ದಶಕಗಳುರುಳಿದರೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಿಲ್ಲ ಜಿಲ್ಲಾ ಕೇಂದ್ರ

ರಾಜ್ಯ ರಾಜಧಾನಿ ಬೆಂಗಳೂರಿಗೆ ಪಕ್ಕದಲ್ಲೇ ಇರುವ ಜಿಲ್ಲೆ ಎಂದರೆ ಅದು ಬೆಂಗಳೂರು ಗ್ರಾಮಾಂತರ ಜಿಲ್ಲೆ. ಕೈಗಾರಿಕಾ ಬೆಳವಣಿಗೆ, ವೇಗವಾದ ನಗರೀಕರಣ, ಭೂಮಿಯ ಮೌಲ್ಯ ಏರಿಕೆಯಾಗುತ್ತಿದೆ. ಆದರೆ, ಈ ಜಿಲ್ಲೆಗೆ ಇನ್ನೂ ಸಮರ್ಪಕ ಜಿಲ್ಲಾ ಕೇಂದ್ರವೇ ಇಲ್ಲ ಎನ್ನುವುದು ಅತ್ಯಂತ ವಿಷಾದನೀಯ ಸಂಗತಿ. ಜಿಲ್ಲೆ ರಚನೆಯಾಗಿ ಮೂರು ದಶಕಗಳಿಗಿಂತ ಹೆಚ್ಚು ಕಾಲ ಕಳೆದರೂ, ಜಿಲ್ಲೆಯ ಆಡಳಿತ ವ್ಯವಸ್ಥೆ ಇನ್ನೂ ಚದುರಿದ ಸ್ಥಿತಿಯಲ್ಲೇ ಕಾರ್ಯನಿರ್ವಹಿಸುತ್ತಿದೆ.

1986ರ ಜುಲೈ 31ರಂದು ಬೆಂಗಳೂರು ಜಿಲ್ಲೆಯಿಂದ ಪ್ರತ್ಯೇಕಗೊಂಡು ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಸ್ತಿತ್ವಕ್ಕೆ ಬಂತು. ಆಗ ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ, ರಾಮನಗರ, ಮಾಗಡಿ, ಕನಕಪುರ ಹಾಗೂ ಚನ್ನಪಟ್ಟಣ ತಾಲೂಕುಗಳನ್ನು ಒಳಗೊಂಡಂತೆ ಹೊಸ ಜಿಲ್ಲೆಯ ರಚನೆ ಮಾಡಲಾಗಿತ್ತು. ನಂತರ 2007ರ ಆಗಸ್ಟ್ 3ರಂದು ರಾಮನಗರ ಜಿಲ್ಲೆಯ ಪ್ರತ್ಯೇಕತೆ ನಡೆದ ಬಳಿಕ, ಬೆಂಗಳೂರು ಗ್ರಾಮಾಂತರ ಜಿಲ್ಲೆ ನಾಲ್ಕು ತಾಲೂಕುಗಳಿಗೆ ಸೀಮಿತವಾಯಿತು. ಆದರೆ, ಈ ಎಲ್ಲಾ ಆಡಳಿತಾತ್ಮಕ ಬದಲಾವಣೆಗಳ ನಡುವೆಯೂ ಜಿಲ್ಲೆಗೆ ಶಾಶ್ವತ ಜಿಲ್ಲಾ ಕೇಂದ್ರ ಘೋಷಣೆ ಆಗದಿರುವುದು ಸರ್ಕಾರದ ನಿರ್ಲಕ್ಷ್ಯವನ್ನು ಸ್ಪಷ್ಟಪಡಿಸುತ್ತದೆ.

