ಇತ್ತೀಚಿಗೆ ಗೋಣಿಕೊಪ್ಪಲು ಪೊಲೀಸ್ ಠಾಣಾ ವ್ಯಾಪ್ತಿಯ ಕೊಂಗಣ ಬಿ. ಶೆಟ್ಟಿಗೇರಿ ಕಾಫಿ ತೋಟದ ಒಂಟಿ ಮನೆಯಲ್ಲಿ ವಾಸವಿದ್ದ ಕೇರಳ ರಾಜ್ಯ ಕಣ್ಣೂರು ಜಿಲ್ಲೆಯ ಪ್ರಖ್ಯಾತ ಆಸ್ಪತ್ರೆಯ ಮಾಲಿಕ ಪ್ರದೀಪ್ ಕೊಯ್ಲಿ ಎಂಬ ಶ್ರೀಮಂತನ ಕೊಲೆಗೆ ಓರ್ವನ ಧನದಾಹವೇ ಕಾರಣ ಎನ್ನಲಾಗಿದ್ದು, ಈ ಕೊಲೆ ಪ್ರಕರಣದ ಐವರು ಆರೋಪಿಗಳು ಲಾಕ್ ಆಗಿದ್ದಾರೆ.
ದಿನಾಂಕ 23-04-2025 ರಂದು ಗೋಣಿಕೊಪ್ಪಲು ಕೊಂಗಣ ಬಿ. ಶೆಟ್ಟಿಗೇರಿ ಕಾಫಿ ತೋಟದ ಒಂಟಿ ಮನೆಯಲ್ಲಿ ವಾಸವಿದ್ದ ಕೇರಳ ರಾಜ್ಯ ಕಣ್ಣೂರು ಜಿಲ್ಲೆ ಮೂಲದ ಪ್ರದೀಪ್ ಕೊಯ್ಲಿರವರ ಕುತ್ತಿಗೆಗೆ ಹಗ್ಗದಿಂದ ಬಿಗಿದು ಉಸಿರು ಗಟ್ಟಿಸಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು ಪೊಲೀಸ್ ಇಲಾಖೆ ಯಶಸ್ವಿಯಾಗಿದೆ.
ಉಪ ವಿಭಾಗ ಮಟ್ಟದ ವಿಶೇಷ ತಂಡವನ್ನು ರಚಿಸಲಾಗಿ ತನಿಖೆ ಕೈಗೊಂಡು ಆರೋಪಿಗಳಾದ ಪೊನ್ನಂಪೇಟೆ ಮುಗುಟಗೇರಿಯ ಅನಿಲ್ ಎನ್.ಎಸ್. ಅಲಿಯಾಸ್ ಮುತ್ತಣ್ಣ (25), ಸೋಮವಾರಪೇಟೆ ಅಬ್ಬೂರು ಕಟ್ಟೆಯ ದೀಪಕ್ ಅಲಿಯಾಸ್ ದೀಪು (21), ಸೋಮವಾರಪೇಟೆ ನೇರುಗಳಲೆಯ ಸ್ಟೀಫನ್ ಡಿಸೋಜ (26), ಸೋಮವಾರಪೇಟೆ ಹಿತ್ತಲ ಮಕ್ಕಿಯ ಕಾರ್ತಿಕ್ ಹೆಚ್.ಎಂ. (27) ಮತ್ತು ಪೊನ್ನಂಪೇಟೆ ನಲ್ಲೂರಿನ ಹರೀಶ್ ಟಿ.ಎಸ್. (29) ಇವರುಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಆರೋಪಿಗಳಿಂದ ರೂ. 13,03,000/- ನಗದು ಹಣ, ಕೃತ್ಯಕ್ಕೆ ಬಳಸಿದ ಎರಡು ದ್ವಿ ಚಕ್ರ ವಾಹನ, ಹಾಗೂ ಎರಡು ಮೊಬೈಲ್, ಮೃತ ವ್ಯಕ್ತಿಯ ಮೊಬೈಲ್ ಮತ್ತು ಆಸ್ತಿ ಪತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಪ್ರಕರಣದ ಆರೋಪಿ ಅನಿಲ್ ತಾನು ಪ್ರೀತಿಸುತ್ತಿದ್ದ ಹುಡುಗಿಯ ಮನೆಯವರಲ್ಲಿ ಮದುವೆ ಮಾತುಕತೆ ನಡೆಸಿದ್ದಾನೆ. ಆದರೆ ಹುಡುಗಿ ಮನೆಯವರು ನೀನು ಯಾವುದೇ ಕೆಲಸ ಮಾಡುವುದಿಲ್ಲ ಮತ್ತು ಯಾವುದೇ ಆಸ್ತಿ ಇಲ್ಲದಿರುವುದರಿಂದ ಮದುವೆ ಮಾಡಿಕೊಡಲು ಸಾಧ್ಯ ವಿಲ್ಲ ಎಂದು ನಿರಾಕರಿಸಿದ್ದಾರೆ. ಈ ಕಾರಣದಿಂದ ಶೀಘ್ರವಾಗಿ ಹಣ, ಆಸ್ತಿಗಳಿಸುವ ಉದ್ದೇಶದಿಂದ ಈ ಕೆಳಗಿನ ಕೃತ್ಯಗಳನ್ನು ಎಸಗಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ತಾನು ಕೆಲಸ ಮಾಡುವ ಜಾಗಗಳಲ್ಲಿ ಪರಿಚಯ ಮಾಡಿಕೊಂಡು ಜಮೀನಿನಲ್ಲಿ ನಿಧಿ ಇರುವುದಾಗಿ ನಂಬಿಸಿ ಬೆಂಗಳೂರು, ಹಾಸನ, ಪೊನ್ನಂಪೇಟೆ ಕಡೆಗಳಲ್ಲಿ ಹಣ ಪಡೆದು ಮೋಸ ಮಾಡಿರುವುದು ಕೂಡ ಬೆಳಕಿಗೆ ಬಂದಿದೆ. ಈ ಹಿಂದೆ ತನ್ನನ್ನು ಬೆಂಗಳೂರಿನ ಕೆಲವರು ಕುಂದಾ ಸಮೀಪ ನಿಧಿ ಹುಡುಕಿಕೊಟ್ಟು ಅವರಿಗೆ ನೀಡಿ, ಅವರಿಂದ ಬರಬೇಕಾದ ಹಣ ಕೇಳಿದ್ದಕ್ಕೆ ಕಟ್ಟಿಹಾಕಿ ತನ್ನನ್ನು ಕೂಡಿ ಹಾಕಿದ್ದರೂ ಎಂದು ಕಳೆದ ಕೆಲವು ತಿಂಗಳುಗಳ ಹಿಂದೆ ಗೋಣಿಕೊಪ್ಪಲು ಪೊಲೀಸರಿಗೆ ದೂರು ನೀಡಿದ್ದನು, ಪೊಲೀಸರು ವಿಚಾರಣೆ ಮಾಡಿದಾಗ ಮಾತಿಗೊಂದು ಸುಳ್ಳು ಹೇಳುತ್ತಿದ್ದದ್ದನ್ನು ಗಮನಿಸಿದ ಪೊಲೀಸರು ಗಂಭೀರವಾಗಿ ಪರಿಗಣಿಸದೆ ಈತನನ್ನು ಹಾಗೆ ಬಿಟ್ಟು ಈ ಹಿಂದೆ ಕಳುಹಿಸಿದ್ದರು ಎಂದು ಹೇಳಲಾಗಿದೆ.
ಒಂಟಿಯಾಗಿ ವಾಸ ಮಾಡುವ ಹಾಗೂ ಹೆಚ್ಚಿನ ಆಸ್ತಿ ಹೊಂದಿರುವವರನ್ನು ಗುರುತಿಸಿ ಆಸ್ತಿ ಖರೀದಿ/ ಮಾರಾಟ ಮಾಡುವ ನೆಪದಲ್ಲಿ ತಿತಿಮತಿಯ ಒಂಟಿ ಮಹಿಳೆಯನ್ನು ಸಂಪರ್ಕಿಸಿದ್ದಾನೆ ಆದರೆ ಈಕೆಗೆ ಸ್ಥಳೀಯವಾಗಿ ಸಂಬಂಧಿಕರಿರುವುದು ಗೊತ್ತಾಗಿ ತನ್ನ ವ್ಯವಹಾರವನ್ನು ಸ್ಥಗಿತಗೊಳಿಸಿದ್ದ.
