Categories: ಲೇಖನ

ದಸರಾ….

ಮೈಸೂರು ದಸರಾ,
ಮಹಿಷಾ ದಸರಾ,
ಚಾಮುಂಡಿ ದಸರಾ…..

ವಿಜಯ ದಶಮಿ – ಆಯುಧ ಪೂಜೆ…..

ದುಷ್ಟ ಶಕ್ತಿಗಳ ವಿರುದ್ಧ ವಿಜಯದ ಸಂಕೇತ……

ರಾಜಪ್ರಭುತ್ವ ವ್ಯವಸ್ಥೆಯಲ್ಲಿನ ಒಳ್ಳೆಯ ಮತ್ತು ಕೆಟ್ಟ ನಡವಳಿಕೆಗಳ ಅರ್ಥ ಮತ್ತು ಪ್ರಜಾಪ್ರಭುತ್ವದಲ್ಲಿ ಅದೇ ಮೌಲ್ಯಗಳ ಅರ್ಥ ಒಂದಷ್ಟು ಪರಿವರ್ತನೆ ಹೊಂದಿದೆ.

ರಾಜನೇ ಪ್ರತ್ಯಕ್ಷ ದೇವರು ಎಂಬ ಪರಿಕಲ್ಪನೆಯ ಸ್ಥಿತಿಯಲ್ಲಿ ರಾಜ ನಿಷ್ಠೆಯೇ ಒಳ್ಳೆಯತನದ ಸಂಕೇತ. ಅದಕ್ಕೆ ವಿರುದ್ಧದ ಎಲ್ಲವೂ ದ್ರೋಹ. ಆದರೆ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಆದರೆ ಇಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದರ ಗೆರೆಯೇ ಮಾಯವಾಗಿದೆ.

ಹಣ, ಅಧಿಕಾರ, ಆಸ್ತಿ, ಪೌರುಷಗಳೇ ಒಳ್ಳೆಯ ಗುಣಗಳು ಮತ್ತು ಬಡತನವೇ ಶಾಪ ಎಂಬಲ್ಲಿಗೆ ಈಗ ಬಂದು ನಿಂತಿದೆ.

ಒಳಗಿನ ಮತ್ತು ಹೊರಗಿನ ದುಷ್ಟ ಶಕ್ತಿಗಳ ವಿರುದ್ಧ ಜಯಿಸುವುದು ಹೇಗೆ ?

ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳನ್ನು ಗೆಲ್ಲುವುದಕ್ಕಿಂತ ನಿಯಂತ್ರಣ ಸಾಧಿಸುವುದು ಬಹಳ ಮುಖ್ಯ. ಜೊತೆಗೆ ಅದೇ ಅರಿಷಡ್ವರ್ಗಗಳನ್ನು ಸಕಾರಾತ್ಮಕವಾಗಿ ಉಪಯೋಗಿಸಿಕೊಂಡು ಜೀವನೋತ್ಸಾಹ ಹೆಚ್ಚಿಸಿಕೊಳ್ಳುವ ಅವಕಾಶ ಆಧುನಿಕ ಕಾಲದಲ್ಲಿ ಇದೆ. ಆದರೆ ಅದಕ್ಕಾಗಿ ಸಾಕಷ್ಟು ಸಾಧನೆ ಮಾಡಬೇಕಾಗುತ್ತದೆ. ವೈಯಕ್ತಿಕ ಜ್ಞಾನದ ಮಟ್ಟವನ್ನು ವೃದ್ಧಿಸಿಕೊಳ್ಳಬೇಕಾಗುತ್ತದೆ.

