ದೊಡ್ಡಬಳ್ಳಾಪುರ: ತಾಲೂಕಿನ ದೊಡ್ಡಬೆಳವಂಗಲ ಹೋಬಳಿ ಸಕ್ಕರೆಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋನೇನಹಳ್ಳಿ-ಕಂಗಳಾಪುರ- ಜ್ಯೋತಿಪುರ ನಡುವಿನ ರಸ್ತೆ ಡಾಂಬರೀಕರಣ ಕಾಮಗಾರಿ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರ ನಡುವೆ ಪರಸ್ಪರ ವಾಗ್ಯುದ್ಧಕ್ಕೆ ಕಾರಣವಾಗಿದೆ.
ಶಾಸಕರ ಗಮನಕ್ಕೆ ತರದೇ ಡಾಂಬರೀಕರಣ ಮಾಡಲಾಗಿದೆ ಎಂಬ ಒಂದೇ ಕಾರಣಕ್ಕೆ ಗ್ರಾ.ಪಂ.ಅಧ್ಯಕ್ಷರು ಹಾಗೂ ಕೆಲ ಬಿಜೆಪಿ ಮುಖಂಡರು ಇನ್ನೇನು ಮುಕ್ತಾಯ ಹಂತದಲ್ಲಿದ್ದ ಕಾಮಗಾರಿ ನಿಲ್ಲಿಸಿದ್ದಾರೆ ಎಂಬುದು ಕಾಂಗ್ರೆಸ್ ಮುಖಂಡರ ದೂರಾಗಿದೆ. ಆದರೆ ಈ ಆರೋಪ ನಿರಾಕರಿಸಿರುವ ಬಿಜೆಪಿ ಬೆಂಬಲಿತ ಗ್ರಾ.ಪಂ.ಅಧ್ಯಕ್ಷ ಹನುಮಯ್ಯ ಹಾಗೂ ಇತರೆ ಮುಖಂಡರು, ನಾವು ಕಾಮಗಾರಿ ತಡೆದಿಲ್ಲ. ಗುಣಮಟ್ಟದ ಕಾಮಗಾರಿ ನಡೆಸುವಂತೆ ತಾಕೀತು ಮಾಡಿದ್ದೇವೆ. ಕಾಂಗ್ರೆಸ್ ಮುಖಂಡರ ಆರೋಪದಲ್ಲಿ ಹುರುಳಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಶನಿವಾರ ಕಾಂಗ್ರೆಸ್ ಮುಖಂಡರಾದ ಭೈರೇಗೌಡ, ಕೆ.ಪಿ.ಜಗನ್ನಾಥ್,ಮುನಿಕುಮಾರ್, ರುದ್ರಮೂರ್ತಿ ಸೇರಿ 30ಕ್ಕೂ ಹೆಚ್ಚು ಕಾಂಗ್ರೆಸ್ ಮುಖಂಡರು ಗ್ರಾಮ ಪಂಚಾಯಿತಿ ಕಚೇರಿ ಬಳಿ ಜಮಾಯಿಸಿ, ಅಧ್ಯಕ್ಷರನ್ನು ಪ್ರಶ್ನಿಸಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಕಂಗಳಾಪುರ ಗ್ರಾಮದ ಮುಖಂಡ ರುದ್ರಮೂರ್ತಿ, ಕೋನೆನಹಳ್ಳಿ ಹಾಗೂ ಜ್ಯೋತಿಪುರ ಮಾರ್ಗದ 1.5ಕಿ.ಮೀ ರಸ್ತೆಗೆ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ(KRDCL)ವತಿಯಿಂದ ಡಾಂಬರು ಹಾಕಲಾಗುತ್ತಿದೆ. ದಶಕಗಳಿಂದ ಈ ಗ್ರಾಮಗಳು ಡಾಂಬರು ಮುಖವನ್ನೇ ನೋಡಿರಲಿಲ್ಲ. ನ.17ರಂದು ಬಿಜೆಪಿ ಬೆಂಬಲಿತ ಗ್ರಾ.