂಗ್‌ಗಳು ಕಾರು ಹಾಗೂ ಬೈಕ್‌ಗಳಲ್ಲಿ ಬಂದು ಕ್ಷಣಾರ್ಧದಲ್ಲಿ ಕೃತ್ಯ ಎಸಗಿ ಪರಾರಿಯಾಗುತ್ತಿವೆ. ಸಾರ್ವಜನಿಕರ ಭದ್ರತೆಗಾಗಿ ಪ್ರಮುಖ ರಸ್ತೆ, ಜಂಕ್ಷನ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಜೊತೆಗೆ ಕಳ್ಳತನ ಹಾಗೂ ಇತರ ಅಪರಾಧಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಎಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಪ್ರೇರೇಪಿಸುವುದು ಅಗತ್ಯವಾಗಿದೆ ಎಂದು ಪತ್ರಕರ್ತ ಕೊತ್ತೂರಪ್ಪ ಹೇಳಿದ್ದಾರೆ.

Ramesh Babu

Journalist

Recent Posts

ಅಪರೂಪದ ದುಬಾರಿ ಖಾಯಿಲೆಗಳು…….

ಇದಕ್ಕೊಂದು ಪರಿಹಾರ ರೂಪಿಸಬಹುದೇ...... ಅಪರೂಪದ ದುಬಾರಿ ಖಾಯಿಲೆಗಳು.......... ಆಗಾಗ ಬದುಕು ಬಟ್ಟೆ ಒಗೆಯುವಂತೆ ಎತ್ತೆತ್ತಿ ಒಗೆಯುತ್ತದೆ. ಅನಿರೀಕ್ಷಿತಗಳು ಸಂಭವಿಸಿ ತುಂಬಾ…

13 hours ago

ಮತದಾರರ ಪಟ್ಟಿ ಪರಿಷ್ಕರಣೆ ಚುರುಕು: 7.96 ಲಕ್ಷ ಮತದಾರರ ಹೆಸರು ಅಂತಿಮ ಹಂತಕ್ಕೆ

ಬೆಂಗಳೂರು ಗ್ರಾಮಾಂತರ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದಂತೆ ಸೋಮವಾರ ಕರಡು ಮತದಾರರ ಪಟ್ಟಿ ಪ್ರಕಟವಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ…

1 day ago

ಕ್ರೀಡಾ ಪ್ರತಿಭೆಗಳ ಅನಾವರಣಕ್ಕೆ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಹೊಸ ವೇದಿಕೆ ಒಂದೇ ಆವರಣದಲ್ಲಿ ಬಾಕ್ಸಿಂಗ್, ಕುಸ್ತಿ, ಜೂಡೋ, ಕಬ್ಬಡಿ, ಬ್ಯಾಡ್ಮಿಂಟನ್, ಸ್ಕೇಟಿಂಗ್ ಸೌಲಭ್ಯ

ದೊಡ್ಡಬಳ್ಳಾಪುರ: ವಿದ್ಯಾರ್ಥಿಗಳಲ್ಲಿ ಕ್ರೀಡಾ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಉತ್ತಮ ತರಬೇತಿ ಹಾಗೂ ಅವಕಾಶ ಕಲ್ಪಿಸುವ ಉದ್ದೇಶದಿಂದ ನಗರದ ನ್ಯಾಷನಲ್ ಪ್ರೈಡ್…

2 days ago

ಶಾಲೆ ಬಿಟ್ಟ ಮಕ್ಕಳ ಪತ್ತೆಗೆ ಅಭಿಯಾನ: ವಲಸೆ ಕಾರ್ಮಿಕರ ಮಕ್ಕಳನ್ನು ಶಾಲೆಗೆ ಕರೆತರಲು ಕ್ರಮ

  ಪ್ರತಿಯೊಂದು ಮಗುವಿಗೂ ಶಿಕ್ಷಣ ದೊರೆಯಬೇಕು ಎಂಬ ಸರ್ಕಾರದ ಆಶಯದ ನಡುವೆಯೂ ನಾನಾ ಕಾರಣಗಳಿಂದ ಶಾಲೆಯಿಂದ ಹೊರಗುಳಿದಿರುವ ಹಾಗೂ ಶಾಲೆಗೆ…

2 days ago

ಪಾಕಿಸ್ತಾನಿ ಗ್ಯಾಂಗ್‌ ಜೊತೆ ಸಂಪರ್ಕ ಆರೋಪ: ದೊಡ್ಡಬಳ್ಳಾಪುರದಲ್ಲಿ ವ್ಯಕ್ತಿ ಬಂಧನ

ದೊಡ್ಡಬಳ್ಳಾಪುರ: ಪಾಕಿಸ್ತಾನಿ ಗ್ಯಾಂಗ್‌ಸ್ಟರ್‌ಗಳೊಂದಿಗೆ ಇನ್‌ಸ್ಟಾಗ್ರಾಂ ಮೂಲಕ ಸಂಪರ್ಕದಲ್ಲಿದ್ದ ಆರೋಪದ ಮೇರೆಗೆ ದೊಡ್ಡಬಳ್ಳಾಪುರ ನಗರ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ದೊಡ್ಡಬಳ್ಳಾಪುರ ನಗರದ…

3 days ago

ದೊಡ್ಡಬಳ್ಳಾಪುರದಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ

ದೊಡ್ಡಬಳ್ಳಾಪುರ: ಶ್ರಾವಣ ಮಾಸದ ಶುಭ ಸಂದರ್ಭದಲ್ಲಿ ಆಚರಿಸಲಾಗುವ ವರಮಹಾಲಕ್ಷ್ಮಿ ಹಬ್ಬವನ್ನು ದೊಡ್ಡಬಳ್ಳಾಪುರ ತಾಲ್ಲೂಕಿನಾದ್ಯಂತ ಶುಕ್ರವಾರ ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.…

4 days ago