ಹಾಗೆಯೇ ಆಯುಧ ಪೂಜೆ. ರಾಜಪ್ರಭುತ್ವದಲ್ಲಿ ಕತ್ತಿ, ಗುರಾಣಿ, ಬಂದೂಕು, ಸಿಡಿಮದ್ದು, ಬಾಂಬುಗಳೇ ನಿಜವಾದ ಆಯುಧಗಳು. ಆದರೆ ಪ್ರಜಾಪ್ರಭುತ್ವದಲ್ಲಿ ಹಕ್ಕು ಮತ್ತು ಕರ್ತವ್ಯಗಳು ಆಧಾರಿತ ಮಾನವೀಯತೆಯೇ ಆಯುಧಗಳು ಎಂಬ ಅರಿವು ಮೂಡಬೇಕಿದೆ.

ವಾಹನಗಳೆಂಬ ನಿರ್ಜೀವ ವಸ್ತುಗಳಿಗೆ ಬೇಕಿರುವುದು ಪೂಜೆಯಲ್ಲ. ಅವುಗಳ ಸುಸ್ಥಿತಿ ಮತ್ತು ನಮ್ಮ ಜವಾಬ್ದಾರಿ ಬಹಳ ಮುಖ್ಯ. ಇಂದು ಅಪಘಾತಗಳು ಬದುಕಿನ ಭಾಗವಾಗಿ ಸಹಜವಾಗುತ್ತಿರುವಾಗ ವಾಹನಗಳ ಚಾಲನೆಯ ಕೌಶಲ್ಯ ಮತ್ತು ನಿಯಂತ್ರಣ ಮುಖ್ಯವೇ ಹೊರತು ನಿಂಬೆಹಣ್ಣು ಇಡುವುದಲ್ಲ.

ಜಂಬೂ ಸವಾರಿ, ಜಾನಪದ ಕಲೆಗಳ ಪ್ರದರ್ಶನ, ರಾಜ ದರ್ಬಾರ್, ಮೆರವಣಿಗೆ ಎಲ್ಲವೂ ಸಾಂಪ್ರದಾಯಿಕ ಸಾಂಸ್ಕೃತಿಕ ಉತ್ಸವಗಳು ಮತ್ತು ಮೇಲ್ನೋಟದ ಆಕರ್ಷಣೆ ಮಾತ್ರ. ನಿಜವಾದ ದಸರಾ ನಮ್ಮೊಳಗೆ ನಮ್ಮೊಂದಿಗೆ ಸಾಧಿಸಬೇಕಾಗಿರುವ ಕೆಟ್ಟ ನಡವಳಿಕೆಗಳ ಮೇಲಿನ ವಿಜಯೋತ್ಸವ. ಹಾಗೆ ಮಾಡಿದಲ್ಲಿ ಅದು ಸಾಮೂಹಿಕವಾಗಿ ಪ್ರಭಾವ ಬೀರಿ ಸಾಮಾಜಿಕವಾಗಿ ಸಹ ಪರಿಣಾಮ ಮತ್ತು ಫಲಿತಾಂಶಗಳನ್ನು ನೀಡುತ್ತದೆ. ಭ್ರಷ್ಟಾಚಾರ, ಜಾತಿ ಪದ್ದತಿ, ಮೋಸ, ವಂಚನೆ, ಕಲಬೆರಕೆ ಮುಂತಾದ ರಾಕ್ಷಸ ಗುಣಗಳು ಕಡಿಮೆಯಾಗಿ ಈ ಉತ್ಸವಗಳ ಮಹತ್ವ ಹೆಚ್ಚಾಗುತ್ತದೆ.

ಅದನ್ನು ಹೊರತುಪಡಿಸಿ ಯಾವುದೇ ಹಬ್ಬಗಳ ಅದ್ದೂರಿತನ ಕೇವಲ ತೋರಿಕೆಯ ಅತ್ಯಂತ ಕೃತಕ ಆಚರಣೆ ಅಥವಾ ಪ್ರದರ್ಶನವಾಗುತ್ತದೆ. ಅದು ಎಷ್ಟೇ ಶತಮಾನಗಳಿಂದ ನಡೆದು ಬರುತ್ತಿದ್ದರೂ ಪ್ರಯೋಜನವಿಲ್ಲ.