ಪಂ ಅಧ್ಯಕ್ಷರು ಹಾಗೂ ಇತರೆ ಮುಖಂಡರು ವೃಥಾ ಕಾಮಗಾರಿ ತಡೆದಿದ್ದಾರೆ. ಪರಿಣಾಮ 200ಮೀ. ಬಾಕಿ ಇದ್ದ ಡಾಂಬರೀಕರಣ ನಿಂತು ಹೋಗಿದೆ. ಇದರಿಂದ ಮೂರು ಗ್ರಾಮಗಳ ಜನರಿಗೆ ಅನಾನುಕೂಲ ಆಗಿದೆ. ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಪಕ್ಷಬೇಧ, ರಾಜಕಾರಣ ಮಾಡಬಾರದು. ಜನರ ಆಶೋತ್ತರಗಳಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ವಿಎಸ್ ಎಸ್ ಎನ್ ಮಾಜಿ ಅಧ್ಯಕ್ಷ ಮುನಿಕುಮಾರ್ ಮಾತನಾಡಿ, ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹನುಮಯ್ಯ ಅವರು ತೆರಳಿ, ಶಾಸಕರ ಗಮನಕ್ಕೆ ತರದೇ ಕಾಮಗಾರಿ ನಡೆಸುವಂತಿಲ್ಲ ಎಂದು ತಡೆದಿದ್ದಾರೆ. ಊರಿನ ಅಭಿವೃದ್ಧಿ ವಿಚಾರದಲ್ಲಿ ಈ ರೀತಿ ಮಾಡಬಾರದು.ಎಲ್ಲ ಪಕ್ಷಗಳು ರಾಜಕೀಯ ಮರೆತು ಸಹಕರಿಸಬೇಕು ಎಂದು ಮನವಿ ಮಾಡಿದರು.
ಕಾಮಗಾರಿಗೆ ನಾವು ಅಡ್ಡಿ ಮಾಡಿಲ್ಲ
ಕಾಂಗ್ರೆಸ್ ಮುಖಂಡರ ಆರೋಪಗಳಿಗೆ ಪ್ರತಿಕ್ರಿಯಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಹನುಮಯ್ಯ ಅವರು, ರಸ್ತೆ ಡಾಂಬರೀಕರಣ ಕಾಮಗಾರಿಗೆ ನಾವು ಅಡ್ಡಿಪಡಿಸಿಲ್ಲ. ಕಳಪೆ ಕಾಮಗಾರಿ ನಡೆಯುತ್ತಿದೆ ಎಂಬ ಸಾರ್ವಜನಿಕರ ದೂರಿನ ಮೇರೆಗೆ ಸ್ಥಳಕ್ಕೆ ತೆರಳಿದ್ದೆ. ಈ ವೇಳೆ ಕಾಮಗಾರಿಗೆ ಅಗತ್ಯವಾದ ವಸ್ತುಗಳು ಖಾಲಿಯಾಗಿದ್ದರಿಂದ ಕೆಲಸಗಾರರು ಹೊರಟು ಹೋಗಿದ್ದರು. ಕಾಮಗಾರಿ ನಡೆಸದಂತೆ ನಾವೇನು ತಡೆದಿಲ್ಲ ಎಂದು ಹೇಳಿದರು.
ನಮಗೂ ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳು ಅಭಿವೃದ್ಧಿ ಆಗಬೇಕು. ಅದಕ್ಕೆ ನಮ್ಮ ಸಹಕಾರ ಇದ್ದೇ ಇರುತ್ತದೆ, ರಸ್ತೆ ಡಾಂಬರೀಕರಣ ಗುಣಮಟ್ಟದಿಂದ ಕೂಡಿರಬೇಕು ಎಂಬುದು ನಮ್ಮ ಆಶಯ. ಗ್ರಾಮಗಳ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ, ಪಕ್ಷಬೇಧ ನಾವು ಯಾವತ್ತೂ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.