ತೈವಾನ್‌ ಪಿಂಕ್‌ ಸೀಬೆ ಬೆಳೆಗೆ ನರೇಗಾ ಆಶಾಕಿರಣ

ಕೃಷಿ ಭೂಮಿ ರೈತರ ಪ್ರಯೋಗ ಶಾಲೆ ಎಂಬುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬೆಟ್ಟಕೋಟೆ ಗ್ರಾಮದ ಚನ್ನೇಗೌಡ ಅವರೇ ಸಾಕ್ಷಿ. ತಮಗೆ ಸೇರಿದ ಎರಡು ಎಕರೆ ಜಮೀನಿನಲ್ಲಿ ಅವರು ತೈವಾನ್ ಪಿಂಕ್ ತಳಿಯ ಸೀಬೆ (ಚೇಪೆ ಹಣ್ಣು) ಬೆಳೆದು ಆದಾಯ ಕಂಡುಕೊಂಡಿದ್ದಾರೆ.

ಸಮೃದ್ಧವಾಗಿ ಬೆಳೆದಿರುವ ಸೀಬೆ ಹಣ್ಣಿನ ತೋಟ ನೋಡುಗರ ಬಾಯಿಯಲ್ಲಿ ನೀರೂರಿಸುತ್ತದೆ. ಹೆಚ್ಚು ನೀರು ಬಯಸದ ಸೀಬೆ ಬಯಲು ಸೀಮೆಗೆ ಹೇಳಿ ಮಾಡಿಸಿದ ಬೆಳೆ ನೀರಿನ ಬವಣೆಯನ್ನು ನೀಗಿಸುವ ಸಲುವಾಗಿ ಕಡಿಮೆ ನೀರು ಬಯಸುವ ಖುಷ್ಕಿ ತೋಟಗಾರಿಕೆ ಬೆಳೆಯಾದ ಸೀಬೆಯನ್ನು ಬೆಳೆಯಲು ನಿರ್ಧರಿಸಿದರು, ತಾಲ್ಲೂಕಿನಲ್ಲಿ ರೇಷ್ಮೆ, ಗುಲಾಬಿ, ದ್ರಾಕ್ಷಿ ದಾಳಿಂಬೆ ಸೇರಿದಂತೆ ಇತರೇ ತೋಟಗಾರಿಕೆ ಬೆಳೆ ಬೆಳೆಯುವವರೇ ಹೆಚ್ಚು. ಸೀಬೆ ಬೆಳೆಯುವವರ ಸಂಖ್ಯೆ ತೀರಾ ಕಡಿಮೆ. ಈ ನಡುವೆಯೇ ಚನಗೌಡ ಅವರ ಕೃಷಿಗೆ ಅಕ್ಕ‍ಪಕ್ಕದವರು ಮಾರು ಹೋಗಿದ್ದಾರೆ.

ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸೌಲಭ್ಯ ಪಡೆದು 2 ಎಕರೆಯಲ್ಲಿ ತೈವಾನ್ ಪಿಂಕ್ ತಳಿಯ ಸೀಬೆಯನ್ನು ಬೆಳೆದರು. ಸಸಿಗಳನ್ನು ಕೋಲ್ಕತ್ತ ನಗರದಿಂದ ಪ್ರತಿ ಸಸಿಗೆ ರೂ. 120ರಂತೆ ಹಣ ಪಾವತಿಸಿ ಡೋರ್ ಡೆಲವರಿ ಪಡೆದುಕೊಂಡರು.