ಇಡೀ ಮಾಧ್ಯಮ ಲೋಕ ದಸರಾ ಹಬ್ಬದ ಬಾಹ್ಯ ಆಚರಣೆಗಳನ್ನೇ ಗುರಿಯಾಗಿಸಿ ಚರ್ಚೆ, ಸಂವಾದ ಪ್ರಸಾರ ಮಾಡುತ್ತವೆ. ಒಳನೋಟಗಳನ್ನು ಮಂಥನ ಮಾಡಿ ದುಷ್ಟ ಶಕ್ತಿಗಳ ಕನಿಷ್ಠ ಪರಿವರ್ತನೆಗೆ ಸ್ವಲ್ಪವೂ ಪ್ರಯತ್ನಿಸುವುದಿಲ್ಲ. ಅದೇ ಆಧುನಿಕ ಕಾಲದ ದುರಂತ.

ಕಣ್ಣಿಗೆ ಕಾಣುವುದನ್ನು ಹೃದಯಕ್ಕೆ ಮುಟ್ಟಿಸುವ ಕೆಲಸವಾಗಬೇಕಿದೆ. ದೃಶ್ಯ ವೈಭವಕ್ಕಿಂತ ಆತ್ಮಜ್ಞಾನ ಮುಖ್ಯ ಎಂಬ ಅರಿವು ಮೂಡಬೇಕಿದೆ. ಆಗ ಮಾತ್ರ ವಿಜಯ ದಶಮಿ, ಆಯುಧ ಪೂಜೆ, ಏಕಾದಶಿಗಳಿಗೆ ಒಂದು ಅರ್ಥ ಬರುತ್ತದೆ.

ಆತ್ಮಾವಲೋಕನವೇ ಮಹಾ ದಸರಾ ಮತ್ತು ಬದುಕಿನ ತೃಪ್ತಿಯೇ ನಿತ್ಯ ಹಬ್ಬ….

ಚಾಮುಂಡೇಶ್ವರಿ – ಮಹಿಷಾಸುರ ವಿವಾದ……

ಹೀಗೆ ಐತಿಹಾಸಿಕ ಮತ್ತು ಪೌರಾಣಿಕ ವಿಷಯಗಳ ಅನೇಕ ವಿವಾದಗಳು ಇನ್ನು ಮುಂದೆ ನಿರಂತರ…..

ಸತ್ಯಗಳು ಸಮಾಧಿಯಾಗುತ್ತಾ ಇತಿಹಾಸ ಧ್ವಂಸವಾಗುತ್ತಿರುವ ಕಾಲಘಟ್ಟದಲ್ಲಿ ನಾವುಗಳು……….

ಭಾರತ ಇತಿಹಾಸದ ಈ ಸಂಘರ್ಷದಿಂದ ಭಾರತೀಯ ಸಂಸ್ಕೃತಿ ಪುನರ್ ರೂಪಿತವಾಗುತ್ತಿದೆಯೇ ?

ಇದು ಉತ್ತಮ ಬೆಳವಣಿಗೆಯೇ ?
ಅಥವಾ ವಿನಾಶಕಾರಿಯೇ ?
ಅಥವಾ ಪ್ರಗತಿಪರ ಚಿಂತನೆಯೇ ?

