ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ನವಾ ಶೇವಾದಿಂದ ಮುಂಬೈನ ಸರ್ವಿ ಪ್ರದೇಶವನ್ನು ಸಂಪರ್ಕಿಸುವ ಅತಿ ಉದ್ದವಾದ ಸಮುದ್ರ ಸೇತುವೆಯನ್ನು ಪ್ರಧಾನಿ ಮೋದಿ ಅವರು ಇಂದು ಲೋಕಾರ್ಪಣೆ ಮಾಡಿದ್ದಾರೆ.
ಬರೋಬ್ಬರಿ 21.8 ಕಿ. ಮೀ. ಉದ್ದದ ಸೇತುವೆ ಇದಾಗಿದ್ದು, ಸಮುದ್ರದ ಎರಡು ತೀರಗಳ ನಡುವೆ ಸಂಪರ್ಕ ಕಲ್ಪಿಸಲಾಗಿದೆ. ಮುಂಬೈ ಮಹಾ ನಗರದ ಸಂಚಾರದ ಒತ್ತಡ ಕಡಿಮೆ ಮಾಡುಲು ಈ ಸೇತುವೆಯನ್ನ ನಿರ್ಮಾಣ ಮಾಡಲಾಗಿದೆ.
ಸೇತುವೆಯನ್ನು ಅಟಲ್ ಸೇತು ಎಂದೂ ಕರೆಯಲು ತೀರ್ಮಾನಿಸಲಾಗಿದೆ. ರಾಯಗಢ ಜಿಲ್ಲೆಯ ನವಾ ಶೇವಾದಿಂದ ಮುಂಬೈನ ಸರ್ವಿ ಪ್ರದೇಶಕ್ಕೆ ತೆರಳಲು ಈ ಹಿಂದೆ ಸುಮಾರು 2 ಗಂಟೆ ಕಾಲ ಬೇಕಾಗುತ್ತಿತ್ತು. ಆದರೆ, ಇದೀಗ ಹೊಸ ಸೇತುವೆಯಿಂದಾಗಿ ಪ್ರಯಾಣದ ಅವಧಿ 20 ನಿಮಿಷಕ್ಕೆ ಕಡಿತಗೊಂಡಿದೆ.
ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ ಎಂದೇ ಕರೆಯಲಾಗುವ ಈ ಯೋಜನೆಗೆ ಒಟ್ಟು 17,840 ಕೋಟಿ ರೂ. ವೆಚ್ಚವಾಗಿದೆ. ಈ ಸೇತುವೆಯಲ್ಲಿ ಒಟ್ಟು 6 ಲೇನ್‌ನ ರಸ್ತೆ ಮಾರ್ಗವಿದೆ. ಈ ಸೇತುವೆಯು ಸಮುದ್ರದ ಮೇಲೆ 16.5 ಕಿ. ಮೀ ಉದ್ದವಿದೆ. ಈ ಸೇತುವೆಯಿಂದಾಗಿ ಮುಂಬೈ ಹಾಗೂ ನವಿ ಮುಂಬೈ ಮತ್ತಷ್ಟು ಸನಿಹವಾಗಿದೆ.
ಅಟಲ್ ಸೇತುವನ್ನು ಉದ್ಘಾಟಿಸಲು ಸಂತೋಷವಾಗಿದೆ, ಇದು ನಮ್ಮ ನಾಗರಿಕರಿಗೆ ‘ಜೀವನ ಸುಲಭ’ವನ್ನು ಹೆಚ್ಚಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ಈ ಸೇತುವೆಯು ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು ಸಂಪರ್ಕವನ್ನು ಹೆಚ್ಚಿಸುತ್ತದೆ, ದೈನಂದಿನ ಪ್ರಯಾಣವನ್ನು ಸುಗಮಗೊಳಿಸುತ್ತದೆ ಎಂದು ಪ್ರಧಾನಿ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.