ದೊಡ್ಡಬಳ್ಳಾಪುರ: ದಲಿತ ಬರಹಗಾರರು ತಮ್ಮ ಸಮುದಾಯಕ್ಕೆ ಮುಖಮಾಡಿ ಮಾತನಾಡಬೇಕು, ಬೆನ್ನು ಮಾಡಿ ಅಲ್ಲ. ತಮ್ಮ ಸುತ್ತಲಿನ ಆಗು ಹೋಗುಗಳಿಗೆ ಸ್ಪಂದಿಸುವ ಗುಣವನ್ನು ಬೆಳಸಿಕೊಳ್ಳಬೇಕು ಎಂದು ನಾಟಕಕಾರ ಡಾ.ಕೆ.ವೈ.ನಾರಾಯಣಸ್ವಾಮಿ ಹೇಳಿದರು.
ನಗರದ ಆರ್.ಡಿ.ಕನ್ವಂಷನ್ ಹಾಲ್ನಲ್ಲಿ ಭಾನುವಾರ ನಡೆದ ಡಾ.ಡಿ.ಆರ್.ನಾಗರಾಜ್ ಬಳಗ ಮತ್ತು ಬಿಗ್ ಕನ್ನಡ ಸಹಯೋಗದಲ್ಲಿ ಪ್ರಕಟಿಸಲಾಗಿರುವ ಉಪನ್ಯಾಸಕ ಡಾ.ಪ್ರಕಾಶ್ ಮಂಟೇದ ಅವರು ಬರೆದಿರುವ ‘ಅರಿವೇ ಕಂಡಾಯ’ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಲೋಕ ಸಂಚಾರದ ಅನುಭವ ಇದ್ದಾಗ ಮಾತ್ರ ಭಾರತ ನಮಗೆ ಅರ್ಥವಾಗುವುದು ಸುಲಭವಾಗಲಿದೆ. ಸಾಮಾಜಿಕ ಸತ್ಯದ ಸಂಗತಿಗಳನ್ನು ಗುಣವಾಚಕಗಳು ಮುಚ್ಚಿಡುತ್ತವೆ. ಹಾಗಾಗಿ ಬರಹಗಾರರು ಗುಣವಾಚಕಗಳಿಗೆ ಒಳಗಾಗದೆ ಸಂವಾದಗಳನ್ನು ಹುಟ್ಟುಹಾಕಬೇಕು. ನಮ್ಮ ಇಂದಿನ ಓದು ಸಂವಿಧಾನಕ್ಕೆ ಬಂದು ನಿಂತಿದೆ, ಅದರಿಂದ ಮುಂದಕ್ಕೆ ಹೋಗಿಲ್ಲ. ಸಂವಿಧಾನದ ಅಚೆಗಿನ ಓದು ಈಗ ನಮ್ಮದಾಗಬೇಕಿದೆ. ಸದಾ ಜನ ಚಳುವಳಿಗಳ ಜೊತೆಗಿರುವವರು ಬರೆದಾಗ ಆದು ವಾಸ್ತವಕ್ಕೆ ಹತ್ತಿರವಾಗಿರಲಿದೆ. ನಮ್ಮ ಹೊಟ್ಟೆಯ ಹಸಿವು ನೀಗಿದ ತಕ್ಷಣ ಜ್ಞಾನದ ಹಸಿವನ್ನು ಮರೆಯುತ್ತಿದ್ದೇವೆ. ಈ ಬಗ್ಗೆ ನಾವು ಸದಾ ಎಚ್ಚರವಹಿಸಬೇಕಾಗಿದೆ ಎಂದರು.
ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಪ್ರಗತಿಪರ ಚಿಂತಕ ಮಂಜುನಾಥ ಎಂ. ಅದ್ದೆ, ಕಲ್ಯಾಣ ರಾಜ್ಯದ ನಿರ್ಮಾಣಕ್ಕಾಗಿ ರಾಜಕಾರಣ ನಡೆಯಬೇಕು. ಆದರೆ ಈಗ ಒಬ್ಬರನ್ನು ಮತ್ತೊಬ್ಬರು ಬಗ್ಗುಬಡಿಯುವ ರಾಜಕಾರಣ ನಡೆಯುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದರು.
