
ಇಂದು ಒಂದೇ ದಿನ ತಾಲೂಕಿನ ದೊಡ್ಡತುಮಕೂರು, ಮಜರಾಹೊಸಹಳ್ಳಿ ಸೇರಿದಂತೆ ವಿವಿಧ ಗ್ರಾಮಪಂಚಾಯಿತಿಗಳಿಗೆ ಉಪಲೋಕಾಯುಕ್ತ ಬಿ.ವೀರಪ್ಪ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.
ಗ್ರಾಮಪಂಚಾಯಿತಿಗಳ ದುರಾಡಳಿತ ಬಗ್ಗೆ ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ಗ್ರಾಮ ಪಂಚಾಯಿತಿಗಳಿಗೆ ಖುದ್ದು ಉಪಲೋಕಾಯುಕ್ತ ಬಿ.ವೀರಪ್ಪ ಅವರು ಭೇಟಿ ನೀಡಿ ದಾಖಲೆಗಳನ್ನು ಪರಿಶೀಲನೆ ನಡೆಸಿದರು.

ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಪರಿಶೀಲನೆ ನಡೆಸಿ ಮತ್ತೊಂದು ಪಂಚಾಯಿತಿಗೆ ತೆರಳುತ್ತಿದ್ದಾಗ ಶಾಲಾ ಬಸ್ಸಿನಲ್ಲಿ ಮಕ್ಕಳನ್ನು ಕಂಡು ಕೂಡಲೇ ಶಾಲಾ ಬಸ್ ನಿಲ್ಲಿಸಿ ಕೆಲಕಾಲ ಮಕ್ಕಳ ಬಳಿ ಸಂವಾದ ನಡೆಸಿದರು.
ನಾನು ಉಪಲೋಕಾಯುಕ್ತ ಬಿ.ವೀರಪ್ಪ ಎಂದು ಮಕ್ಕಳಿಗೆ ಪರಿಚಯ ಮಾಡಿಕೊಂಡ ಅವರು, ಚೆನ್ನಾಗಿ ಓದಿ ತಂದೆ-ತಾಯಿ, ಶಿಕ್ಷಕರು, ಊರು, ರಾಜ್ಯ, ದೇಶಕ್ಕೆ ಒಳ್ಳೆ ಹೆಸರನ್ನು ತಂದುಕೊಡಬೇಕು. ಮಹಾತ್ಮ ಗಾಂಧಿ, ಅಂಬೇಡ್ಕರ್, ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ಸೇರಿದಂತೆ ಇತರೆ ಮಹನೀಯರ ಮಾರ್ಗದಲ್ಲಿ ಸಾಗುವಂತೆ ಸಲಹೆ ನೀಡಿದರು. ಅನ್ಯಾಯ, ಭ್ರಷ್ಟಾಚಾರ, ಅಪರಾಧಗಳಿಂದ ದೂರ ಇರುವಂತೆ ಸೂಚನೆ ನೀಡಿದರು.
ಯಾವುದೇ ರೀತಿ ಸಮಸ್ಯೆ ಆದಲ್ಲಿ ನಮಗೆ ದೂರು ನೀಡುವಂತೆ ಉಪಲೋಕಾಯುಕ್ತ ಕಚೇರಿ ಮೊಬೈಲ್ ಸಂಖ್ಯೆ ನೀಡಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೊಡ್ಡತುಮಕೂರು ಗ್ರಾಮಪಂಚಾಯಿತಿಯಲ್ಲಿ ಕನ್ಸ್ಟಕ್ಷನ್ ಗೆ ಸಂಬಂಧಪಟ್ಟ ಲೆಟರ್ ಹೆಡ್ ಗಳು ಖಾಲಿ ಖಾಲಿ ಆಗಿವೆ. ಅನುಗ್ರಹ ಕೆಮಿಕಲ್ ಫ್ಯಾಕ್ಟರಿಯಿಂದ ಮಳೆಗಾಲದಲ್ಲಿ ರೈತರಿಗೆ ಭಾರಿ ತೊಂದರೆ ಆಗುತ್ತಿರುವ ದೂರು ಕೇಳಿಬಂದಿದೆ. ಯಾರೂ ಕೂಡ ಹಣ ಕೊಟ್ಟು ವೋಟ್ ಹಾಕಬಾರದು, ಒಂದು ವೇಳೆ ತಮ್ಮ ವೋಟ್ ನ್ನು ಹಣಕ್ಕೆ ಮಾರಿಕೊಂಡರೆ ಭ್ರಷ್ಟ ಅಧಿಕಾರಿಗಳು, ಭ್ರಷ್ಟ ರಾಜಕಾರಣಿಗಳು ಹುಟ್ಟುಕೊಳ್ಳುತ್ತಾರೆ. ಆದ್ದರಿಂದ ಜನ ಎಚ್ಚೆತ್ತುಕೊಳ್ಳಬೇಕು. ಭ್ರಷ್ಟಾಚಾರ ನಿರ್ಮೂಲನೆ ಆಗಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡಬೇಕು ಎಂದರು.
ಆ.3ರಂದು ದೊಡ್ಡಬಳ್ಳಾಪುರ ತಾಲೂಕು ಕಚೇರಿ, ಹಾಸ್ಟೆಲ್ ಗಳು, ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಶೌಚಾಲಯಗಳಿಗೆ ಬಾಗಿಲುಗಳು ಇಲ್ಲದೆ ಇರುವುದು, ಹಾಸ್ಟೆಲ್ ಮಕ್ಕಳಿಗೆ ಬಿಸಿನೀರಿನ ವ್ಯವಸ್ಥೆ ಇಲ್ಲದೇ ಇರುವುದು ಕಂಡುಬಂದಿತ್ತು. ಆದ್ದರಿಂದ ಇವುಗಳ ಮೇಲೆ ದೂರು ದಾಖಲು ದಾಖಲಿಸಿದ್ದೇವೆ. 20 ದಿನದೊಳಗಾಗಿ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದ್ದೇವೆ ಎಂದರು.