ಕೋಣನಕಟ್ಟೆಯಲ್ಲಿ 50 ಎಕರೆ ಜಮೀನಿನ ಮಾಲೀಕರನ್ನು ಆಸ್ತಿ ಖರೀದಿಸುವ ನೆಪದಲ್ಲಿ ಪರಿಚಯಿಸಿಕೊಂಡಿದ್ದ. ಆದರೆ ಇವರಿಗೆ ಮನೆಯಲ್ಲಿ ಮಕ್ಕಳು ಇರುವುದರಿಂದ ವ್ಯವಹಾರ ಸರಿ ಬರುವುದಿಲ್ಲ ಎಂದು ವ್ಯವಹಾರವನ್ನು ಕೈಬಿಟ್ಟಿದ್ದ.
ಹತ್ಯೆಗೀಡಾದ ಪ್ರದೀಪ್ ಕೊಯ್ಲಿಗೆ ಮದುವೆಯಾಗದಿರುವ ಬಗ್ಗೆ ಮತ್ತು ಸ್ಥಳೀಯ ನಿವಾಸಿ ಅಲ್ಲ ಹಾಗೂ ಹೆಚ್ಚಿನ ಆಸ್ತಿ ಹೊಂದಿರುವ ಕುರಿತು ಮದ್ಯವರ್ತಿಗಳ ಮೂಲಕ ಮಾಹಿತಿಯನ್ನು ಖಚಿತಪಡಿಸಿಕೊಂಡು ಖರೀದಿದಾರರು ವಿದೇಶ ದಲ್ಲಿರುವುದಾಗಿ ತಿಳಿಸಿ ಅವರ ಪರವಾಗಿ ಮೃತ ಪ್ರದೀಪ್ ಕೊಯ್ಲಿರವರಿಗೆ ಆಸ್ತಿ ಖರೀದಿ ಸುವುದಾಗಿ ತಿಳಿಸಿ ರೂ. ಒಂದು ಲಕ್ಷ ವನ್ನು ಮುಂಗಡವಾಗಿ ನೀಡಿರುತ್ತಾನೆ.
ಕೊಲೆ ಮಾಡಿದ ನಂತರ ಮೃತರ ಮನೆಗೆ ಮರಳಿ ಅಲ್ಲಿದ್ದ ಮೃತ ದೇಹವನ್ನು ಹೂತು ಹಾಕುವುದು ಹಾಗೂ ಮನೆಯಲ್ಲಿದ್ದ ಕರಿಮೆಣಸು, ಮೃತರ ಕಾರು, ಸಿಸಿಟಿವಿ ಯನ್ನು ನಾಶಪಡಿಸುವ ಬಗ್ಗೆ ಉಪಾಯ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ.
