ದೊಡ್ಡಬಳ್ಳಾಪುರ: ತಾಲೂಕಿನ ದೊಡ್ಡತುಮಕೂರು, ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ಕಾಡನೂರು ಬಳಿ 10 ಕೊಳವೆ ಬಾವಿಗಳನ್ನು ಕೊರೆಸಿದ್ದು, ತ್ವರಿತವಾಗಿ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಧೀರಜ್ ಮುನಿರಾಜ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ದೊಡ್ಡತುಮಕೂರು ಗ್ರಾಮದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು, ಕೈಗಾರಿಕಾ ಹಾಗೂ ನಗರಸಭೆ ತ್ಯಾಜ್ಯ ನೀರಿನಿಂದ ಪಂಚಾಯಿತಿ ವ್ಯಾಪ್ತಿಯ ಕೆರೆಗಳು ಕಲುಷಿತವಾಗಿದ್ದು, ಕುಡಿಯುವ ನೀರಿಗಾಗಿ ತತ್ವಾರ ಎದುರಾಗಿದೆ ಇದನ್ನ ಮನಗಂಡ ಜಿಲ್ಲಾಡಳಿತ ಕಾಡನೂರು ಬಳಿ ಹತ್ತು ಕೊಳವೆ ಬಾವಿಗಳನ್ನು ಕೊರೆಸಿದ್ದು, ಪೈಪ್ ಲೈನ್ ಕಾಮಗಾರಿ ಪೂರ್ಣವಾಗಿದೆ. ಟ್ಯಾಂಕ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಸಂಬಂಧಪಟ್ಟ ಇಲಾಖಾಧಿಕಾರಿಗಳು ತ್ವರಿತವಾಗಿ ಕಾಮಗಾರಿ ಮುಗಿಸಿ ಕುಡಿಯುವ ನೀರನ್ನು ಪೂರೈಸಬೇಕು, ಜೊತೆಗೆ, ತ್ಯಾಜ್ಯ ನೀರು ಶುದ್ಧೀಕರಣ ಘಟಕದ ಕಾಮಗಾರಿಗೆ ಅಡ್ಡಿ ಇರುವ ಸಮಸ್ಯೆಗಳನ್ನು ಬಗೆಹರಿಸಿ ಕಾರ್ಯಾರಂಭವಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಈ ವೇಳೆ ಅರ್ಕಾವತಿ ನದಿ ಪಾತ್ರದ ಕೆರೆ ಸಂರಕ್ಷಣಾ ಹೋರಾಟ ಸಮಿತಿ ಮುಖಂಡರು, ಅಧಿಕಾರಿಗಳ ನಿರ್ಲಕ್ಷ್ಯ ಕುರಿತು ಶಾಸಕರ ಗಮನ ಸೆಳೆದರು. ಈ ವೇಳೆ ಗ್ರಾಮ ಸಭೆಗೆ ಗೈರಾದ ಅಧಿಕಾರಿಗಳನ್ನು ಶಾಸಕರು ತರಾಟೆಗೆ ತೆಗೆದುಕೊಂಡು ನೋಟಿಸ್ ನೀಡುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಸೂಚಿಸಿದರು.
ಗ್ರಾಮ ಸಭೆಯಲ್ಲಿ ಭಾಗವಹಿಸಬೇಕಾಗಿದ್ದ ವಿವಿಧ ಇಲಾಖೆಗಳ 25 ಅಧಿಕಾರಿಗಳ ಬದಲಿಗೆ 13 ಮಂದಿ ಮಾತ್ರ ಹಾಜರಿದ್ದರು.
ಈ ವೇಳೆ ಗ್ರಾ.ಪಂ ಅಧ್ಯಕ್ಷೆ ಸರೋಜಾ ವಿ.ಮಂಜುನಾಥ್, ಗ್ರಾ ಪಂ ಮಾಜಿ ಅಧ್ಯಕ್ಷ ಟಿ.ಜಿ.ಮಂಜುನಾಥ್, ಉಪಾಧ್ಯಕ್ಷೆ ಸವಿತಾ ವಿ.ರವಿಕುಮಾರ್, ಕಾಡನೂರು ಗ್ರಾ.ಪಂ ಅಧ್ಯಕ್ಷ ಮನು, ಮುಖಂಡರಾದ ಮಂಜುನಾಥ್, ನಾಗರಾಜ್ ಬಾಬು, ನರಸಿಂಹರಾಜು, ಶಿವಕುಮಾರ್, ನಾಗರಾಜ್, ಸದಸ್ಯರಾದ ಟಿ.ಪಿ.ಲೋಕೇಶ್, ಲಕ್ಷ್ಮಿದೇವಿ, ಟಿ.ಎನ್.ಚೈತ್ರ, ರಂಗಸ್ವಾಮಯ್ಯ, ಚೈತ್ರ ಎಂ.ಆರ್ , ಸಿ.ವೀರೇಗೌಡ, ಮಂಜುಳಾ, ಮುನಿರಾಜು ಎಂ, ಮರೀಗೌಡ, ವರಲಕ್ಷ್ಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.