ಭಾಷೆ ದುಡಿಯುವ ಜನರ ಗುರುತಿಸುವಿಕೆಯಾಗಿದೆ. ಹೆಚ್ಚು ವಿದ್ಯೆ ಕಲಿತವರಲ್ಲಿ ಜಾತಿ ವ್ಯವಸ್ಥೆ ಇಲ್ಲದಾಗಬೇಕಿತ್ತು. ಆದರೆ ವಿಶ್ವ ವಿದ್ಯಾಲಯಗಳಿಗೆ ಹೋಗುತ್ತಿದ್ದಂತೆ ಜಾತಿದಿಗಳಾಗಿ ರೂಪುಗೋಳ್ಳುತ್ತಿರುವುದು ಅತ್ಯಂತ ಅಪಾಯಕಾರಿ ಸಂಗತಿಯಾಗಿದೆ. ಇದು ದುರಿತಕಾಲವಾಗಿದ್ದು, ಇಲ್ಲಿ ಜಾತಿ ಮೇಲಾಟದಲ್ಲಿ ಮುಳುಗದೆ ಮುನ್ನಡೆಯಬೇಕು. ಪ್ರಯೋಗಾಲಯದಲ್ಲಿ ಕಪ್ಪೆಯನ್ನು ಸೀಳುವಂತೆ ಸೀಳಿ ನೋಡುವುದನ್ನು ಬಿಟ್ಟು ನಡೆಯಬೇಕಾಗಿದೆ. ನಮ್ಮ ಹಕ್ಕುಗಳನ್ನು ಪಡೆಯುವ ಮಾರ್ಗ ಸದಾ ಕಾಲ ನ್ಯಾಯಯುತವಾಗಿರಬೇಕಾಗಿದೆ ಎಂದರು.
ಪುಸ್ತಕ ಕುರಿತು ಮಾತನಾಡಿದ ಪುಸ್ತಕ ಪ್ರಕಾಶಕ ಆಕೃತಿ ಗುರುಪ್ರಸಾದ್, ಪ್ರತಿ ನಿತ್ಯವು ರಾಜಕಾರಣ,ಪ್ರಸ್ತುತ ಸಂಗತಿಗಳ ಕುರಿತ ಅಂಕಣಗಳನ್ನು ಎಲ್ಲರು ಬರೆಯುತ್ತಾರೆ. ಆದರೆ ತಮ್ಮ ಸಮುದಾಯದ ಕುರಿತು ಅಂಕಗಳು ಬರೆಯುವುದು ಕಡಿಮೆ. ಇಂತಹ ಸಂದರ್ಭದಲ್ಲಿ ಉಪನ್ಯಾಸಕ ಡಾ.ಪ್ರಕಾಶ್ ಮಂಟೇದ ಅವರ ‘ಅರಿವೇ ಕಂಡಾಯ’ ಅಂಕಣ ಬರಹಗಳ ಪುಸ್ತಕ ಉತ್ತಮವಾಗಿ ಮೂಡಿ ಬಂದಿದೆ ಎಂದರು.
‘ಅರಿವೇ ಕಂಡಾಯ’ ಪುಸ್ತಕ ಕುರಿತು ಲೇಖಕಿ ಡಾ.ಕೆ.ವಿ.ನೇತ್ರಾವತಿ,ಡಾ.ರವಿಕುಮಾರ್ ನೀಹ,ಡಾ.ಸುಭಾಷ್ ರಾಜಮಾನೆ, ರವಿಕುಮಾರ್ ಬಾಗಿ ಮಾತನಾಡಿದರು. ಉದ್ಯಮಿ ಜಿ.ರಾಜಗೋಪಾಲ್, ಪ್ರಕಾಶಕಿ ಜಗದಾಂಬ ಇದ್ದರು.