ಪ್ರಸ್ತುತ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲ ಮತ್ತು ಹೊಸಕೋಟೆ ತಾಲೂಕುಗಳನ್ನು ಒಳಗೊಂಡಿದೆ. ಜಿಲ್ಲೆಯ ನಾಲ್ಕೂ ದಿಕ್ಕುಗಳಲ್ಲಿ ಕೈಗಾರಿಕಾ ವಲಯಗಳು ವೇಗವಾಗಿ ಬೆಳೆಯುತ್ತಿವೆ. ಸುಮಾರು 22 ಕೈಗಾರಿಕಾ ವಲಯಗಳು ಕಾರ್ಯನಿರ್ವಹಿಸುತ್ತಿದ್ದು, ಲಕ್ಷಾಂತರ ಕಾರ್ಮಿಕರಿಗೆ ಉದ್ಯೋಗ ಒದಗಿಸಲಾಗುತ್ತಿದೆ. ವಿಮಾನ ನಿಲ್ದಾಣ, ಕೈಗಾರಿಕಾ ಕಾರಿಡಾರ್, ಹೆದ್ದಾರಿಗಳು ಹಾಗೂ ಐಟಿ ಮತ್ತು ಉತ್ಪಾದನಾ ವಲಯದ ವಿಸ್ತರಣೆ ಜಿಲ್ಲೆಗೆ ಹೊಸ ಆರ್ಥಿಕ ಶಕ್ತಿಯನ್ನು ನೀಡುತ್ತಿದೆ. ಆದರೆ ಕೈಗಾರಿಕಾ ಅಭಿವೃದ್ಧಿಯಷ್ಟೇ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಾಕಾಗುವುದಿಲ್ಲ. ಜಿಲ್ಲೆಯ ಜನತೆಗೆ ಅತ್ಯವಶ್ಯಕವಾಗಿರುವ ಮೂಲಭೂತ ಆಡಳಿತಾತ್ಮಕ ಹಾಗೂ ಸಾರ್ವಜನಿಕ ಸೌಲಭ್ಯಗಳ ಕೊರತೆ ಇನ್ನೂ ಕಾಡುತ್ತಿದೆ.

ಸಮರ್ಪಕ ಜಿಲ್ಲಾಸ್ಪತ್ರೆ, ಜಿಲ್ಲಾ ವೈದ್ಯಕೀಯ ಕಾಲೇಜು, ಜಿಲ್ಲಾ ಕ್ರೀಡಾಂಗಣ, ಜಿಲ್ಲಾ ಕಾರಾಗೃಹ, ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ, ಸೈಬರ್ ಕ್ರೈಂ ಪೊಲೀಸ್ ಠಾಣೆ ಸೇರಿದಂತೆ ಅನೇಕ ಇಲಾಖೆಗಳು ಪೂರ್ಣ ಪ್ರಮಾಣದಲ್ಲಿ ಇಲ್ಲದಿರುವುದು ಜನರಿಗೆ ತೊಂದರೆ ಉಂಟುಮಾಡುತ್ತಿದೆ. ಹಲವು ಸರ್ಕಾರಿ ಕಚೇರಿಗಳು ಬೇರೆ ಬೇರೆ ತಾಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಸಾರ್ವಜನಿಕರು ಸಾಮಾನ್ಯ ಆಡಳಿತಾತ್ಮಕ ಕೆಲಸಗಳಿಗೂ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲಾ ಕೇಂದ್ರವಿಲ್ಲದ ರಾಜ್ಯದ ಏಕೈಕ ಜಿಲ್ಲೆ ಎಂಬ ಅಪಖ್ಯಾತಿಯೂ ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯದ್ದಾಗಿದೆ. ಒಂದು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆಡಳಿತ ಕೇಂದ್ರೀಕರಣ ಅತ್ಯಂತ ಮುಖ್ಯ. ಜಿಲ್ಲಾ ಕೇಂದ್ರವಿದ್ದರೆ ಸರ್ಕಾರಿ ಕಚೇರಿಗಳು, ನ್ಯಾಯಾಂಗ ವ್ಯವಸ್ಥೆ, ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಗಳು, ಸಾರಿಗೆ ವ್ಯವಸ್ಥೆ ಸೇರಿದಂತೆ ಅನೇಕ ಮೂಲಸೌಕರ್ಯಗಳು ಒಂದೇ ಸ್ಥಳದಲ್ಲಿ ಅಭಿವೃದ್ಧಿಯಾಗುತ್ತವೆ. ಇದರಿಂದ ಸಾರ್ವಜನಿಕರಿಗೆ ಸೇವೆಗಳು ಸುಲಭವಾಗಿ ದೊರೆಯುವುದಲ್ಲದೆ, ಆ ಪ್ರದೇಶದ ಆರ್ಥಿಕ ಚಟುವಟಿಕೆಗಳೂ ವೇಗ ಪಡೆಯುತ್ತವೆ.

