ಆಟೋಗೆ ದಾರಿ ಬಿಡಲಿಲ್ಲವೆಂದು ಕ್ಷುಲ್ಲಕ ಕಾರಣಕ್ಕೆ ಕೆಎಸ್ಆರ್‌ಟಿಸಿ ಚಾಲಕ ಹಾಗೂ ನಿರ್ವಾಹಕನ ಮೇಲೆ ಆಟೋ ಚಾಲಕ ಸೇರಿದಂತೆ ನಾಲ್ವರು ಮನಸೋಇಚ್ಚೆ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಮಾಡೇಶ್ವರ ಗ್ರಾಮದ ಬಳಿ ನಡೆದಿದೆ.
ಮಂಗಳವಾರ ಸಂಜೆ ವೇಳೆ ಮಾಡೇಶ್ವರ ಗ್ರಾಮದ ಬಳಿಯಲ್ಲಿನ ಕಿತ್ತೂರು ರಾಣಿ ವಸತಿ ಶಾಲೆ ಸಮೀಪ ಆಟೋಗೆ ದಾರಿ ನೀಡಲಿಲ್ಲವೆಂಬ ಕಾರಣಕ್ಕೆ ಕೆಎಸ್ಆರ್‌ಟಿಸಿ ಬಸ್ ಅಡ್ಡಗಟ್ಟಿದ ನಾಲ್ವರು, ಬಸ್ ಹತ್ತಿ ಚಾಲಕ ಪ್ರಸನ್ನ ಅವರನ್ನು ನಿಂದಿಸಿ ತೀವ್ರವಾಗಿ ಥಳಿಸಿದ್ದಾರೆ.
ತೀವ್ರವಾಗಿ ಗಾಯಗೊಂಡ ಚಾಲಕ ಪ್ರಸನ್ನ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿಲಾಗಿದೆ. ಈ ಕುರಿತು ದೊಡ್ಡಬೆಳವಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರು ದಾಖಲಿಸಿಕೊಂಡ ಇನ್ಸ್‌ಪೆಕ್ಟರ್ ಹರೀಶ್ ನೇತೃತ್ವದ ಪೊಲೀಸರು, ಗಲಿಬಿಲಿಕೋಟೆ ಗ್ರಾಮದ ಗೋವಿಂದರಾಜು, ಹನುಮಂತರಾಜು, ನರಸಿಂಹರಾಜು ಎಂಬುವರನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಅಲ್ಲದೆ ತಲೆ ಮರೆಸಿಕೊಂಡಿರುವ ಮತ್ತೋರ್ವ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆಂದು ತಿಳಿದು ಬಂದಿದೆ.
ಮಾಡೇಶ್ವರಕ್ಕೆ ಬಸ್ ಸ್ಥಗಿತ:
ಚಾಲಕ, ನಿರ್ವಾಹಕನ ಮೇಲೆ ಹಲ್ಲೆಯ ಘಟನೆಯಿಂದಾಗಿ ಮಾಡೇಶ್ವರ ಗ್ರಾಮಕ್ಕೆ ಕೆಎಸ್ಆರ್‌ಟಿಸಿ ಬಸ್ ಎಂದಿನಂತೆ ಹೋಗಿಲ್ಲ. ಇದರಿಂದ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಅನಾನುಕೂಲವಾಗಿದೆ.