ವಿರಾಜಪೇಟೆ ಡಿ.ವೈ ಎಸ್.ಪಿ.ಎಸ್ ಮಹೇಶ್ ಕುಮಾರ್ ನೇತೃತ್ವದ ತನಿಖಾ ತಂಡ ಆರೋಪಿಗಳನ್ನು ಸರಿ ಹಿಡಿಯುವಲ್ಲಿ ಸಫಲರಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಗೋಣಿಕೊಪ್ಪಲು, ವಿರಾಜಪೇಟೆ, ಕುಟ್ಟ ವೃತ್ತ ನಿರೀಕ್ಷಕರುಗಳಾದ, ಅನುಪ್ ಮಾದಪ್ಪ, ಶಿವರಾಜ್ ಮುಧೋಳ್, ಶಿವರುದ್ರಪ್ಪ ವಿರಾಜಪೇಟೆ ನಗರ ಗೋಣಿಕೊಪ್ಪಲು, ಹಾಗೂ ಪೊನ್ನಂಪೇಟೆ, ಶ್ರೀಮಂಗಲ , ಪುಟ್ಟ ಹಾಗೂ ವಿರಾಜಪೇಟೆ ಗ್ರಾಮಾಂತರ ಪಿಎಸ್ಐ ಗಳಾದ ಪ್ರಮೋದ್ ಕುಮಾರ್, ಪ್ರದೀಪ್ ಕುಮಾರ್, ನವೀನ್, ರವೀಂದ್ರ, ಶ್ರೀಮತಿ ಲತಾ, ಮಹಾದೇವ ಎಚ್. ಕೆ ಹಾಗೂ ಉಪ ವಿಭಾಗ ಮಟ್ಟದ ಅಪರಾಧ ಪತ್ತೆದಳ ಸಿಬ್ಬಂದಿಗಳು, ಡಿ ಸಿ ಆರ್ ಬಿ ಸಿಬ್ಬಂದಿ, ತಾಂತ್ರಿಕ ಸಿಬ್ಬಂದಿ ಭಾಗವಹಿಸಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಮಡಿಕೇರಿಯ ತಮ್ಮ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ್ದಾರೆ.
ಅನಿಲ್ ನನ್ನು ವಿಚಾರಣೆಗೆ ಒಳಪಡಿಸಿದಾಗ ಆತನ ಹಲವು ವಿಚಾರಗಳನ್ನು ಕೇಳಿ ಪೊಲೀಸರೇ ಬಿಚ್ಚಿ ಬಿದ್ದಿದ್ದಾರೆ ಎಂದು ಹೇಳಲಾಗಿದೆ. ಈತನಿಗೆ ಎಲ್ಲಾ ರೀತಿಯ ಚಟವಿದ್ದು ಕೆಲವು ಲೇಡೀಸ್ ಗಳಿಗೆ ಕಾರನ್ನು ಕೂಡ ಖರೀದಿಸಿ ಉಚಿತವಾಗಿ ನೀಡಿದ್ದಾನೆ. ಕೇಳಿದ್ದನ್ನು ನೀಡುವ ಕಾಮಧೇನುವಾಗಿ ಎಲ್ಲಾ ರೀತಿಯ ತಂತ್ರಗಾರಿಕೆಯನ್ನು ಬಲವನಾಗಿದ್ದನು ಎಂಬುದು ಈತನನ್ನು ಬಲ್ಲವರು ಹೇಳುವ ಮಾತು. ಯೂಟ್ಯೂಬ್ನಲ್ಲಿ ಹಾಡಿನ ದೃಶ್ಯ ದೊಂದಿಗೆ ರೀಲ್ಸ್ ಕೂಡ ಮಾಡಿದ್ದನಂತೆ.
ಇದುವರೆಗೆ ಈತ ಪೊನ್ನಂಪೇಟೆ ಯ ಜೋಡುಬಿಟ್ಟಿಯಲ್ಲಿ ತನ್ನ ತಾಯಿ ಹಾಗೂ ತಂಗಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾನೆ. ಈತನಿಗೆ ಬೆಂಗಳೂರಿನ ಹಲವು ಖತರ್ನಾಕ್ ಗಳ ಪರಿಚಯ ಕೂಡ ಹೊಂದಿದ್ದಾನೆ ಎಂದು ಹೇಳಲಾಗಿದೆ. ಕೃತ್ಯ ನಡೆದ ಸ್ಥಳದಿಂದ ಅಪಹರಿಸಿದ್ದ ಚಿನ್ನಾಭರಣಗಳನ್ನು ಹೊರ ಜಿಲ್ಲೆಯಲ್ಲಿ ಮಾರಾಟ ಮಾಡಿದ್ದಾನೆ ಎಂದು ಹೇಳಲಾಗಿದೆ. ಈತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದರೆ ಹಲವಷ್ಟು ಪ್ರಕರಣಗಳು ಬಯಲಾಗುವ ಶಂಕೆ ವ್ಯಕ್ತವಾಗುತದೆ.