ಈ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಮರ್ಪಕ ಜಿಲ್ಲಾ ಕೇಂದ್ರ ಘೋಷಣೆ ಮಾಡುವಂತೆ ಹಲವು ವರ್ಷಗಳಿಂದ ಸಾರ್ವಜನಿಕರು, ಸಂಘಟನೆಗಳು ಹಾಗೂ ಜನಪ್ರತಿನಿಧಿಗಳಿಂದ ಒತ್ತಾಯ ಕೇಳಿಬರುತ್ತಿದೆ. ಪ್ರಸ್ತುತ ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ತಾಲೂಕುಗಳು ಜಿಲ್ಲಾ ಕೇಂದ್ರ ಸ್ಥಾನಕ್ಕಾಗಿ ಪೈಪೋಟಿಯಲ್ಲಿವೆ. ಎರಡೂ ತಾಲೂಕುಗಳಿಗೆ ಭೌಗೋಳಿಕ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ತಮ್ಮದೇ ಆದ ಮಹತ್ವವಿದೆ. ಆದರೆ ಯಾವ ಸ್ಥಳವನ್ನೇ ಆಯ್ಕೆ ಮಾಡಿದರೂ, ಅದು ಜಿಲ್ಲೆಯ ನಾಲ್ಕು ತಾಲೂಕುಗಳ ಜನತೆಗೆ ಅನುಕೂಲವಾಗುವಂತೆ ಹಾಗೂ ಭವಿಷ್ಯದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡೇ ನಿರ್ಧಾರವಾಗಬೇಕಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಸರಿನಲ್ಲೇ “ಬೆಂಗಳೂರು” ಇದ್ದರೂ, ಅಭಿವೃದ್ಧಿಯ ವಿಚಾರದಲ್ಲಿ ಈ ಭಾಗ ಇನ್ನೂ ಗ್ರಾಮೀಣ ಸ್ವರೂಪದಲ್ಲೇ ಉಳಿದಿದೆ ಎನ್ನುವುದು ವಾಸ್ತವ. ಬೆಂಗಳೂರಿನ ವಿಸ್ತರಣೆಯ ಪರಿಣಾಮವಾಗಿ ಕೃಷಿ ಭೂಮಿಗಳು ಕೈಗಾರಿಕಾ ಮತ್ತು ವಸತಿ ಯೋಜನೆಗಳಿಗೆ ಪರಿವರ್ತನೆಗೊಳ್ಳುತ್ತಿವೆ. ಆದರೆ, ಅದಕ್ಕೆ ಸಮಾನವಾಗಿ ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ಒಳಚರಂಡಿ, ರಸ್ತೆ ಹಾಗೂ ಸಾರ್ವಜನಿಕ ಸಾರಿಗೆ ಸೌಲಭ್ಯಗಳ ಅಭಿವೃದ್ಧಿ ಆಗುತ್ತಿಲ್ಲ. ಕೈಗಾರಿಕೆಗಳ ಬೆಳವಣಿಗೆಗೆ ಮಾತ್ರ ಆದ್ಯತೆ ನೀಡಿದರೆ, ಸ್ಥಳೀಯ ಜನರ ಬದುಕಿನ ಗುಣಮಟ್ಟ ಹಿಂದುಳಿಯುವ ಅಪಾಯ ಇದೆ.

2025ರ ಅಂದಾಜಿನಂತೆ ಜಿಲ್ಲೆಯ ಜನಸಂಖ್ಯೆ 12,26,357 ದಾಟಿದೆ. ನಾಲ್ಕು ತಾಲೂಕುಗಳು, 17 ಹೋಬಳಿಗಳು, ಮೂರು ನಗರಸಭೆಗಳು, ಎರಡು ಪುರಸಭೆಗಳು ಹಾಗೂ ಎರಡು ಪಟ್ಟಣ ಪಂಚಾಯಿತಿಗಳನ್ನು ಹೊಂದಿರುವ ಈ ಜಿಲ್ಲೆಗೆ ಸಮರ್ಪಕ ಆಡಳಿತಾತ್ಮಕ ವ್ಯವಸ್ಥೆ ಅತ್ಯಗತ್ಯವಾಗಿದೆ. ಇಷ್ಟು ದೊಡ್ಡ ಜನಸಂಖ್ಯೆ ಹಾಗೂ ವೇಗವಾಗಿ ಬೆಳೆಯುತ್ತಿರುವ ಪ್ರದೇಶಕ್ಕೆ ಜಿಲ್ಲಾ ಕೇಂದ್ರವಿಲ್ಲ ಎನ್ನುವುದು ಅಭಿವೃದ್ಧಿಯ ದೃಷ್ಟಿಯಿಂದ ದೊಡ್ಡ ಕೊರತೆಯಾಗಿದೆ.

