
ವೃದ್ಧ ದಂಪತಿ ನಿಗೂಢವಾಗಿ ಸಾವನ್ನಪ್ಪಿದ ಪ್ರಕರಣ, ತಿರುವು ಪಡೆದುಕೊಂಡಿದೆ. ಹಣ ಮತ್ತು ಚಿನ್ನದ ಆಸೆಗಾಗಿ, ಸ್ವಂತ ಸೋದರನ ಮಗನಾದ ವೈದ್ಯನೇ ಅನಸ್ತೇಶಿಯಾ ಚುಚ್ಚುಮದ್ದು ನೀಡಿ ವೃದ್ದ ದಂಪತಿಯನ್ನು ಕೊಲೆ ಮಾಡಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.
ಸಾರ್ವಜನಿಕರನ್ನು ಬೆಚ್ಚಿಬೀಳಿಸಿದ್ದ ವೃದ್ಧ ದಂಪತಿಯ ನಿಗೂಢ ಸಾವಿನ ಪ್ರಕರಣವನ್ನು ಪೊಲೀಸರು ಕೇವಲ 24 ಗಂಟೆಗಳಲ್ಲಿ ಭೇದಿಸಿ, ಭೀಕರ ಸತ್ಯವನ್ನು ಬಹಿರಂಗಗೊಳಿಸಿದ್ದಾರೆ. ಹಣ ಹಾಗೂ ಚಿನ್ನದ ಆಸೆಗೆ ಸ್ವಂತ ದೊಡ್ಡಪ್ಪ–ದೊಡ್ಡಮ್ಮನನ್ನೇ ವೈದ್ಯನೊಬ್ಬ ಕೊಂದಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ.
ಭದ್ರಾವತಿಯ ಭೂತನ್ ಗುಡಿ ಪ್ರದೇಶದಲ್ಲಿ ವಾಸವಾಗಿದ್ದ ಚಂದ್ರಪ್ಪ (68) ಮತ್ತು ಅವರ ಪತ್ನಿ ಜಯಮ್ಮ (65) ಅವರು ಜನವರಿ 20ರ ಬೆಳಗ್ಗೆ ಅನುಮಾನಾಸ್ಪದವಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಮನೆಯೊಳಗೆ ಯಾವುದೇ ಗಲಾಟೆ ಗುರುತುಗಳಿರಲಿಲ್ಲ. ದಂಪತಿಯ ದೇಹಗಳ ಮೇಲೂ ಗಾಯದ ಗುರುತುಗಳು ಕಾಣಿಸದ ಕಾರಣ, ಆರಂಭದಲ್ಲಿ ಇದು ಸಹಜ ಸಾವು ಎನ್ನುವ ಅನುಮಾನವೂ ಮೂಡಿತ್ತು. ಆದರೆ ಮನೆಯಲ್ಲಿದ್ದ ಚಿನ್ನಾಭರಣಗಳು ನಾಪತ್ತೆಯಾಗಿದ್ದರಿಂದ ಪ್ರಕರಣ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿತು.
ಮಕ್ಕಳು ಕರೆ ಮಾಡಿದರೂ ಸ್ಪಂದನೆ ಇಲ್ಲ
ಚಂದ್ರಪ್ಪ–ಜಯಮ್ಮ ದಂಪತಿಗೆ ಮೂವರು ಗಂಡು ಮಕ್ಕಳಿದ್ದು, ಎಲ್ಲರೂ ಮದುವೆಯಾಗಿ ಬೇರೆ ಬೇರೆ ಕಡೆ ನೆಲೆಸಿದ್ದರು. ಅನ್ಯೋನ್ಯವಾಗಿ ಬದುಕುತ್ತಿದ್ದ ಈ ದಂಪತಿ ತಮ್ಮ ಮನೆಯಲ್ಲೇ ವಾಸವಾಗಿದ್ದರು. ಎಂದಿನಂತೆ ರಾತ್ರಿ ಊಟ ಮಾಡಿ ಮಲಗಿದ್ದವರು, ಬೆಳಗ್ಗೆ ಶವವಾಗಿ ಪತ್ತೆಯಾಗಿರುವುದು ದಂಪತಿಯ ಮಕ್ಕಳಿಗೆ ಆಘಾತ ನೀಡಿತ್ತು. ಬೆಳಗ್ಗೆ ಮಕ್ಕಳಿಂದ ಕರೆ ಬಂದರೂ ಕರೆ ಸ್ವೀಕರಿಸದ ಕಾರಣ ಆತಂಕಗೊಂಡ ಅವರು, ಸ್ಥಳೀಯರಿಗೆ ಮನೆಗೆ ಹೋಗಿ ಪರಿಶೀಲಿಸುವಂತೆ ತಿಳಿಸಿದರು. ಮನೆಗೆ ತೆರಳಿದಾಗ ಬೆಡ್ರೂಮ್ನಲ್ಲಿ ಚಂದ್ರಪ್ಪ ಅವರ ಶವ ಪತ್ತೆಯಾಗಿದ್ದು, ಹಾಲ್ನಲ್ಲಿ ಪತ್ನಿ ಜಯಮ್ಮ ಅವರ ಶವ ಬಿದ್ದಿರುವುದು ಕಂಡುಬಂದಿತು.
