ದೊಡ್ಡಬಳ್ಳಾಪುರದಲ್ಲಿ ಸ್ಯಾಟಲೈಟ್ ಟೌನ್ ರಿಂಗ್ ರೋಡ್ ತೆರೆದ ನಂತರ ಕಳೆದ 1 ವರ್ಷದಲ್ಲಿ ಹೆಚ್ಚು ಅಪಘಾತಗಳು ಸಂಭವಿಸಿದ್ದು, ಈವರೆಗೂ ದೊಡ್ಡಬಳ್ಳಾಪುರದಲ್ಲಿ ಯಾವುದೇ ಟ್ರಾಫಿಕ್ ಪೊಲೀಸ್ ಠಾಣೆ ಇಲ್ಲದೇ ಇರುವುದು ಹಾಗೂ ಈ ಕುರಿತು ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿದೆ ಎಂದು “ಪಬ್ಲಿಕ್ ಮಿರ್ಚಿ ನ್ಯೂಸ್ ವೆಬ್ ಸೈಟ್” ವರದಿ ಮಾಡಿತ್ತು. ಈ ವರದಿ ಹಿನ್ನೆಲೆ ಸಮಸ್ಯೆಯನ್ನು ಮನಗಂಡ ಶಾಸಕ ಧೀರಜ್ ಮುನಿರಾಜ್ ಅವರು ಸದನದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಗಮನ ಸೆಳೆದರು.
ಇದೇ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರೂ ಕೂಡ ದೊಡ್ಡಬಳ್ಳಾಪುರಕ್ಕೆ ಟ್ರಾಫಿಕ್ ಪೊಲೀಸ್ ಠಾಣೆ ಅಗತ್ಯತೆ ಹಾಗೂ ಇದಕ್ಕೆ ಬೇಕಾದ ಅಗತ್ಯ ಕ್ರಮವನ್ನು ಕೈಗೊಳ್ಳುವಂತೆ ಗೃಹ ಸಚಿವರ ಗಮನಕ್ಕೆ ತಂದರು.
ಸದನದಲ್ಲಿ ಶಾಸಕ ಧೀರಜ್ ಮುನಿರಾಜ್ ಮಾತುಗಳು, ದೊಡ್ಡಬಳ್ಳಾಪುರ ತಾಲೂಕು ಬೆಂಗಳೂರು ನಗರಕ್ಕೆ ತೀರ ಹತ್ತಿರವಾಗಿದ್ದು, ದಿನೇ ದಿನೇ ಅಭಿವೃದ್ಧಿ ಹೊಂದುತ್ತಿದೆ. ಎಸ್ ಟಿಆರ್ ಆರ್ ಸ್ಯಾಟಲೈಟ್ ಟೌನ್ ರಿಂಗ್ ರೋಡ್ ದಾಬಸ್ ಪೇಟೆಯಿಂದ ಶುರುವಾಗಿ ದೊಡ್ಡಬಳ್ಳಾಪುರ, ದೇವನಹಳ್ಳಿ ಮೂಲಕ ಹೊಸಕೋಟೆ ತಲುಪುತ್ತದೆ.