ರಾಜ್ಯದ ರಾಜಧಾನಿಗೆ ಅತೀ ಸಮೀಪದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕೈಗಾರಿಕಾ ಬೆಳವಣಿಗೆಯ ಜೊತೆಗೆ ಸಮಗ್ರ ಅಭಿವೃದ್ಧಿಯಲ್ಲಿಯೂ ಮಾದರಿಯಾಗಬೇಕಾಗಿದೆ. ಅದಕ್ಕಾಗಿ ಮೊದಲು ಜಿಲ್ಲಾ ಕೇಂದ್ರದ ಗೊಂದಲಕ್ಕೆ ತೆರೆ ಬಿದ್ದು, ಜನತೆಗೆ ಅನುಕೂಲವಾಗುವ ಶಾಶ್ವತ ಆಡಳಿತ ಕೇಂದ್ರವನ್ನು ಸರ್ಕಾರ ಘೋಷಿಸಬೇಕಾಗಿದೆ. ಇಲ್ಲದಿದ್ದರೆ “ರಾಜಧಾನಿಯ ಪಕ್ಕದ ಜಿಲ್ಲೆ” ಎಂಬ ಹೆಸರಿಗಷ್ಟೇ ಸೀಮಿತವಾಗಿ, ಮೂಲಭೂತ ಸೌಲಭ್ಯಗಳಿಗಾಗಿ ಕಾಯುವ ಜಿಲ್ಲೆಯಾಗಿಯೇ ಬೆಂಗಳೂರು ಗ್ರಾಮಾಂತರ ಉಳಿಯುವ ಸಾಧ್ಯತೆ ಇದೆ.

ಮೂಲಭೂತ ಬೇಡಿಕೆಯಾದ ಜಿಲ್ಲಾ ಕೇಂದ್ರ ಘೋಷಣೆಯೇ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ. ಬೆಂಗಳೂರು ಉತ್ತಮ ಜಿಲ್ಲೆ ಮಾಡಿ ಅಂದರೆ ಬೆಂಗಳೂರು ಉತ್ತರ ಜಿಲ್ಲೆ ಮಾಡಿದ್ದಾರೆ. ಜಿಲ್ಲಾ ಕೇಂದ್ರಕ್ಕಾಗಿ ಬೀದಿಗಿಳಿದು ಹಲವು ಹೋರಾಟಗಳು ಮಾಡಿದ್ದೇವೆ. ಹಲವು ಸಿಎಂಗಳಿಗೆ ಮನವಿ ಸಲ್ಲಿಸಿದ್ದೇವೆ. ನಮ್ಮದು ಅರಣ್ಯರೋಧನ. ಆಡಳಿತ ಮಾಡುವವರಿಗೆ ದೂರ ದೃಷ್ಟಿ‌ ಇಲ್ಲ. ಅಸಮರ್ಥ ಸರ್ಕಾರಗಳು ನಮ್ಮನ್ನು ಆಳುತ್ತಿವೆ.‌ ದಿನಬೆಳಗಾದರೆ ಕುರ್ಚಿ ಕಿತ್ತಾಟದಲ್ಲೇ ಮುಳುಗುತ್ತಿವೆ. ನಮ್ಮ ನ್ಯಾಯಯುತ ಬೇಡಿಕೆಯನ್ನು ಇದೂವರೆಗೂ ಈಡೇರಿಸಿಲ್ಲ. ಅರ್ಹ ತಾಲೂಕಿಗೆ ಜಿಲ್ಲಾ ಕೇಂದ್ರ ಘೋಷಣೆ ಮಾಡಬೇಕು. ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರ ಪಡೆಯಲು ಎಲ್ಲಾ ರೀತಿಯಲ್ಲೂ ಅರ್ಹತೆ ಹೊಂದಿದೆ ಎಂದು ಹೋರಾಟಗಾರ ರಾಜಘಟ್ಟ ರವಿ ತಿಳಿಸಿದ್ದಾರೆ.

