ದೆಹಲಿಯತ್ತ ಹೊರಟಿರುವ ರೈತರ ಮೇಲಿನ ದಬ್ಬಾಳಿಕೆ ನಿಲ್ಲಬೇಕು. ಮೃತಪಟ್ಟಿರುವ ರೈತ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರಕ್ಕಾಗಿ ಹಾಗೂ ನ್ಯಾಯಯುತ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಬಗೆಹರಿಸಬೇಕೆಂದು ರಾಜ್ಯ ಹೆದ್ದಾರಿ ಹಂಚಾಳ ಗೇಟ್ ಮುಳ್ಳು ಕಂಬಿಗಳ ಸಮೇತ ಬಂದ್ ಮಾಡಲು ಅರಣ್ಯ ಉದ್ಯಾನವನದಲ್ಲಿ ಕರೆದಿದ್ದ ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದಲ್ಲಿರುವ ಪ್ರಜ್ಞಾವಂತ ರಾಜಕಾರಣಿಗಳೇ ಪ್ರಜಾಪ್ರಭುತ್ವದಲ್ಲಿ ರೈತರು ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ದೆಹಲಿ ಕಡೆ ಬರಬಾರದೆ? ರೈತರೇನೂ ದೇಶದ್ರೋಹಿಗಳೇ, ಎಲ್ಲಾ ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡುವ ಮೂಲಕ ರೈತರ ಮೇಲೆ ನಡೆಯುತ್ತಿರುವ ದೌರ್ಜನ್ಯ ದಬ್ಬಾಳಿಕೆ ಪ್ರಜಾಪ್ರಭುತ್ವದ ಮೇಲೆ ನಡೆಯುತ್ತಿರುವ ಹಿಟ್ಲರ್ ಧೋರಣೆ ಅಲ್ಲವೇ ಎಂದು ರೈತ ಸಂಘದ ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್ ರೈತ ವಿರೋದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಕ್ಷೇತ್ರದಲ್ಲಿ ಶೇ.60 ರಷ್ಟು ಉದ್ಯೋಗ ಸೃಷ್ಠಿ ಮಾಡುವ ರೈತರಿಗೆ ಯಾವುದೇ ವೇತನವಿಲ್ಲ, ಪಿಂಚಣಿ ಇಲ್ಲ, 135 ಕೋಟಿ ಜನರ ಹೊಟ್ಟೆ ತುಂಬಿಸಲು 24 ಗಂಟೆ ದುಡಿದು ಬೆವರು ಸುರಿಸುವ ಅನ್ನದಾತನ ಬೆವರಿಗೆ ತಕ್ಕ ಬೆಲೆ ನೀಡಬೇಕಾದ ಜವಬ್ಧಾರಿ ಸರ್ಕಾರಗಳ ಮೇಲಿದೆ, ಆ ಜವಬ್ಧಾರಿಯನ್ನು ಮರೆತು ಅನ್ನದ ಬೆಲೆ ಗೊತ್ತಿಲ್ಲದ ಅವಿವೇಕಿಗಳಂತೆ ರೈತರ ಮೇಲಿನ ದೌರ್ಜನ್ಯ ನಿಲ್ಲದೇ ಇದ್ದರೆ ರೈತರಿಂದಲೇ 3ನೇ ಮಹಾಯುದ್ದ ಕೃಷಿ ಕ್ಷೇತ್ರ ಉಳಿವಿಗಾಗಿ ಪ್ರಾರಂಭವಾಗುವ ಕಾಲ ದೂರವಿಲ್ಲ ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಹಸಿರು ಕ್ರಾಂತಿಯ ಹರಿಕಾರ ಡಾ.ಎಂ.ಎಸ್ ಸ್ವಾಮೀನಾಥನ್ ವರದಿಯಂತೆ ಕೈಗಾರಿಕಾ ವಲಯಕ್ಕೆ ಆದ್ಯತೆ ನೀಡಿದಂತೆ ಕೃಷಿ ವಲಯಕ್ಕೂ ಆದ್ಯತೆ ನೀಡಬೇಕು. ಭೂಮಿ, ಕೃಷಿ ಪರಿಕರ, ಬಿತ್ತನೆ ಬೀಜ , ಗೊಬ್ಬರ, ಉಳುವೆ ಎಲ್ಲಕ್ಕೂ ಹೂಡಿದ ಬಂಡವಾಳ ಹಾಗೂ ಪಟ್ಟ ಶ್ರಮ ಎಲ್ಲವನ್ನು ಪರಿಗಣಿಸಿ ಅವರ ಒಟ್ಟು ಹೂಡಿಕೆಯಲ್ಲಿ ಶೇ.50 ರಷ್ಟು ಆದಾಯ ಬಂದರೆ ದೇಶದಲ್ಲಿ ಹಸಿರು ಕ್ರಾಂತಿ ಆಗುತ್ತದೆ. ಜೊತೆಗೆ 2020 ರಲ್ಲಿ ದಾಖಲಿಸಿದ ರೈತರ ಮೇಲೆ ಪ್ರಕರಣಗಳು ವಾಪಸ್ ಪಡೆಯಬೇಕು ರೈತ ವಿರೋಧಿ ಕಾಯ್ದೆಗಳು ವಾಪಸ್ ಆಗಬೇಕು, ರೈತರಿಗೆ ಪಿಂಚಣಿ ಸೇರಿದಂತೆ ವಿವಿದ ಬೇಡಿಕೆಗಳನ್ನು ಸರ್ಕಾರ ನ್ಯಾಯಯುತವಾಗಿ ಈಡೇರಿಸಬೇಕೆಂದು ಒತ್ತಾಯಿಸಿದರು.
ಸಾಮೂಹಿಕ ನಾಯಕತ್ವದಲ್ಲಿ ರಾಜ್ಯ ರೈತ ಸಂಘ ಕರೆ ಕೊಟ್ಟಿರುವ ಫೆ.27 ರ ಮಂಗಳವಾರ ಗ್ರಾಮೀಣ ರಸ್ತೆ ಬಂದ್ ಹಿನ್ನೆಲೆಯಲ್ಲಿ ರಾಜ್ಯ ಹೆದ್ದಾರಿ ಬಂಗಾರಪೇಟೆ ಹಂಚಾಳ ಗೇಟ್ ಬಂದ್ ಮಾಡುವ ಮೂಲಕ ರೈತರ ಮೇಲಿನ ದೌರ್ಜನ್ಯ ಖಂಡಿಸಿ ಮೃತ ಪಟ್ಟಿರುವ ರೈತ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ವಿತರಣೆ ಮಾಡುವಂತೆ ನ್ಯಾಯಯುತ ಶಾಂತಿಯುತ ಪರಿಹಾರಕ್ಕಾಗಿ ಒತ್ತಾಯ ಮಾಡುವ ತಿರ್ಮಾನ ಸಭೆಯಲ್ಲಿ ಕೈಗೊಳ್ಳಲಾಯಿತು.
ಸಭೆಯಲ್ಲಿ ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಮೂರಾಂಡಹಳ್ಳಿ ಶಿವಾರೆಡ್ಡಿ, ಕದರಿನತ್ತ ಅಪ್ಪೋಜಿರಾವ್, ಕಿರಣ್, ಚಾಂದ್‌ಪಾಷ, ಮುನಿಕೃಷ್ಣ, ಚಂದ್ರಪ್ಪ, ಶೈಲಜ, ರತ್ನಮ್ಮ, ಸುಗುಣ, ಶೋಭ, ಮುನಿಯಮ್ಮ, ಮುಂತಾದವರಿದ್ದರು,