ತನಿಖೆ ವೇಳೆ ಈ ಜೋಡಿ ಕೊಲೆಯ ಆರೋಪಿ ಬೇರೆ ಯಾರೂ ಅಲ್ಲ ಮಗನೇ (ಚಂದ್ರಪ್ಪನ ಸೋದರನ ಮಗ) ಎಂಬುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಾಗ ಕುಟುಂಬಸ್ಥರು ಬೆಚ್ಚಿಬಿದ್ದರು.
ಮೃತ ಚಂದ್ರಪ್ಪ ಅವರ ಸಹೋದರ ಫಾಲಾಕ್ಷಪ್ಪ ಅವರ ಪುತ್ರ ಡಾ. ಮಲ್ಲೇಶ್ ಈ ಕೃತ್ಯದ ರೂವಾರಿ ಎನ್ನುವುದು ತನಿಖೆಯಲ್ಲಿ ಬಹಿರಂಗವಾಯಿತು.
ಆರೋಪಿ ಮಲ್ಲೇಶ್ ಬೀರನಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ವೃತ್ತಿಯಲ್ಲಿ ಆಯುರ್ವೇದ ವೈದ್ಯನಾಗಿದ್ದ. ವಿಶೇಷವೆಂದರೆ, ಚಂದ್ರಪ್ಪ–ಜಯಮ್ಮ ದಂಪತಿಗೆ ಯಾವುದೇ ಆರೋಗ್ಯ ಸಮಸ್ಯೆ ಬಂದಾಗ ಅವರು ಇದೇ ಮಲ್ಲೇಶ್ ಬಳಿ ಚಿಕಿತ್ಸೆ ಪಡೆಯುತ್ತಿದ್ದರು. ಈ ನಂಬಿಕೆಯನ್ನು ದುರುಪಯೋಗ ಮಾಡಿಕೊಂಡ ಮಲ್ಲೇಶ್, ಯಾವುದೇ ಅನುಮಾನ ಬಾರದಂತೆ ಕೊಲೆ ಮಾಡುವ ಸಂಚು ರೂಪಿಸಿದ್ದ.
ಅನಸ್ತೇಶಿಯಾ ಇಂಜೆಕ್ಷನ್ ಕೊಟ್ಟು ಕೊಲೆ:
ಪೊಲೀಸರ ತನಿಖೆಯಲ್ಲಿ ತಿಳಿದುಬಂದಂತೆ, ಆರೋಪಿ ಮಲ್ಲೇಶ್ ಬಹಳಷ್ಟು ಸಾಲ ಮಾಡಿಕೊಂಡಿದ್ದ. ತನ್ನ ಸಾಲ ತೀರಿಸಲು ದೊಡ್ಡಪ್ಪನ ಬಳಿ 15 ಲಕ್ಷ ರೂಪಾಯಿ ನೀಡುವಂತೆ ಕೇಳಿದ್ದ. ಆದರೆ ಚಂದ್ರಪ್ಪ ದಂಪತಿಗಳು ಸಾಲ ಕೊಡಲು ನಿರಾಕರಿಸಿದ್ದರು. ಇದರಿಂದ ಕುಪಿತನಾದ ಮಲ್ಲೇಶ್, ದೊಡ್ಡಪ್ಪ–ದೊಡ್ಡಮ್ಮನ ಬಳಿ ಇದ್ದ ಚಿನ್ನಾಭರಣದ ಮೇಲೆ ಕಣ್ಣು ಹಾಕಿದ್ದ.
ಜನವರಿ 19ರಂದು ಮಧ್ಯಾಹ್ನ ಮನೆಗೆ ತೆರಳಿದ ಮಲ್ಲೇಶ್, ಮಂಡಿನೋವು ಕಡಿಮೆಯಾಗಲು ಇಂಜೆಕ್ಷನ್ ನೀಡುತ್ತೇನೆ ಎಂದು ನಂಬಿಸಿ, ಸುಮಾರು 50 ಎಂ.ಜಿ. ಅನಸ್ತೇಶಿಯಾ ಇಂಜೆಕ್ಷನ್ (ಓವರ್ಡೋಸ್) ನೀಡಿ ಇಬ್ಬರನ್ನೂ ಕೊಲೆ ಮಾಡಿದ್ದಾನೆ. ಬಳಿಕ ಅವರ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿ ಅಡವಿಟ್ಟು ತನ್ನ ಸಾಲವನ್ನು ತೀರಿಸಿಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
24 ಗಂಟೆಗಳಲ್ಲಿ ಪ್ರಕರಣ ಭೇದಿಸಿದ ಪೊಲೀಸರು:
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಭದ್ರಾವತಿ ಪೊಲೀಸರು, ವೈಜ್ಞಾನಿಕವಾಗಿ ತನಿಖೆ ನಡೆಸಿ ಘಟನೆ ನಡೆದ ಕೇವಲ 24 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.