ದಲಿತ ಯುವಕನ ಮದುವೆಯಾಗಿದ್ದಕ್ಕೆ ತಂದೆಯೇ 7 ತಿಂಗಳ ಗರ್ಭಿಣಿ ಮಗಳನ್ನು ಭೀಕರವಾಗಿ ಹತ್ಯೆ

ದಲಿತ ಯುವಕನ ಮದುವೆಯಾಗಿದ್ದಕ್ಕೆ ತಂದೆಯೇ 7 ತಿಂಗಳ ಗರ್ಭಿಣಿ ಮಗಳನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಸಂಬಂಧ ಎಸ್​​ಪಿ ಗುಂಜನ್ ಆರ್ಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಗರ್ಭಿಣಿ ಮಾನ್ಯ ಪಾಟೀಲ್(19)ಮೇಲೆ ಅವರ ತಂದೆ ಪ್ರಕಾಶ್, ವೀರಣ್ಣ ಮತ್ತು ಅರುಣ್ ಎಂಬುವವರು ಹಲ್ಲೆ ನಡೆಸಿದ್ದು, ಈ ಘಟನೆಯಲ್ಲಿ ಮಾನ್ಯ ಸಾವನ್ನಪ್ಪಿದ್ದಾರೆ.

ನಿನ್ನೆ ಸಂಜೆ ಸುಮಾರು 6 ರಿಂದ 6.30ರ ಸುಮಾರಿಗೆ ಮನೆಯಲ್ಲಿ ಹಲ್ಲೆ ನಡೆದಿದ್ದು, ರಾತ್ರಿ 9.30ರ ಸುಮಾರಿಗೆ ಮಾನ್ಯ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಲ್ಲೆಗೆ ಸ್ಪ್ರಿಂಕ್ಲರ್ ಪೈಪ್ ಮತ್ತು ಕೊಡಲಿಯನ್ನು ಬಳಸಲಾಗಿದ್ದು, ಮಾನ್ಯ ತಲೆಗೆ ಗಂಭೀರ ಏಟಾಗಿತ್ತು. ಈ ಘಟನೆಗೆ ಅಂತರಜಾತಿ ವಿವಾಹವೇ ಕಾರಣ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ ಪೊಲೀಸರು ತಿಳಿಸಿದ್ದಾರೆ.

ಮಾನ್ಯ ಅವರ ಮಾವ ಮತ್ತು ಅತ್ತೆಗೂ ಗಾಯಗಳಾಗಿವೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಪ್ರಕಾಶ್ ಮತ್ತು ಅವರ ಇಬ್ಬರು ಸಂಬಂಧಿಕರನ್ನು ವಶಕ್ಕೆ ಪಡೆದಿದ್ದು, ಎಫ್‌ಐಆರ್ ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.

​ಮಾನ್ಯ ಪಾಟೀಲ ಇನಾಂವೀರಾಪುರ ಗ್ರಾಮದ ದಲಿತ ಸಮುದಾಯದ ಯುವಕ ವಿವೇಕಾನಂದ ದೊಡ್ಡಮನಿ ಎಂಬಾತನನ್ನು ಪ್ರೀತಿಸಿದ್ದಳು. ಈ ಮದುವೆಗೆ ಮೇಲ್ವರ್ಗಕ್ಕೆ ಸೇರಿದ ಯುವತಿಯ ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಪೊಲೀಸರ ಸಮ್ಮುಖದಲ್ಲಿ ನಡೆದ ರಾಜಿ ಪಂಚಾಯಿತಿಯ ಬಳಿಕ ಏಳು ತಿಂಗಳ ಹಿಂದೆ ಇಬ್ಬರೂ ವಿವಾಹವಾಗಿದ್ದರು. ನಂತರ ಪ್ರಾಣ ಭಯದಿಂದ ಹಾವೇರಿ ಜಿಲ್ಲೆಯಲ್ಲಿ ನೆಲೆಸಿದ್ದ ದಂಪತಿ, ಡಿಸೆಂಬರ್​​ 8ರಂದು ಊರಿಗೆ ಮರಳಿದ್ದರು. ಆದರೆ, ವೈರತ್ವದ ಕಿಚ್ಚು ಹಚ್ಚಿಕೊಂಡಿದ್ದ ಯುವತಿಯ ತಂದೆ, ಚಿಕ್ಕಪ್ಪ ಹಾಗೂ ಸಹೋದರ ಭಾನುವಾರ ಸಂಜೆ ವಿವೇಕಾನಂದನ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಭೀಕರ ದಾಳಿ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!