ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಇಂದು ಮುಂಜಾನೆ ದಟ್ಟವಾದ ಮಂಜಿನಿಂದ ಮುಸುಕಿದ ವಾತಾವರಣ ನಿರ್ಮಾಣವಾಗಿದ್ದ ಪರಿಣಾಮ ಜನರು ಕೊರೆವ ಚಳಿಗೆ ಗಢಗಢ ನಡುಗಿದರು.
ತಾಲೂಕಿನಾದ್ಯಂತ ವಿಪರೀತ ಮಂಜು ಆವರಿಸಿದ್ದ ಹಿನ್ನೆಲೆಯಲ್ಲಿ ರಸ್ತೆ, ಮನೆಗಳು ಕಾಣದಂತಾಗಿತ್ತು. ನೋಡುಗರಿಗೆ ಆಕಾಶ ಹಾಗೂ ಭೂಮಿ ಒಂದೇ ಎಂಬಂತೆ ಭಾಸವಾಯಿತು. ಇದರಿಂದ ವಾಹನಗಳು ಹೆಡ್‌ಲೈಟ್ ಹಾಕಿಕೊಂಡು ನಿಧಾನಗತಿಯಲ್ಲಿ ಸಂಚರಿಸಿದವು. ಜನರು ಚಳಿಯಿಂದ ಬೆಚ್ಚನೆಯ ಉಡುಪುಗಳನ್ನು ಧರಿಸುವಂತಾಯಿತು. ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಕೂಲಿ ಕಾರ್ಮಿಕರು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಮಂಜಿನ ನಡುವೆಯೇ ತೆರಳಿದರು.
ಕೊರೆಯುವ ಚಳಿಯಲ್ಲಿಯೇ ಮನೆಮನೆಗೆ ಹಾಲು ಹಾಗೂ ಪತ್ರಿಕೆ ತಲುಪಿಸುವ ಹುಡುಗರು ಎಂದಿನಂತೆ ತಮ್ಮ ಕಾರ್ಯನಿರ್ವಹಿಸಿದರು. ಸೂರ್ಯ ಉದಯಿಸಿ ಬೆಚ್ಚನೆಯ ಕಿರಣಗಳನ್ನು ಯಾವಾಗ ಹೊರಸೂಸಿಸುತ್ತಾನೆ ಎಂದು ಜನ ಕಾದುಕುಳಿತ್ತಿದ್ದರು.