ದಕ್ಷಿಣ ಕಾಶಿ ಶಿವಗಂಗೆ ಬೆಟ್ಟದಲ್ಲಿ ತೀರ್ಥೋದ್ಭವ: ವಿಸ್ಮಯ‌ ಕಣ್ತುಂಬಿಕೊಂಡ ಭಕ್ತಗಣ

ನೆಲಮಂಗಲ ತಾಲೂಕಿನಲ್ಲಿರುವ ದಕ್ಷಿಣ ಕಾಶಿಯಂದೇ‌ ಕರೆಯಲ್ಪಡುವ ಶಿವಗಂಗೆಯಲ್ಲಿ ಪ್ರತಿ ವರ್ಷದ ಮಕರ ಸಂಕ್ರಾತಿಯಂದು ತೀರ್ಥೋದ್ಭವವಾಗಿದೆ. ಬೆಟ್ಟದ ತುತ್ತತುದಿ ಸುಮಾರು 4,547 ಅಡಿ ಮೇಲೆ ಇಂದು ಬೆಳಿಗ್ಗೆ 8.25 ಗಂಟೆಗೆ ಗಂಗೋತ್ಪತ್ತಿಯಾಗಿದ್ದು, ಪ್ರಕೃತಿಕ ವಿಸ್ಮಯವನ್ನ ಭಕ್ತರು ಕಣ್ತುಂಬಿಕೊಂಡಿದ್ದಾರೆ.

ಶಿವಗಂಗೆ ಕ್ಷೇತ್ರದಲ್ಲಿ ಪ್ರತಿವರ್ಷ ಮಕರ ಸಂಕ್ರಮಣದಂದು ನಡೆಯುವ ಗಂಗಾಧರೇಶ್ವರ ಸ್ವಾಮಿಯ ಗಿರಿಜಾ ಕಲ್ಯಾಣ ಮಹೋತ್ಸವ ಅದ್ಧೂರಿಯಾಗಿ ನೆರವೇರಿತು. ತೀರ್ಥೋದ್ಭವವಾದ ತೀರ್ಥ ತಂದು ಗಿರಿಜಾ ಕಲ್ಯಾಣವನ್ನು ನೆರವೇರಿಸಲಾಯಿತು.

ಮಕರ ಸಂಕ್ರಾತಿಯಂದು ನಡೆಯುವ ಗಿರಿದಾ ಕಲ್ಯಾಣ ಮಹೋತ್ಸವ ನೋಡಲು ಶಿವಗಂಗಾ ಬೆಟ್ಟಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದಾರೆ, ಬಂದಂತಹ ಭಕ್ತಾದಿಗಳಿಗೆ ಅನ್ನದಾಸೋಹವನ್ನು ಏರ್ಪಡಿಸಲಾಗಿದೆ. ಇಂದು ಶಿವಗಂಗೆ ಬೆಟ್ಟಕ್ಕೆ 50 ಸಾವಿರಕ್ಕೂ ಹೆಚ್ಚು ಜನರು ಬರುವ ಹಿನ್ನೆಲೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಒಬ್ಬರು ಡಿವೈಎಸ್ಪಿ, ನಾಲ್ವರು ಅರಕ್ಷಕ ನಿರೀಕ್ಷಕರು, 8 ಮಂದಿ ಅರಕ್ಷಕ ಉಪನಿರೀಕ್ಷಕರು ಸೇರಿದಂತೆ 200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ.

ಗಿರಿಜಾ ಕಲ್ಯಾಣ ಮಹೋತ್ಸವದಲ್ಲಿ ಜಿಲ್ಲಾಧಿಕಾರಿ, ತಹಶೀಲ್ದಾರ್ ಹಾಗೂ ಸ್ಥಳೀಯ ಶಾಸಕ ಎನ್.ಶ್ರೀನಿವಾಸ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *