ನಗರದ ಸಿ.ಬೈರೇಗೌಡ ಬಡಾವಣೆಯ ಖಾಸಗಿ ಜಾಗದಲ್ಲಿ ನಿರ್ಮಾಣ ಮಾಡಿದ್ದ ಬೃಹತ್ ವೇದಿಕೆಯಲ್ಲಿ ಅನೇಕ ಗಣ್ಯರ ಉಪಸ್ಥಿತಿಯಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ರವರುಗಳ ಚಿತ್ರ ಪಟಗಳಿಗೆ ಪುಷ್ಪ ನಮನ ಸಲ್ಲಿಸಿ ‘ದಿ-ರೂಲರ್ಸ್’ ಚಿತ್ರದ ಆಡಿಯೋ ಹಾಗೂ ಟೀಸರ್ ನ್ನು ಭಾನುವಾರ ಅದ್ಧೂರಿ ಕಾರ್ಯಕ್ರಮದೊಂದಿಗೆ ಲಾಂಚ್ ಮಾಡಲಾಯಿತು.
ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ್ದ ಬಹುತೇಕರು ಚಿತ್ರಕಥೆ ಹಾಗೂ ಹಾಡುಗಳು ಅತ್ಯುತ್ತಮವಾಗಿ ಮೂಡಿ ಬಂದಿರುವುದಲ್ಲದೆ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಆಶಯಗಳನ್ನು ಹಾಗೂ ಸಂವಿಧಾನದ ಆಶಯಗಳನ್ನು ಮತ್ತು ಸಂವಿಧಾನ ನಮಗೆ ನೀಡಿರುವ ಹಕ್ಕುಗಳ ಬಗ್ಗೆ ಅರ್ಥಪೂರ್ಣವಾಗಿ ತೋರಿಸಲಾಗಿದೆಯೆಂದು ವಿವರಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾಹಿತಿ ನಾಗೇಂದ್ರ ಪ್ರಸಾದ್ ಮಾತನಾಡಿ, ಒಂದು ಒಳ್ಳೆಯ ಸಂದೇಶವನ್ನು ಇಟ್ಟುಕೊಂಡು, ಸತ್ಯ ಘಟನೆ ಆಧರಿಸಿ ನಡೆದಿರುವ ಕಥೆ ಆಧಾರಿತ ಚಿತ್ರವಾಗಿದ್ದು ಪ್ರತಿಯೊಂದು ಕುಟುಂಬ ಅದರಲ್ಲೂ ಹೆಣ್ಣು ಮಕ್ಕಳು ಮತ್ತು ಅವರ ತಂದೆ ತಾಯಿ ನೋಡಲೇ ಬೇಕಾದ ಚಿತ್ರವೆಂದು ತಿಳಿಸಿದರು.
ಕನ್ನಡ ಚಿತ್ರ ಪ್ರೇಮಿಗಳು ಚಿತ್ರವನ್ನು ಚಿತ್ರ ಮಂದಿರಗಳಲ್ಲಿ ನೋಡುವ ಮೂಲಕ ಚಿತ್ರ ತಂಡವನ್ನು ಬೆಂಬಲಿಸ ಬೇಕೆಂದು ಮನವಿ ಮಾಡಿದರಲ್ಲದೆ ಚಿತ್ರ ಯಶಸ್ಸು ಕಾಣಲಿ ಭವಿಷ್ಯ ಉಜ್ವಲವಾಗಿ ಬೆಳಗಲಿ ಎಂದು ಹಾರೈಸಿದರು.
ಜಿಲ್ಲಾ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಕೋಲಾರ ನೆಲದಲ್ಲಿ ನಡೆದಿರುವ ಘಟನೆಯನ್ನು ಆಧಾರವಾಗಿ ಇಟ್ಟುಕೊಂಡು ಸಂದೇಶ್ ರವರ ಜೀವನದಲ್ಲಿ ನಡೆದಿರುವ ವಿದ್ಯಮಾನಗಳನ್ನು ಒಟ್ಟು ಗೂಡಿಸಿ ಮಾಡಿರುವ ಮೊದಲ ಚಿತ್ರ ಬಹಳ ಕಷ್ಟ ಪಟ್ಟು ಸ್ಥಳೀಯ
ಕಲಾವಿದರೊಂದಿಗೆ ಸ್ಥಳೀಯವಾಗಿ ಚಿತ್ರೀಕರಣ ಮಾಡಿದ್ದಾರೆ ಹಾಗೂ ಕೋಲಾರದಲ್ಲೇ
ಧ್ವನಿ ಸುರಳಿ ಬಿಡುಗಡೆಯನ್ನು ಅದ್ದೂರಿಯಾಗಿ ಮಾಡುತ್ತಿರುವುದು ಶ್ಲಾಘನೀಯವೆಂದರು.
ಅಂಬೇಡ್ಕರ್ ರವರ ಸಂದೇಶ ಮತ್ತು ಸಂವಿಧಾನದ ಶಕ್ತಿ ನಿರೂಪಿಸುವ ಚಿತ್ರ ಇದಾಗಿದ್ದು,ಹೆಣ್ಣು ಮಕ್ಕಳನ್ನು ಹೆತ್ತಿರುವ ಪ್ರತಿಯೊಬ್ಬ ತಂದೆ ತಾಯಿ ತಮ್ಮಹೆಣ್ಣು ಮಕ್ಕಳೊಂದಿಗೆ ನೋಡಲೇ ಬೇಕಾದ ಚಿತ್ರವೆಂದು ಬಣ್ಣಿಸಿದರಲ್ಲದೆ ಪ್ರತಿ ಕುಟುಂಬ ಚಿತ್ರಕ್ಕೆ ಆಶೀರ್ವಾದ ಮಾಡ ಬೇಕೆಂದು ಮನವಿ ಮಾಡಿದರು.
ನಿರ್ಮಾಪಕ ಅಶ್ವಥ್ ಬಳಗೆರೆ ಮಾತನಾಡಿ, ನೈಜ ಘಟನೆ ಆಧಾರಿತ ಕಥೆ ಇಷ್ಟವಾಗಿದ್ದರಿಂದ ಚಿತ್ರ ನಿರ್ಮಾಣಕ್ಕೆ ಎಷ್ಟೇ ಅಡೆ ತಡೆ ಬಂದರೂ ಹೆದರದೆ ಚಲನ ಚಿತ್ರ ಸಂಪೂರ್ಣ ಮಾಡಿದ್ದು, ನಾವು ಯಾವುದೇ ಕಂದಾಚಾರಕ್ಕೆ ಬೆಲೆ ನೀಡದೆ ಚಿತ್ರೀಕರಣ ಮಾಡಿದ್ದು,ನಮ್ಮ ಚಿತ್ರ ತಂಡಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.
ಚಿತ್ರ ನಟ ಹಾಗೂ ಹೋರಾಟಗಾರ ಸಂದೇಶ್ ಮಾತನಾಡಿ ದೊಡ್ಡ ನಟರುಗಳು ಹಾಗೂ ನಿರ್ಮಾಪಕರು ಏರ್ಪಡಿಸುವ ರೀತಿಯಲ್ಲಿ ಅದ್ದೂರಿ ಕಾರ್ಯಕ್ರಮದಲ್ಲಿ ದ-ರೂಲರ್ಸ್ ಚಿತ್ರದ ಆಡಿಯೋ ಹಾಗೂ ಟೀಸರ್ ಲಾಂಚ್ ಮಾಡಿದ್ದು,ಚಿತ್ರ ಯಶಸ್ಸು ಕಾಣುತ್ತದೆ. ನೂರು ದಿನಗಳ ಪ್ರದರ್ಶನ ಕಾಣುತ್ತದೆ ಎಂಬ ಭರವಸೆ ನನಗಿದ್ದು,ಶತದಿನೋತ್ಸವ ಆಚರಣೆ ಕೋಲಾರದಲ್ಲೇ ಮಾಡಿ ಉತ್ತರ ನೀಡುತ್ತೇನೆಂದರು.
ನನ್ನ ನಂಬಿ ನಮ್ಮ ನಿರ್ಮಾಪಕರಾದ ಅಶ್ವಥ್ ಬಳಗೆರೆ ರವರು ಯಾವುದಕ್ಕೂ ಕೊರತೆ ಇಲ್ಲದೆ
ಅದ್ದೂರಿಯಾಗಿ ಚಿತ್ರ ನಿರ್ಮಾಣ ಮಾಡಲು ಬಂಡವಾಳ ಹಾಕಿದ್ದು ಅವರಿಗೆ ಚಿತ್ರ ತಂಡದ ಪರವಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ ಹಾಗೂ ನಮ್ಮ ಚಿತ್ರ ತಂಡಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಡೈರೆಕ್ಟರ್ ಉದಯ್ ಬಾಸ್ಕರ್,ಮ್ಯೂಸಿಕ್ ಡೈರೆಕ್ಟರ್ ಕರ್ಣಾ, ಪುಣ್ಯ ಮೂರ್ತಿ, ಸದ್ದಾಂ, ಸೀನಣ್ಣ ಕೆ.ಎಸ್.ಗಣೇಶ್, ದಲಿತ ನಾರಾಯಣಸ್ವಾಮಿ, ಡಿ.ಪಿ.ಎಸ್.
ಮುನಿರಾಜು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.