ದೊಡ್ಡಬಳ್ಳಾಪುರ : ಜಮೀನು ವಂಚನೆ ವಿರುದ್ಧ ದೂರು ದಾಖಲಿಸಿದಕ್ಕೆ, ದಲಿತ ಮಹಿಳೆಯರ ಮೇಲೆ ಪೆಟ್ರೋಲ್ ಸುರಿದು ದೌರ್ಜನ್ಯ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಹಿರೇಮುದ್ದೇನಹಳ್ಳಿ ಗ್ರಾಮದ ನರಸಮ್ಮ ಮತ್ತು ಮಮತಾ ಎಂಬ ಮಹಿಳೆಯರ ಮೇಲೆ ದೊಣ್ಣೆ ಮತ್ತು ಮಚ್ಚಿನಿಂದ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಸದ್ಯ ಹಲ್ಲೆಗೊಳಗಾದ ಮಹಿಳೆಯರು ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಲ್ಲೆಗೊಳಗಾದ ನರಸಮ್ಮ ಮತ್ತು ಮಮತಾ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದು, ಇವರಿಗೆ ಹಿರೇಮುದ್ದೇನಹಳ್ಳಿ ಗ್ರಾಮದಲ್ಲಿ ಪಿತ್ರಾರ್ಜಿತವಾಗಿ ಬಂದಿದ್ದ 3 ಎಕರೆ ಜಮೀನು ಇದೆ, 3 ಎಕರೆ ಜಮೀನು ನಂಬಿಕೊಂಡು ಮೂರು ಕುಟುಂಬಗಳ 80ಕ್ಕೂ ಹೆಚ್ಚು ಜನರು ಜೀವನ ಮಾಡುತ್ತಿದ್ದಾರೆ, ಇದೇ ಜಮೀನು ಕಬಳಿಸಲು ಇದೇ ಗ್ರಾಮದ ನರಸೇಗೌಡ, ನರಸಿಂಹಸ್ವಾಮಿ ಮತ್ತು ಲಕ್ಷ್ಮೀಪತಿ ಸಂಚು ನಡೆಸಿದ್ದಾರೆಂಬ ಆರೋಪ ಕೇಳಿಬಂದಿದೆ.
ನರಸೇಗೌಡ ಕುಟುಂಬ ನಮ್ಮ ಕುಟುಂಬಕ್ಕೆ ಸೇರಿದ 3 ಎಕರೆ ಜಮೀನನ್ನು ವಂಚಿಸಿದ್ದಾರೆಂದು ನರಸಮ್ಮ ಅವರ ಪತಿ ಚಿಕ್ಕಪ್ಪ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಡಿಸೆಂಬರ್ 23ರಂದು ಪ್ರಕರಣ ದಾಖಲು ಮಾಡಿದ್ದರು, ಪೊಲೀಸ್ ಠಾಣೆಯಲ್ಲಿ ದೂರು ನೀಡಿದಕ್ಕೆ ಕೆರಳಿದ ನರಸೇಗೌಡ ಕುಟುಂಬ ನನ್ನ ಮತ್ತು ತಂಗಿಯಾದ ಮಮತಾರ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ನರಸಮ್ಮ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಡಿಸೆಂಬರ್ 24ರ ಬೆಳಗ್ಗೆ 10 ಗಂಟೆ ಸಮಯದಲ್ಲಿ ನರಸಮ್ಮ ಮತ್ತು ಮಮತಾ ತಮ್ಮ ಜಮೀನಿಗೆ ಹೋದಾಗ, ನರಸಿಂಹಸ್ವಾಮಿ, ಲಕ್ಷ್ಮೀಪತಿ ಎಂಬುವರು ಟ್ರ್ಯಾಕ್ಟರ್ ಗೆ ಸೌದೆಯನ್ನ ತುಂಬುತ್ತಿದ್ದರು, ನಮ್ಮ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿದಲ್ಲದೆ ತಮಗೆ ಸೇರಿದೆ ಸೌದೆಗಳನ್ನ ಟ್ರ್ಯಾಕ್ಟರ್ ಗೆ ತುಂಬುತ್ತಿರುವ ಬಗ್ಗೆ ನರಸಮ್ಮ ಪ್ರಶ್ನೆ ಮಾಡಿದ್ದಾರೆ.
ನರಸೇಗೌಡ, ನರಸಿಂಹಸ್ವಾಮಿ ಮತ್ತು ಲಕ್ಷ್ಮೀಪತಿ ಎಂಬುವರು ಜಾತಿ ನಿಂದನೆ ಮಾಡಿದ್ದಾರೆ, ನಮ್ಮ ಕುಟುಂಬದ ವಿರುದ್ಧ ದೂರು ನೀಡುತ್ತಿರಾ, ನಿಮ್ಮನ್ನು ಟ್ರ್ಯಾಕ್ಟರ್ ನಿಂದ ಗುದ್ದಿ ಸಾಯಿಸುವುದ್ದಾಗಿ ಜೀವ ಬೆದರಿಕೆ ಹಾಕಿದ್ದಾರೆ, ನಮ್ಮ ಮೈ ಮೇಲೆ ಪೆಟ್ರೋಲ್ ಸುರಿದು ದೊಣ್ಣೆ ಮತ್ತು ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ, ಬೆಂಕಿ ಹಚ್ಚುವ ಯತ್ನ ಮಾಡಿದ್ದಾಗ ಅಲ್ಲಿಂದ ಓಡಿ ಹೋಗಿದ್ದು, ಸುತ್ತಮುತ್ತಲಿನ ಜನ ಬರುವಷ್ಟರಲ್ಲಿ ಟ್ರ್ಯಾಕ್ಟರ್ ನನ್ನ ಅಲ್ಲಿಯೇ ಬಿಟ್ಟು ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆಂದು ಆರೋಪಿಸಿ ಹಲ್ಲೆಗೊಳಗಾದವರು ದೂರು ನೀಡಿದ್ದಾರೆ.
ನರಸಮ್ಮ ಮತ್ತು ಮಮತಾ ದಲಿತ ಸಮುದಾಯಕ್ಕೆ ಸೇರಿದ್ದು, ಜೀವ ಬೆದರಿಕೆ ಮತ್ತು ಹಲ್ಲೆ ನಡೆಸುವ ಮೂಲಕ ನರಸೇಗೌಡ, ನರಸಿಂಹಸ್ವಾಮಿ ಮತ್ತು ಲಕ್ಷ್ಮೀಪತಿ ದಲಿತರ ಜಮೀನು ಹೊಡೆಯುವ ಸಂಚು ನಡೆಸಿದ್ದಾರೆ, ಅವರು ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಿಸಿ ನಮ್ಮ ಕುಟುಂಬಕ್ಕೆ ರಕ್ಷಣೆ ನೀಡುವಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಗೆ ಮನವಿ ಮಾಡಿದ್ದಾರೆ.