ಅಂಬೇಡ್ಕರ್ ವಾದ, ಮನುವಾದ, ಎಡಪಂಥೀಯ ವಾದ ಮತ್ತು ಬಲಪಂಥೀಯ ವಾದದ ದ್ವೇಷಮಯ ವಾತಾವರಣದಿಂದ ಮೂಡುತ್ತಿರುವ ಹೊಸ ಹೊಸ ಅರ್ಥಗಳು………

ರಾಮ – ರಾವಣರ ಮುಖಾಮುಖಿ,
ಬುದ್ದ – ಶಂಕರರ ಮುಖಾಮುಖಿ,
ಬಸವ – ರೇಣುಕಾಚಾರ್ಯ – ಬ್ರಾಹ್ಮಣ್ಯದ ಮುಖಾಮುಖಿ,
ಅಂಬೇಡ್ಕರ್ – ಗಾಂಧಿ ಮುಖಾಮುಖಿ,
ಹಿಂದುತ್ವ – ರಾಷ್ಟೀಯತೆಯ ಮುಖಾಮುಖಿ,
ಜಾಗತೀಕರಣ – ಗ್ರಾಮ ಸ್ವರಾಜ್ಯದ ಮುಖಾಮುಖಿ………..

ಹೀಗೆ ಎಲ್ಲಾ ವಿಷಯಗಳ ಬಹುದೊಡ್ಡ ಸಂಘರ್ಷ ನಡೆಯುತ್ತಿದೆ.

ವಾದ ಪ್ರತಿವಾದಗಳಿಗೆ ಇದು ಕೇವಲ ಒಂದು ನೆಪವಷ್ಟೆ.

ವಾಸ್ತವದಲ್ಲಿ ,
ಸಮೂಹ ಸಂಪರ್ಕ ಮಾಧ್ಯಮಗಳ ಬೆಳವಣಿಗೆಯೊಂದಿಗೆ ಪ್ರತಿ ವ್ಯಕ್ತಿಯೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ದೊರೆತ ಅವಕಾಶ ಮತ್ತು ಸ್ವಾತಂತ್ರ್ಯ ಹಾಗು ಸುಳ್ಳು, ಅರ್ಧಸುಳ್ಳು, ಬಾಲಿಶ, ಉಡಾಫೆ, ವಿಕೃತ ಸುದ್ದಿ ವಿಷಯಗಳನ್ನು ಕ್ಷಣಾರ್ಧದಲ್ಲಿ ಪ್ರಚಾರ ಮಾಡಬಹುದಾದ ಸಾಧ್ಯತೆ ಎಲ್ಲವೂ ಒಟ್ಟಾಗಿ ಸೇರಿ ಅಧೀಕೃತ ಇತಿಹಾಸಕಾರರ, ವಿಷಯ ತಜ್ಞರ, ವಿದ್ವಾಂಸರ ಅಭಿಪ್ರಾಯಗಳನ್ನು ಮೀರಿ ಈ ಬೆಳವಣಿಗೆ ನಡೆಯುತ್ತಿದೆ.

ಆಳವಾದ ಅಧ್ಯಯನ, ಚಿಂತನೆ, ಅನುಭವ, ವಾಸ್ತವ ಪ್ರಜ್ಞೆ ಇಲ್ಲದೆ ಎಲ್ಲವನ್ನೂ ಸಮರ್ಥಿಸುವ ಅಥವಾ ವಿರೋಧಿಸುವ ಟ್ರೆಂಡ್ ಪ್ರಾರಂಭವಾಗಿದೆ.

ದ್ವೇಷಮಯ ಮತ್ತು ಅಪನಂಬಿಕೆಯಿಂದ ಒಬ್ಬರ ಮೇಲೆ ಒಬ್ಬರ ಕೆಸರೆರೆಚಾಟ ನಡೆಯುತ್ತಿದೆ..

ಇದು ಸುಖಾಂತ್ಯ ಕಾಣುತ್ತದೆಯೋ ಅಥವಾ ವಿನಾಶಕಾರಿ ಬೆಳವಣಿಗೆಯೋ ಎಂಬುದು ಕಾಲದ ಗರ್ಭದಲ್ಲಿ ಅಡಗಿದೆ……

