ದಿನೇ ದಿನೇ ಹೆಚ್ಚುತ್ತಿರುವ ಬೈಕ್ ವ್ಹೀಲಿಂಗ್ ಪುಂಡರ ಹಾವಳಿ: ಪೊಲೀಸರ ಭಯವಿಲ್ಲದೆ ಡೆಡ್ಲಿ ವ್ಹೀಲಿಂಗ್: ಅಪಘಾತ ಭಯದಲ್ಲಿ ವಾಹನ ಸವಾರರು

ತಾಲೂಕಿನಲ್ಲಿ ಹಾದುಹೋಗುವ ವಿವಿಧ ಹೆದ್ದಾರಿಗಳಲ್ಲಿ ಬೈಕ್ ವ್ಹೀಲಿಂಗ್ ಪುಂಡರ ಹಾವಳಿ ದಿನೇ‌ದಿನೇ ಹೆಚ್ಚುತ್ತಿರುವ ಹಿನ್ನೆಲೆ ವಾಹನ ಸವಾರರು ಅಪಘಾತ ಭಯದಲ್ಲಿ ಸಾಗಬೇಕಾದ ಅನಿವಾರ್ಯತೆ ಎದುರಾಗಿದೆ.

ವೀಕೆಂಡ್​ನಲ್ಲಿ ಪ್ರಮುಖ ಹೆದ್ದಾರಿಗಳಲ್ಲಿ ಪುಂಡರು ನಂದಿ ಬೆಟ್ಟ- ದೊಡ್ಡಬಳ್ಳಾಪುರ, ಹೊಸಕೋಟೆ- ದೊಡ್ಡಬಳ್ಳಾಪುರ ರಸ್ತೆ, ದೊಡ್ಡಬಳ್ಳಾಪುರ – ಹಿಂದೂಪುರ ಹೆದ್ದಾರಿ ಯುದ್ದಕ್ಕೂ ಬೈಕ್ ವೀಲಿಂಗ್ ಮಾಡುತ್ತಾ ವಿಡಿಯೋ ಮಾಡುತ್ತಿರುವುದರಿಂದ ಇತರೆ ವಾಹನ‌ ಸವಾರರಿಗೆ ಕಿರಿಕಿರಿ ಉಂಟಾಗುತ್ತಿದೆ.

ಹೆದ್ದಾರಿಯಲ್ಲಿ ಡೆಡ್ಲಿ ವ್ಹೀಲಿಂಗ್ ಮಾಡುತ್ತಾ ಹುಚ್ಚಾಟ ಮೆರೆಯುತ್ತಿದ್ದಾರೆ. ಹಿಂಬದಿಯಲ್ಲಿ ಯುವಕ ಯುವತಿಯರನ್ನ ಕೂರಿಸಿಕೊಂಡು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದಾರೆ.

ಕೆಲ ಹೆದ್ದಾರಿಗಳಲ್ಲಿ ಹೈಟೆಕ್ ಕ್ಯಾಮರಾಗಳಿದ್ದರೂ ಪೊಲೀಸರ ಭಯವಿಲ್ಲದೆ ಡೆಡ್ಲಿ ವ್ಹೀಲಿಂಗ್ ಮಾಡುತ್ತಿದ್ದಾರೆ. ಹೊಸಕೋಟೆ- ದೊಡ್ಡಬಳ್ಳಾಪುರ. ನಡುವಿನ ಹೆದ್ದಾರಿಯಲ್ಲಿ ಪುಂಡರ ವೀಲಿಂಗ್ ಹುಚ್ಚಾಟದ ದೃಶ್ಯ ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿದೆ.

ಇನ್ನೂ ಈ ಪುಂಡರ ಬಂಧನಕ್ಕೆ ಪೊಲೀಸರು ಮುಂದಾದರು ವೇಗವಾಗಿ ವಾಹನಗಳಲ್ಲಿ ಪರಾರಿಯಾಗಿ ತಪ್ಪಿಸಿಕೊಳ್ಳುತ್ತಿದ್ದಾರೆ.

ವ್ಹೀಲಿಂಗ್ ಮಾಡಲು ಬಳಸುವ ಬಹುತೇಕ ವಾಹನಗಳಿಗೆ ನಂಬರ್ ಪ್ಲೇಟ್ ಇರದೇ ಇರುವುದು ಪುಂಡರ ಬಂಧಿಸಲು ಪೊಲೀಸರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಒಂದು ವೇಳೆ ಪುಂಡರ ಬೆನ್ನತ್ತಿ ಪ್ರಾಣ ಒತ್ತೆಯನ್ನಿಟ್ಟು ಹಿಡಿದರು… ಕೆಲ ಪುಡಾರಿಗಳು ಪುಂಡರನ್ನು ಬಿಡುವಂತೆ ಒತ್ತಡ ಹೇರುತ್ತಾರೆ ಎಂಬ ಬೇಸರ ಪೊಲೀಸರದ್ದಾಗಿದೆ.

Leave a Reply

Your email address will not be published. Required fields are marked *