
ಚಿಕ್ಕಬಳ್ಳಾಪುರ : ದಸರಾ ರಜೆ ಹಿನ್ನಲೆ ಕೆರೆಯಲ್ಲಿ ಈಜಲು ಹೋಗಿದ್ದ ಬಾಲಕರು ಈಜಲು ಬಾರದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಸಂಭವಿಸಿದೆ.
ಬಾಗೇಪಲ್ಲಿ ತಾಲೂಕಿನ ಆಚೇಪಲ್ಲಿ ಕೆರೆಯಲ್ಲಿ ಇಂದು ಮಧ್ಯಾಹ್ನ ಘಟನೆ ನಡೆದಿದ್ದು, ಘಟನೆಯಲ್ಲಿ ವಿಷ್ಣು (14), ನಿಹಾಲ್ ರಾಜ್ (12), ಹರ್ಷವರ್ಧನ್ (16) ಸಾವನ್ನಪ್ಪಿದ್ದಾರೆ, ಮೃತ ಬಾಲಕರು ಆಚೇಪಲ್ಲಿ ಗ್ರಾಮದವರು, ಮಳೆಯಿಂದ ಕೆರೆಯಲ್ಲಿ ನೀರು ಬಂದ ಹಿನ್ನಲೆ ಕೆರೆಯಲ್ಲಿ ಈಜಲು ತೆರಳಿದ ವೇಳೆ ದುರ್ಘಟನೆ ಸಂಭವಿಸಿದೆ.

ಮೊದಲಿಗೆ ವಿಷ್ಣು ಮತ್ತು ನಿಹಾಲ್ ರಾಜ್ ಕೆರೆಯಲ್ಲಿ ಈಜುತ್ತಿದ್ದ ವೇಳೆ ಮುಳುಗಲು ಪ್ರಾರಂಭಿಸಿದ್ದಾರೆ, ಅವರನ್ನು ರಕ್ಷಿಸಲು ಹೋದ ಹರ್ಷವರ್ಧನ್ ಸಹ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆಂದು ಸ್ಥಳೀಯರು ಮಾಹಿತಿ ತಿಳಿಸಿದ್ದಾರೆ.
ಮೃತ ದೇಹಗಳನ್ನ ಬಾಗೇಪಲ್ಲಿ ಆಸ್ಪತ್ರೆಯ ಶವಗಾರಕ್ಕೆ ಕಳಿಸಲಾಗಿದ್ದು, ಆಸ್ಪತ್ರೆಯ ಮುಂದೆ ಮೃತ ಬಾಲಕರ ಕುಟುಂಬಸ್ಥರ ಅಕ್ರಂಧನ ಮುಗಿಲು ಮುಟ್ಟಿತ್ತು, ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.