ದೂರಸಂಪರ್ಕವು ಸೇರಿದಂತೆ ಮಾನವನ ಪ್ರಗತಿಗಾಗಿ ಬಾಹ್ಯಾಕಾಶ ತಂತ್ರಜ್ಞಾನವನ್ನು ಬಳಕೆ- ಇಸ್ರೊ ಮಾಜಿ ಅಧ್ಯಕ್ಷ ಡಾ.ಎ.ಎಸ್.ಕಿರಣ್ ಕುಮಾರ್

ಚಂದ್ರಯಾನ -2ರ ಸೋಲು ಕಲಿಸಿದ ಪಾಠದಿಂದ ನಾವು ಹೆಚ್ಚಿನ ಸಂಶೋಧನೆ ಹಾಗೂ ಪರಿಶ್ರಮದ ಮೂಲಕ ಚಂದ್ರಯಾ-3 ಯಶಸ್ವಿಯಾಗಲು ಸಹಕಾರಿಯಾಗಿದೆ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಗೌರವ ಅಧ್ಯಕ್ಷ ಹಾಗೂ ಇಸ್ರೊ ಮಾಜಿ ಅಧ್ಯಕ್ಷ ಡಾ.ಎ.ಎಸ್.ಕಿರಣ್ ಕುಮಾರ್ ಹೇಳಿದರು.

ನಗರದ ಬೆಸೆಂಟ್ ಪಾರ್ಕ್ನಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ಶನಿವಾರ ಪ್ರಾರಂಭವಾದ ಎರಡು ದಿನಗಳ ರಾಜ್ಯ ಮಟ್ಟದ ನಾಯಕತ್ವ ತರಬೇತಿ ಶಿಬಿರವನ್ನು ಬೆಂಕಿ ಹಚ್ಚದಲೇ ಕುಡಿಕೆಯಲ್ಲಿದ್ದ ಹಾಲಿಗೆ ರಾಸಾಯನಿಕ ಹಾಕುವ ಮೂಲಕ ಹಾಲನ್ನು ಹುಕ್ಕಿಸಿ ಮೂಲಕ ಚಾಲನೆ ನೀಡಿದರು.

ಭೂಮಿಯ ಹೊರಗಿನ ಇತರೆ ಗ್ರಹಗಳ ಬಗ್ಗೆ ನಮ್ಮಲ್ಲಿ ಇರುವ ಕುತೂಹಲಗಳನ್ನು ಚಂದ್ರಯಾನ-3 ತಣಿಸಲಿದೆ. ವಿಶ್ವದ ಇತರೆ ದೇಶಗಳು ಬಾಹ್ಯಾಕಾಶ ಸಂಶೋಧನೆಗಳನ್ನು ಮಿಲಿಟರಿ ಬಲ ವೃದ್ದಿಗಾಗಿ ಬಳಸಿಕೊಳ್ಳುತ್ತಾರೆ. ಆದರೆ ಭಾರತ ದೂರಸಂಪರ್ಕವು ಸೇರಿದಂತೆ ಮಾನವನ ಪ್ರಗತಿಗಾಗಿ ಬಾಹ್ಯಾಕಾಶ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳುತ್ತಿದೆ. ಈ ಭೂ ಮಂಡಲ ಕುರಿತಂತೆ ಪ್ರತಿಯೊಬ್ಬರಲ್ಲೂ ಕುತೂಹಲಗಳು ಇವೆ. ವಿಜ್ಞಾನದ ಕಲಿಕೆಯನ್ನು ಹಲವಾರು ವಿಭಾಗಗಳಾಗಿ ಅಭ್ಯಾಸ ಮಾಡುವ ವಿಧಾನ ಸರಿಯಲ್ಲ. ಗಣಿತ, ಮಾನವೀಯ ಶಾಸ್ತ್ರಗಳನ್ನು ವಿಜ್ಞಾನ ಒಳಗೊಂಡಿರಬೇಕು. ಎಲ್ಲರಲ್ಲೂ ನಾಯಕತ್ವದ ಗುಣಗಳು ಇರಲಿವೆ. ಆದರೆ ಅವು ನಮ್ಮಲ್ಲಿ ರೂಢಿಗತವಾಗಲು ಕೇಳಿ ತಿಳಿಯುವ, ಪ್ರಯೋಗ ಮಾಡಿ ನೋಡುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.

