ಥೇಟ್ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅರಳುಮಲ್ಲಿಗೆ ಗ್ರಾಮದಲ್ಲಿ ಅಜ್ಜಿಯ ಚಿನ್ನದ ಮಾಂಗಲ್ಯ ಸರ ಕದ್ದಿದ್ದ ಹಾಗೇ ಇದೇ ಆರೋಪಿಗಳು ರಾಮನಗರದಲ್ಲೂ ಸಹ ಸುಮಾರು 70 ವರ್ಷದ ವೃದ್ಧೆ ಬಳಿ ಸುಮಾರು 50 ಗ್ರಾಂ ತೂಕದ ಮಾಂಗಲ್ಯ ಸರ ಕದ್ದಿದ್ದರು.
2024ರ ಡಿ.22ರಂದು ರಾಮನಗರದ ಮುನಿಯಪ್ಪನ ದೊಡ್ಡಿಯ ಪೆಟ್ಟಿ ಅಂಗಡಿಯಲ್ಲಿ ವೃದ್ಧೆ ಮರಗಮ್ಮ(70), ತನ್ನ ಪಾಡಿಗೆ ತಾನು ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡು ಇದ್ದಳು. ಹೊಂಚು ಹಾಕಿಕೊಂಡು ಇದ್ದ ಖದೀಮರು ಅಂಗಡಿಗೆ ಬಂದು 10ರೂ. ಕೊಟ್ಟು 5 ರೂಪಾಯಿಯ ಚಾಕೊಲೆಟ್ ಪಡೆಯುತ್ತಾರೆ. ಇನ್ನುಳಿದ 5 ರೂಪಾಯಿ ವಾಪಸ್ ನೀಡಲು ವೃದ್ಧೆ ಮುಂದಾದಗ ಕಳ್ಳರು ವೃದ್ಧೆ ಕೊರಳಲ್ಲಿದ್ದ ಮಾಂಗಲ್ಯ ಸರಕ್ಕೆ ಕೈಹಾಕಿ ಕಸಿದು ಪರಾರಿಯಾಗುತ್ತಾರೆ.
ರಾಮನಗರದಲ್ಲಿ ಕಳ್ಳತನ ಮಾಡಿಕೊಂಡು ದೊಡ್ಡಬಳ್ಳಾಪುರಕ್ಕೆ ಎಂಟ್ರಿಕೊಟ್ಟ ಕಳ್ಳರು ಅರಳುಮಲ್ಲಿಗೆ ಗ್ರಾಮದಲ್ಲಿ ಪೆಟ್ಟಿ ಅಂಗಡಿ ವೃದ್ಧೆಯನ್ನೇ ಟಾರ್ಗೆಟ್ ಮಾಡಿ ಥೇಟ್ ರಾಮನಗರದಲ್ಲಿ ಬಳಸಿದ ಪ್ಲ್ಯಾನನ್ನೇ ಅರಳುಮಲ್ಲಿಗೆಯಲ್ಲೂ ಉಪಯೋಗಿಸಿ 2025ರ ಫೆ.21ರಂದು ವೃದ್ಧೆಯ ಮಾಂಗಲ್ಯ ಸರ ಕದ್ದು ಪರಾರಿಯಾಗುತ್ತಾರೆ.
ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳರ ಜಾಡುಹಿಡಿದು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗುತ್ತಾರೆ, ಸದ್ಯ ಇಬ್ಬರು ಖದೀಮರನ್ನು ಬಂಧಿಸಿ ಕದ್ದ ಚಿನ್ನದ ಸರವನ್ನು ವಶಕ್ಕೆ ಪಡೆದು ಕಳುವಾಗಿದ್ದ ಚಿನ್ನದ ಸರವನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಸಾಧಿಕ್ ಪಾಷಾ ಅವರು ಅರಳುಮಲ್ಲಿಗೆ ಗ್ರಾಮದ ಅಜ್ಜಿಗೆ ವಾಪಸ್ ನೀಡಿರುತ್ತಾರೆ.
ಇನ್ನೂ ಹೆಚ್ಚಿನ ತನಿಖೆ ಮುಂದುವರಿಸಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು, ರಾಮಾನಗರದಲ್ಲೂ ಇದೇರೀತಿ ಕಳ್ಳತನ ಮಾಡಿರುವ ಬಗ್ಗೆ ಕಳ್ಳರಿಂದ ಬಾಯಿಬಿಡಿಸಿದ್ದಾರೆ. ಕೂಡಲೇ ರಾಮನಗರದ ಅಜ್ಜಿ ಬಳಿ ಕದ್ದಿದ್ದ ಸುಮಾರು 39 ಗ್ರಾಂ ತೂಕದ ಮಾಂಗಲ್ಯ ಸರವನ್ನೂ ವಶಕ್ಕೆ ಪಡೆದ ಇನ್ಸ್ ಪೆಕ್ಟರ್ ಸಾಧಿಕ್ ಪಾಷಾ ಅವರು, ರಾಮನಗರದ ಮುನಿಯಪ್ಪನ ದೊಡ್ಡಿಯಿಂದ ಅಜ್ಜಿಯನ್ನು ಠಾಣೆಗೆ ಕರೆಸಿ ಮಾಂಗಲ್ಯ ಸರವನ್ನು ಹಸ್ತಾಂತರ ಮಾಡಿದ್ದಾರೆ.
ಕಳುವಾಗಿದ್ದ ಮಾಂಗಲ್ಯ ಸರ ಮತ್ತೆ ಸಿಕ್ಕಿದ್ದಕ್ಕೆ ಭಾವುಕಾರದ ಅಜ್ಜಿ, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರ ಕಾರ್ಯವೈಖರಿಗೆ ಅಭಿನಂದನೆ ಸಲ್ಲಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆರೋಪಿಗಳ ಮಾಹಿತಿ
ಕನಕಪುರ ಮೂಲದ ಶಿವರಾಜ್ ಮತ್ತು ಸುಂದರೇಶ್ ಎಂಬ ಇಬ್ಬರು ಕಳ್ಳರನ್ನು ಬಂಧಿಸಲಾಗಿದೆ.
ಈ ಹಿಂದೆ ಮಂಡ್ಯ ಜಿಲ್ಲೆಯಲ್ಲಿ ಪ್ರಕರಣ ದಾಖಲಾಗಿತ್ತು. ಬೇಲ್ ನಲ್ಲಿ ಹೊರ ಬಂದಿರುತ್ತಾರೆ. ಕಳ್ಳತನಕ್ಕಾಗಿಯೇ ಹೊಸ ಬೈಕ್ ಖರೀದಿಯನ್ನು ಮಾಡಿರುತ್ತಾರೆ. ಅರಳುಮಲ್ಲಿಗೆಯಲ್ಲಿ ಕಳ್ಳತನ ಮಾಡಿ ಕನಕಪುರ ತಾಲೂಕಿನ ಮಠವೊಂದರಲ್ಲಿ ವಾಸ ಮಾಡುತ್ತಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.