ದೊಡ್ಡಬಳ್ಳಾಪುರ: ನಗರದಲ್ಲಿ ಬಹುತೇಕ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಇಂದಿಗೂ ಹಲವು ಬಡಾವಣೆಗಳಲ್ಲಿ ಕಚ್ಛಾ ರಸ್ತೆಗಳೇ ಇವೆ. ಆದರೆ, ದುಸ್ಥಿತಿಯಲ್ಲಿರುವ ರಸ್ತೆಗಳನ್ನು ದುರಸ್ತಿ ಮಾಡುವುದನ್ನ ಬಿಟ್ಟು, ಸುಸ್ಥಿತಿಯಲ್ಲಿದ್ದ ಸಿಮೆಂಟ್ ರಸ್ತೆಯನ್ನೇ ಕಿತ್ತು ಹಾಕಿ ಹೊಸದಾಗಿ ರಸ್ತೆ ಮಾಡುವ ಕರಾಮತ್ತು ನಡೆದಿದೆ.
ಶಾಂತಿನಗರದಲ್ಲಿ ಟ್ಯಾಂಕ್ ರಸ್ತೆಗೆ ಸಿಮೆಂಟ್ ಹಾಕಲಾಗಿತ್ತು. ಯಾವುದೇ ಗುಂಡಿಗಳಿಲ್ಲದೇ ರಸ್ತೆ ಸುಸ್ಥಿತಿಯಲ್ಲಿತ್ತು. ಹೀಗಿದ್ದರೂ ಶುಕ್ರವಾರ ರಸ್ತೆಯನ್ನು ಜೆಸಿಬಿ ಮೂಲಕ ಕಿತ್ತು ಹಾಕಲಾಗಿದೆ. ಸಾರ್ವಜನಿಕರು ಈ ಕುರಿತು ಪ್ರಶ್ನಿಸಿದಾಗ, ನಾವು ಗುತ್ತಿಗೆದಾರರು ಹೇಳಿದ ಹಾಗೆ ಮಾಡಿದ್ದೇವೆ ಎಂದು ಕೆಲಸಗಾರರು ಹೇಳಿದ್ದಾರೆ.
ಸಂಸದರ ಪ್ರದೇಶಾಭಿವೃದ್ಧಿ ನಿಧಿಯಡಿ ಜಿಲ್ಲಾಡಳಿತ ಹೊಸದಾಗಿ ರಸ್ತೆ ಮಾಡುತ್ತಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ಟ್ಯಾಂಕ್ ರಸ್ತೆ ಉತ್ತಮವಾಗಿದ್ದರೂ ಕಿತ್ತುಹಾಕಿ ಹೊಸ ರಸ್ತೆ ಮಾಡುವ ಅನಿವಾರ್ಯತೆ ಏನಿತ್ತು ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.