ಜಿಲ್ಲೆಗೆ ಜಿಲ್ಲಾ ಕೇಂದ್ರ ಇಲ್ಲದಿರುವುದರಿಂದ ನಾಲ್ಕು ತಾಲೂಕುಗಳಿಗೆ ಎಲ್ಲಾ ರೀತಿಯಲ್ಲೂ ತೀವ್ರ ಸಮಸ್ಯೆ, ನಷ್ಟ ಉಂಟಾಗುತ್ತಿದೆ. ಜಿಲ್ಲೆಯನ್ನ ಅತಂತ್ರ ಸ್ಥಿತಿಯಲ್ಲೇ ಉಳಿಸಲಾಗಿದೆ. ಭವಿಷ್ಯದ ದೃಷ್ಠಿಯಲ್ಲಿ ಜಿಲ್ಲೆ ಅಭಿವೃದ್ಧಿಯಲ್ಲಿ ಕುಂಠಿತವಾಗುತ್ತಿದೆ. ಜಿಲ್ಲಾ ಕೇಂದ್ರ ಘೋಷಣೆಯಾದರೆ ಒಂದೇ ಸೂರಿನಡಿ ಇಲಾಖೆಗಳು ಇರುತ್ತವೆ. ಅನುದಾನಗಳು ಹೆಚ್ಚಿಗೆ ಬಂದು ಜಿಲ್ಲೆ ಅಭಿವೃದ್ಧಿಯಾಗುತ್ತದೆ. ಇಲಾಖಾ ಕೆಲಸಗಳಿಗೆ ಅಲ್ಲಿ ಇಲ್ಲಿ ಅಲೆಯುವುದು ತಪ್ಪುತ್ತದೆ. ಅಂದಿನಿಂದಲೂ ದೊಡ್ಡಬಳ್ಳಾಪುರವನ್ನು ಜಿಲ್ಲಾ‌ಕೇಂದ್ರವಾಗಿ ಘೋಷಣೆ ಮಾಡಬೇಕು ಎಂಬ ಕೂಗು ಇದೆ. ಬೇರೆ ತಾಲೂಕುಗಳು ಇತ್ತೀಚೆಗೆ ಅಭಿವೃದ್ಧಿ ಹೊಂದುತ್ತಿವೆ. ಆದರೆ, ದೊಡ್ಡಬಳ್ಳಾಪುರ ಮೊದಲಿನಿಂದಲೂ ಅಭಿವೃದ್ಧಿ ಹೊಂದುತ್ತಲೇ ಇದೆ.‌ ಆದ್ದರಿಂದ ದೊಡ್ಡಬಳ್ಳಾಪುರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು ಎಂಬ ವಾದ ದಟ್ಟವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಚಿದಾನಂದ್ ಹೇಳಿದ್ದಾರೆ.

Ramesh Babu

Journalist

Recent Posts

ನಿಷೇಧಿತ ಕ್ಯಾಟ್ ಫಿಶ್ ಸಾಕಾಣಿಕೆ ಸ್ಥಳಗಳಿಗೆ ಸಿಇಒ ದಿಢೀರ್ ಭೇಟಿ: ಸ್ಥಳದಲ್ಲೇ ಕ್ಯಾಟ್ ಫಿಶ್, ಹೊಂಡಗಳ ನಾಶ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆ ಹೋಬಳಿಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿಷೇಧಿತ ಕ್ಯಾಟ್‌ ಫಿಶ್‌ ಸಾಕಣೆ ಮಾಡುತ್ತಿದ್ದ ಹೊಂಡಗಳ…