ವಿಜ್ಞಾನ ಗ್ರಾಮದ ನೀಲನಕ್ಷೆ ಉದ್ಘಾಟಿಸಿ ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಸಮೀಪ ಹತ್ತು ಎಕರೆ ಪ್ರದೇಶದಲ್ಲಿ ವಿಜ್ಞಾನ ಗ್ರಾಮ ನಿರ್ಮಾಣಕ್ಕೆ ಲೋಕೊಪಯೋಗಿ ಇಲಾಖೆ ವತಿಯಿಂದ 5 ಕೋಟಿ ರೂ. ಅನುದಾನ ನೀಡಲಾಗಿದೆ. ಇನ್ನು ಹೆಚ್ಚಿನ ಅನುದಾನವನ್ನು ಮುಖ್ಯಮಂತ್ರಿಗಳಿಂದ ಕೊಡಿಸುವುದಾಗಿ ಭರವಸೆ ನೀಡಿದರು.

ಜನರ ಮುನ್ನಡೆಗೆ ವಿಜ್ಞಾನದ ಬೆಳಕು ಮುಖ್ಯ. ವೈಜ್ಞಾನಿಕ ಚಿಂತನೆಯ ಹೊಸ ಸಮಾಜ ನಿರ್ಮಾಣಕ್ಕೆ ವಿಜ್ಞಾನದ ತಿಳಿವಳಿಕೆ ಮುಖ್ಯವಾಗಿದೆ. ಡಿಸೆಂಬರ್ 29 ರಂದು ರಾಯಚೂರಿನಲ್ಲಿ ನಡೆಯಲಿರುವ 3ನೇ ರಾಜ್ಯ ಮಟ್ಟದ ವಿಜ್ಞಾನ ಸಮ್ಮೇಳನ ದೇಶಕ್ಕೆ ಸಂದೇಶ ನೀಡುವಂತೆ ನಡೆಯಬೇಕಿದೆ. ಇದಕ್ಕೆ ಅಗತ್ಯ ಸಹಕಾರ ನೀಡಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟಿಸಲು ಆಹ್ವಾನ ನೀಡಲಾಗುವುದು ಎಂದರು.

ಶಿಬಿರದ ಉದ್ಘಾಟನ ಸಮಾರಂಭದಲ್ಲಿ ಆಹಾರ ಮತ್ತು ನಾಗರೀಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ, ಶಾಸಕ ಧೀರಜ್ ಮುನಿರಾಜ್, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ರಾಜ್ಯ ಅಧ್ಯಕ್ಷ ಹುಲಿಕಲ್ ನಟರಾಜ್, ವಿಜ್ಞಾನ ಗ್ರಾಮದ ಭೂಮಿ ದಾನಿಗಳಾದ ಆರ್. ರವಿ ಬಿಳಿಶಿವಾಲೆ, ದೇವರಾಜ ಅರಸು ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ, ಪರಿಷತ್ ಉಪಾಧ್ಯಕ್ಷ ಡಾ.ಶ್ರೀರಾಮಚಂದ್ರ, ಕೆ.ಜಿ.ರಾವ್, ಕಾರ್ಯದರ್ಶಿ ಚಿಕ್ಕಹನುಮಂತೇಗೌಡ, ಸಂಘನ ಕಾರ್ಯದರ್ಶಿ ವಿ.ಟಿ.ಸ್ವಾಮಿ ಇದ್ದರು.

Leave a Reply

Your email address will not be published. Required fields are marked *