ದೇವಸ್ಥಾನದ ಹುಂಡಿ ಕಾಣಿಕೆಗೂ ಡಿಜಿಟಲ್ ವ್ಯವಸ್ಥೆ: ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಇ-ಹುಂಡಿ ವ್ಯವಸ್ಥೆ ಆರಂಭ

ದೇವಸ್ಥಾನದ ಹುಂಡಿ ಕಾಣಿಕೆಗೂ ಡಿಜಿಟಲ್ ವ್ಯವಸ್ಥೆ ಲಗ್ಗೆ ಇಟ್ಟಿದ್ದು, ಇದೀಗ ದೊಡ್ಡಬಳ್ಳಾಪುರ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಇ-ಹುಂಡಿ ವ್ಯವಸ್ಥೆಯನ್ನ ಆರಂಭಿಸಲಾಗಿದೆ.

ಮುಜರಾಯಿ ಇಲಾಖೆ, ಇಂಡಿಯನ್ ಓವರ್ ಸೀಸ್ ಬ್ಯಾಂಕ್(ಐಒಬಿ) ಸಹಯೋಗದಲ್ಲಿ ಈ ವ್ಯವಸ್ಥೆ ಕಲ್ಪಿಸಲಾಗಿದೆ. ಗೂಗಲ್ ಪೇ, ಫೋನ್ ಪೇ, ಬೀಮ್, ಪೇಟಿಎಂ ಸೇರಿದಂತೆ ಯಾವುದೇ UPI ಆ್ಯಪ್‌ನಿಂದ ಭಕ್ತರು ಕಾಣಿಕೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಕ್ಯೂಆರ್ ಕೋಡ್ ಅಳವಡಿಕೆ ಮಾಡಲಾಗಿದ್ದು, ಸ್ಕ್ಯಾನ್ ಮಾಡಿ ಕಾಣಿಕೆ ಅರ್ಪಿಸಲು ಅವಕಾಶ ನೀಡಲಾಗಿದೆ. ಮುಜರಾಯಿ ಇಲಾಖೆ ಅಧೀನದ ರಾಜ್ಯದ ಎಲ್ಲ ಎ ಗ್ರೇಡ್ ದೇವಾಲಯಗಳಲ್ಲೂ ಇ- ಹುಂಡಿ ಜಾರಿ ಮಾಡಲಾಗುತ್ತಿದೆ.

ಈ ಕುರಿತು ದೇವಸ್ಥಾನದ ಆಡಳಿತಾಧಿಕಾರಿ ನಾರಾಯಣಸ್ವಾಮಿ ಪ್ರತಿಕ್ರಿಯಿಸಿ, ಭಕ್ತಾಧಿಗಳ ಅನುಕೂಲಕ್ಕಾಗಿ ಇ-ಹುಂಡಿ ಅಳವಡಿಸಲಾಗಿದೆ. ಇ-ಹುಂಡಿಗೆ ಸಂಪೂರ್ಣ ಭದ್ರತೆ ವಹಿಸಲಾಗಿದೆ. ಭಕ್ತರು ಈ ಸೇವೆಯ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಇದರ ಭದ್ರತಾ ಕ್ರಮಗಳ ಬಗ್ಗೆ, ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ಷ್ಮ ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿದೆ. ಡಿಜಿಟಲ್ ಸೌಲಭ್ಯದಿಂದ ದೇಗುಲಕ್ಕೆ ಮತ್ತಷ್ಟು ದೇಣಿಗೆ ಹರಿದು ಬರುವ ಸಾಧ್ಯತೆ ಇದೆ ಎಂದರು.

ಭಕ್ತರು ತಮ್ಮ ಹರಕೆಯ ಹಣವನ್ನು ದೇವರ ಹುಂಡಿ ಬದಲು ಜೇಬಿನಲ್ಲಿ ಹಣ ಇಲ್ಲದಿದ್ದರೂ ಸುಲಭವಾಗಿ ತಮ್ಮ ಮೊಬೈಲ್ ಮೂಲಕ ದೇವಾಲಯದ ಖಾತೆಗೆ ವರ್ಗಾಯಿಸುವ ಮೂಲಕ ತಮ್ಮ ಹರಕೆಯನ್ನು ತೀರಿಸಿದಂತಾಗುತ್ತದೆ ಎಂದು ಹೇಳಿದರು.

ಈ ವೇಳೆ ಇಂಡಿಯನ್ ಓವರ್ ಸೀಸ್ ಬ್ಯಾಂಕ್(ಐಒಬಿ) ಮುಖ್ಯ ಪ್ರಾದೇಶಿಕ ವ್ಯವಸ್ಥಾಪಕ ಉಮೇಶ್‌ ಕುಮಾರ್ ಸಿಂಗ್, ಅರ್ಜಿತ್ ದಾಸ್ ಹಾಗೂ ದೇವಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!