ಆದರೂ ನಾವುಗಳು ಒಂದಷ್ಟು ಸಂಯಮದಿಂದ, ಸಭ್ಯತೆಯಿಂದ, ವಿವೇಚನೆಯಿಂದ ಈ ಸಂದರ್ಭವನ್ನು ನಿಭಾಯಿಸಲು ಪ್ರಯತ್ನಿಸೋಣ.
ಸತ್ಯದ ಹುಡುಕಾಟವೇ ನಮ್ಮ ಗುರಿಯಾಗಿರಲಿ.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ದೊಡ್ಡಬಳ್ಳಾಪುರ ರೈಲು ನಿಲ್ದಾಣದ ಬಳಿ ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ರೈಲು ನಿಲ್ದಾಣದ ರೈಲ್ವೆ ಯಾರ್ಡ್‌ನಲ್ಲಿ ರೈಲಿಗೆ ಸಿಲುಕಿ ಸುಮಾರು 30 ವರ್ಷದ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ…

2 hours ago

ವೃದ್ಧ ದಂಪತಿಗೆ ‘ವಾತ್ಸಲ್ಯ’ ಮನೆ ಹಸ್ತಾಂತರ

ದೊಡ್ಡಬಳ್ಳಾಪುರ: ತಾಲೂಕಿನ ಮೆಣಸಿ ಗ್ರಾಮದಲ್ಲಿ ವಯೋವೃದ್ಧ ದಂಪತಿ ಕೆಂಪಮ್ಮ ಮತ್ತು ಪಾಪಪಿಲ್ಲಪ್ಪ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ…

15 hours ago

ದೊಡ್ಡಬಳ್ಳಾಪುರದಲ್ಲಿ ದಾಖಲೆಗಳಿಲ್ಲದೆ ವಾಸ: ಮೂವರು ವಿದೇಶಿ ಪ್ರಜೆಗಳ ವಶ

ದೊಡ್ಡಬಳ್ಳಾಪುರ: ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ವೇಳೆ ದೊರೆತ ಖಚಿತ ಮಾಹಿತಿಯ ಆಧಾರದ ಮೇಲೆ ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದರೆನ್ನಲಾದ ಮೂವರು ನೈಜೀರಿಯಾ…

18 hours ago

ಘಾಟಿ ಸುಬ್ರಹ್ಮಣ್ಯ‌ ದೇವಾಲಯ ಹುಂಡಿ ಎಣಿಕೆ: 77.58 ಲಕ್ಷ ಸಂಗ್ರಹ

ದೊಡ್ಡಬಳ್ಳಾಪುರ: ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ಹುಂಡಿ ಕಾಣಿಕೆ ಎಣಿಕೆ ಕಾರ್ಯ ನಡೆಯಿತು. ಎಣಿಕೆಯಲ್ಲಿ…

21 hours ago

ಲಗೇಜ್ ಟ್ರಾಲಿಯಲ್ಲಿ ಚಿನ್ನ ಸಾಗಾಟ: ಇಬ್ಬರ ಬಂಧನ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲಗೇಜ್ ಟ್ರಾಲಿಯಲ್ಲಿ ಚಿನ್ನದ ಬಿಸ್ಕೆಟ್‌ಗಳನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಇಬ್ಬರು ಪ್ರಯಾಣಿಕರನ್ನು ಡೈರೆಕ್ಟರೇಟ್…

21 hours ago

ಆಧುನಿಕ ತಂತ್ರಜ್ಞಾನ–ಸಾವಯವ ಕೃಷಿಯಿಂದ ಮಾದರಿಯಾದ ನೆಲಮಂಗಲದ ರೈತ ಮಹಿಳೆ

ನೆಲಮಂಗಲ: ಕಡಿಮೆ ಶಿಕ್ಷಣದ ನಡುವೆಯೂ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ಸಾವಯವ ಪದ್ಧತಿಗಳನ್ನು ಅಳವಡಿಸಿಕೊಂಡು ಸಾಧನೆ ಮಾಡಿರುವ ನೆಲಮಂಗಲ ತಾಲೂಕಿನ…

22 hours ago