ಅದೇರೀತಿ ಹಿಂದೂಪುರ-ಯಲಹಂಕ ರಾಜ್ಯ ಹೆದ್ದಾರಿ ಕೂಡ ದೊಡ್ಡಬಳ್ಳಾಪುರದಿಂದ ಹಾದು ಹೋಗುತ್ತದೆ. ಹೊಸಕೋಟೆ-ದಾಬಸ್ ಪೇಟೆ ಹೆದ್ದಾರಿ ಕಳೆದ ವರ್ಷ ಉದ್ಘಾಟನೆ ಮಾಡಲಾಗಿದೆ. ಒಂದು ವರ್ಷದಲ್ಲಿ ಹಲವಾರು ಅಪಘಾತಗಳು ಸಂಭವಿಸಿ ಅನೇಕ ಸಾವು ನೋವುಗಳಾಗಿವೆ. ಕಳೆದ ಮೂರು ತಿಂಗಳಿಂದ ಸುಮಾರು 50ಕ್ಕೂ ಹೆಚ್ಚು ಜನ ಅಪಘಾತಗಳಿಂದ ಸಾವನ್ನಪ್ಪಿದ್ದಾರೆ. ಕಳೆದ ವರ್ಷ(2024) 101 ಜನ ಸಾವನ್ನಪ್ಪಿದ್ದು, 267 ಮಂದಿ ಗಾಯಗೊಂಡಿದ್ದಾರೆ. ಹೆಚ್ಚುತ್ತಿರುವ ಅಪಘಾತಗಳ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ದೇವನಹಳ್ಳಿ, ನೆಲಮಂಗಲ ತಾಲೂಕುಗಳಲ್ಲಿ ಟ್ರಾಫಿಕ್ ಪೊಲೀಸ್ ಠಾಣೆಗಳು ಇವೆ. ಆದರೆ ದೊಡ್ಡಬಳ್ಳಾಪುರದಲ್ಲಿ ಟ್ರಾಫಿಕ್ ಪೊಲೀಸ್ ಠಾಣೆ ಇಲ್ಲ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿಯಾಗಿ ದೊಡ್ಡಬಳ್ಳಾಪುರಕ್ಕೆ ಟ್ರಾಫಿಕ್ ಪೊಲೀಸ್ ಠಾಣೆ ಬೇಕೆಂದು ಮನವಿ ಮಾಡಲಾಗಿತ್ತು. 2011ನೇ ಸಾಲಿನಿಂದ ಇದುವರೆಗೂ ಜನಸಂಖ್ಯೆಗೆ ಅನುಗುಣವಾಗಿ ಪೊಲೀಸ್ ಸಿಬ್ಬಂದಿ ಇಲ್ಲ. ತಾಲೂಕಿನಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಟೋಲ್ ಹೆದ್ದಾರಿಗಳು ಹಾದುಹೋಗುತ್ತವೆ. ಟೋಲ್ ನವರು ಆಂಬುಲೆನ್ಸ್ ನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುತ್ತಿಲ್ಲ. ಕ್ರಿಟಿಕಲ್ ಕೇರ್ ಸೆಂಟರ್, ಟ್ರಾಮಾ ಕೇರ್ ಸೆಂಟರ್ ಇಲ್ಲ. ದೊಡ್ಡಬಳ್ಳಾಪುರದಲ್ಲಿ ಒಂದು ರೋಡು ಒನ್ ವೇ ಇಲ್ಲ, ಒಂದೇ ಒಂದು ಟ್ರಾಫಿಕ್ ಲೈಟ್ ಇಲ್ಲ ಎಂದು ಸಚಿವರ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ದಾಬಸ್ ಪೇಟೆ- ಹೊಸಕೋಟೆ ಹೆದ್ದಾರಿಯಲ್ಲಿ ಯಾವುದೇ ಹಂಪ್, ಟ್ರಾಫಿಕ್ ಸಿಗ್ನಲ್ ದೀಪಗಳಿಲ್ಲ, ಟ್ರಾಫಿಕ್ ಗೆ ಸಂಬಂಧಿಸಿದ ಯಾವುದೇ ಕ್ರಮಗಳನ್ನು ಹೆದ್ದಾರಿ ಮಾಡುವವರು ಕೈಗೊಂಡಿಲ್ಲ. ಇದು ನಮ್ಮ ಗಮನಕ್ಕೆ ಬಂದಿದೆ. ಈ ಹಿನ್ನೆಲೆ ಹೆದ್ದಾರಿಯಲ್ಲಿ ಅಪಘಾತಗಳು, ಟ್ರಾಫಿಕ್ ತಡೆಗಟ್ಟಲು ಬ್ಲಾಕ್ ಸ್ಪಾಟ್ ಗುರುತಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.
ಟ್ರಾಫಿಕ್ ಪೊಲೀಸ್ ಠಾಣೆ ಮಾಡುಕೊಡುತ್ತೇವೆ ಎಂದು ಹೇಳಿದ್ದೇವೆ. ಈಗಲು ಸಹ ಹೇಳುತ್ತಿದ್ದೇನೆ ಅತೀ ಶೀಘ್ರವಾಗಿ ದೊಡ್ಡಬಳ್ಳಾಪುರಕ್ಕೆ ಸಂಚಾರಿ ಪೊಲೀಸ್ ಠಾಣೆ ಮಾಡಿಕೊಡಲಾಗುವುದು ಎಂದು ಭರವಸೆ ನೀಡುತ್ತೇನೆ. ಇದರ ಬಗ್ಗೆ ಪ್ರಸ್ತಾವನೆ ನೀಡಲು ತಿಳಿಸಿದ್ದೇವೆ ಎಂದರು.