
ದೊಡ್ಡಬಳ್ಳಾಪುರದ ಕಾಡತಿಪ್ಪೂರು ಗ್ರಾಮದಲ್ಲಿ ಸುಮಾರು 1300 ಜನಸಂಖ್ಯೆ ಇದ್ದು, 280 ಕುಟುಂಬಗಳು ವಾಸವಿದ್ದಾರೆ. ಅದರಲ್ಲಿ ಎಸ್ಸಿ ಮತ್ತು ಎಸ್ಟಿ ಜನಾಂಗದವರೇ ಹೆಚ್ಚು. ಇದರಲ್ಲಿ ಎಸ್ಟಿ ಜನಾಂಗ ವಾಸವಿರುವ ಕಾಲೋನಿಯಲ್ಲಿ ಚರಂಡಿ ವ್ಯವಸ್ಥೆಯೇ ಇಲ್ಲ. ಇಲ್ಲಿ ಎಲ್ಲವೂ ರಸ್ತೆಯ ಮೇಲೆಯೇ ಹರಿಯುತ್ತದೆ. ಈ ಕಾಲೋನಿಯಲ್ಲಿ ಇದುವರೆಗೂ ಚರಂಡಿ ಮಾಡಲು ಅಧಿಕಾರಿಗಳು ಮನಸ್ಸೇ ಮಾಡಿಲ್ಲ. ಬರೀ ಸುಂಕ ವಸೂಲಿಗೆ ಬಂದು ವಾಪಸ್ ಆಗುವ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಹಿಡಿ ಶಾಪ ಹಾಕುತ್ತಿದ್ದಾರೆ.

ಇನ್ನೂ, ಈ ಗ್ರಾಮ ತಾಲೂಕಿನ ಕೊನೆಯ ಪಂಚಾಯತಿ ಭಕ್ತರಹಳ್ಳಿಗೆ ಸೇರಿದ ಗ್ರಾಮವಾಗಿದೆ. ಹಾಗಾಗಿ ಇಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಚರಂಡಿ ಇಲ್ಲದೆ ನೀರು ನಿಂತಲ್ಲೇ ನಿಂತು ಕೊಳೆತು ವಾಸನೆ ಬಂದಿದೆ. ರಾತ್ರಿ ಆದರೆ ಸಾಕು ಮನೆಯ ಮುಂದೆ ಕುಳಿತು ಊಟ ಮಾಡಲು ಆಗಲ್ಲ. ಜೊತೆಗೆ ರಾತ್ರಿ ವೇಳೆ ವಯೋವೃದ್ದರು ರಸ್ತೆಯ ಮೇಲೆ ಓಡಾಡಲು ಆಗಲ್ಲ. ಕೊಳಚೆ ನೀರಲ್ಲಿ ಕಾಲಿಟ್ಟು ಬೀಳಲಿದ್ದಾರೆ. ಇನ್ನು ಕೊಳಚೆ ನೀರಿಂದ ಸೊಳ್ಳೆ ಹಾಗೂ ಹಾವು, ಚೇಳು ಕಾಟ ಹೆಚ್ಚಾಗಿದ್ದು, ಸಣ್ಣ ಸಣ್ಣ ಮಕ್ಕಳಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿದ್ದಾರೆ. ಮಳೆಗಾಲ ಬಂದಾಗ ಕೊಳಚೆ ನೀರು ನೇರವಾಗಿ ಮನೆಗಳಿಗೆ ನುಗ್ಗುತ್ತವೆ.. ಹಾಗಾಗಿ ಪಂಚಾಯತಿ ಅಧಿಕಾರಿಗಳು ರಸ್ತೆ ಮಾಡಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ. ಅಲ್ಲದೆ ಪಂಚಾಯತಿಯಲ್ಲಿ ಸಂಗ್ರಹ ಆಗುವ ತೆರಿಗೆ ಹಣದಲ್ಲಿ ದಲಿತ ಕಾಲೋನಿ ಅಭಿವೃದ್ಧಿಗೆ ಎಂದೆ ಇಂತಿಷ್ಟು ಹಣ ಎಂದು ತೆಗೆದು ಅಭಿವೃದ್ಧಿ ಮಾಡುತ್ತಾರೆ. ಆದರೆ ಇಲ್ಲಿನ ಅಧಿಕಾರಿಗಳು ಈ ಸಮಸ್ಯೆಗೆ ಕಿವಿ ಕೊಡದೆ ಇರುವುದು ವಿಪರ್ಯಾಸ. ಇದಕ್ಕೆ ಕಾಲೋನಿ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ..

ಒಟ್ಟಾರೆ, ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನ ಒದಗಿಸಬೇಕಾದ ಅಧಿಕಾರಿಗಳೇ ನಿರ್ಲಕ್ಷ್ಯ ವಹಿಸುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಮೊದಲ ಬಾರಿಗೆ ಶಾಸಕರಾಗಿರುವ ಧೀರಜ್ ಮುನಿರಾಜ್ ವಿಶೇಷ ಅನುಧಾನದಲ್ಲಿ ಈ ಗ್ರಾಮಕ್ಕೆ ಚರಂಡಿ ವ್ಯವಸ್ಥೆ ಕಲ್ಪಿಸಿಕೊಡುತ್ತಾರಾ ಕಾದು ನೋಡಬೇಕಿದೆ.