27 minutes ago

ಗೋಮಾಳ ಭೂಮಿಯಲ್ಲಿನ ರೈತರನ್ನು ಒಕ್ಕಲೆಬ್ಬಿಸದಂತೆ ಜಿಲ್ಲಾಧಿಕಾರಿಗೆ ಮನವಿ

ಕೋಲಾರ: ಮೈಸೂರು ಮಹಾರಾಜರ ಕಾಲದಿಂದಲೂ ಸಕ್ಷಮ ಪ್ರಾಧಿಕಾರದಿಂದ ಕಾನೂನುಬದ್ಧವಾಗಿ ರೈತರಿಗೆ ಹಂಚಿಕೆಯಾಗಿರುವ ಸರ್ಕಾರಿ ಗೋಮಾಳ ಹಾಗೂ ಕಂದಾಯ ಭೂಮಿಯಲ್ಲಿನ ರೈತರನ್ನು…

3 hours ago

ವೈಯಕ್ತಿಕ ವಿಚಾರಕ್ಕೆ ಸಿಎಂ ಭೇಟಿ; ತಾಲೂಕಿನ ಹಿತರಕ್ಷಣೆಗಲ್ಲ? ವೆಂಕಟರಮಣಯ್ಯ ವಿರುದ್ಧ ಕಾಡನೂರು ಗ್ರಾ.ಪಂ ಮಾಜಿ ಅಧ್ಯಕ್ಷ ಮನು ಎನ್ ಆರ್ ಆರೋಪ

ದೊಡ್ಡಬಳ್ಳಾಪುರ: ಅಳಿಯನ ವರ್ಗಾವಣೆ ಸೇರಿದಂತೆ ವೈಯಕ್ತಿಕ ವಿಚಾರಗಳಿಗಾಗಿ ಮಾಜಿ ಶಾಸಕ ಟಿ. ವೆಂಕಟರಮಣಯ್ಯ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು…

5 hours ago

ಬರ ಘೋಷಣೆ ಬಳಿಕ ಸಿಎಂಗೆ ಮನವಿ: ಮಾಜಿ ಶಾಸಕ ಟಿ.ವೆಂಕಟರಮಣಯ್ಯ ನಡೆಗೆ ನಗರಸಭೆ ಉಪಾಧ್ಯಕ್ಷ ಬಂತಿ ವೆಂಕಟೇಶ್ ತರಾಟೆ

ದೊಡ್ಡಬಳ್ಳಾಪುರ: 2026ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕನ್ನು ಬರಪೀಡಿತ ತಾಲ್ಲೂಕುಗಳ ಪಟ್ಟಿಯಿಂದ ಕೈಬಿಟ್ಟ ಹಿನ್ನೆಲೆಯಲ್ಲಿ, ಮರು ಜಂಟಿ ಬೆಳೆ…

8 hours ago

ದೊಡ್ಡಬಳ್ಳಾಪುರ ಬರ ಘೋಷಣೆಗೆ ಕ್ರೆಡಿಟ್ ಫೈಟ್: ಸರ್ಕಾರ ಈಗಾಗಲೇ ಬರ ಘೋಷಿಸಿದೆ; ಮತ್ತೆ ಮನವಿ ಏಕೆ?: ವೆಂಕಟರಮಣಯ್ಯಗೆ ನಗರಸಭೆ ಉಪಾಧ್ಯಕ್ಷ ಬಂತಿ ವೆಂಕಟೇಶ್ ತಿರುಗೇಟು

ದೊಡ್ಡಬಳ್ಳಾಪುರ: 2026ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕನ್ನು ಬರಪೀಡಿತ ತಾಲ್ಲೂಕುಗಳ ಪಟ್ಟಿಯಿಂದ ಕೈಬಿಟ್ಟ ಹಿನ್ನೆಲೆಯಲ್ಲಿ, ಮರು ಜಂಟಿ ಬೆಳೆ…

8 hours ago

ದೇವನಹಳ್ಳಿ–ದೊಡ್ಡಬಳ್ಳಾಪುರದ ಹಲವು ಗ್ರಾಮಗಳ ಮೇಲೆ KIADB ಕಣ್ಣು: ಕೃಷಿ ಭೂಮಿ ಉಳಿಸಿಕೊಳ್ಳಲು ಮತ್ತೆ ಹೋರಾಟದ ಸದ್ದು

ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ಕೃಷಿ ಭೂಮಿಯ ಮೇಲೆ ಮತ್ತೊಮ್ಮೆ ಭೂಸ್ವಾಧೀನದ ಆತಂಕ ಆವರಿಸಿದೆ. ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕುಗಳ ವ್ಯಾಪ್ತಿಯಲ್ಲಿ…

10 hours ago