ನರೇಗಾ ಯೋಜನೆ ರೈತರಿಗೆ ಆಶಾಕಿರಣ

ಹಣ್ಣಿನ ಬೆಳೆ ಬೆಳೆಯುವ ಆಸಕ್ತ ರೈತರಿಗೆ ನರೇಗಾ ಯೋಜನೆಯಡಿ ಹಾಗೂ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗೆ ಶೇಕಡ 90ರಷ್ಟು ಹಾಗೂ ಸಾಮಾನ್ಯ ವರ್ಗದವರಿಗೆ ಶೇಕಡ 45ರಷ್ಟು ಸಹಾಯಧನ ನೀಡಲಾಗುವುದು. ಹಣ್ಣಿನ ಬೆಳೆ ಬೆಳೆಯುವ ವಿಧಾನ, ಬೆಳೆ ನಿರ್ವಹಣೆ, ತಾಂತ್ರಿಕ ಮಾಹಿತಿಯನ್ನು ರೈತರಿಗೆ ನೀಡಲಾಗುವುದು. ನರೇಗಾ ಯೋಜನೆಯಡಿ 2022-23ನೇ ಸಾಲಿನಲ್ಲಿ ಕೂಲಿ  ವೆಚ್ಚ 96000 ಹಾಗೂ ಪ್ರದೇಶ ವಿಸ್ತರಣೆಗೆ 40000 ಸಾಮಗ್ರಿ ವೆಚ್ಚವನ್ನು ನರೇಗಾ ಯೋಜನೆಯಡಿ ಫಲಾನುವಭವಿಗೆ ಪಾವತಿಸಲಾಗಿದೆ.

ಸಸಿಗಳನ್ನು 2X2.5 m2 ಮೀ. ಅಂತರದ ಅಧಿಕ ಸಾಂದ್ರ ಪದ್ಧತಿಯಲ್ಲಿ ನಾಟಿ ಮಾಡಿ ಸಸಿ ಗಳನ್ನು ಚೆನ್ನಾಗಿ ಆರೈಕೆ ಮಾಡಿದರು. ಸಸಿಗಳಿಗೆ ಈಗ ಒಂದು ವರ್ಷ ಏಂಟು ತಿಂಗಳು ಅಗಿದ್ದು. ಈ ಭೂಮಿಯಲ್ಲಿ ತೈವಾನ್ ಪಿಂಕ್ ತಳಿಯ 1500 ಸೀಬೆ ಸಸಿಗಳನ್ನು ನಾಟಿ ಮಾಡಿ ಹನಿ ನೀರಾವರಿ ಪದ್ಧತಿ ಅಳವಡಿಸಿದ್ದಾರೆ. ಗಿಡಗಳು ಕಾಯಿ ಬಿಟ್ಟು ತಾಳಿಕೊಳ್ಳುವ ಸಾಮರ್ಥ್ಯ ಬರುವವರೆಗೂ ಅಂದರೆ ಕಳೆದ 9 ತಿಂಗಳುಗಳಿಂದ ಪಿಂದೆಯನ್ನು ಕಿತ್ತು ಹಾಕಿದ್ದರು. 3 ತಿಂಗಳ ಹಿಂದೆಯಷ್ಟೇ ಬೆಳೆದ ಪಿಂದೆಗಳನ್ನು ಉಳಿಸಿಕೊಂಡಿದ್ದಾರೆ. ಸೀಬೆ ಹಣ್ಣನ್ನು ಉಜಿ ನೊಣ ಹಾಗೂ ಕೀಟಗಳಿಂದ ರಕ್ಷಿಸಿಕೊಳ್ಳಲು ಸ್ಪಾಂಜ್ ಅಳವಡಿಸಿದ್ದಾರೆ. ಇದರಿಂದ ಕಾಯಿ ಹಾಳಾಗುವುದು ಕಡಿಮೆ. ಪಕ್ಷಿಗಳ ಕಾಟದಿಂದಲೂ ಹಣ್ಣುಗಳನ್ನು ರಕ್ಷಿಸಿಕೊಳ್ಳಲು ಅನುಕೂಲವಾಗಿದೆ.

ತೈವಾನ್‌ ಪಿಂಕ್‌ ವಾರ್ಷಿಕವಾಗಿ ಎರಡು ಬೀಡುಗಳಲ್ಲಿ ಒಟ್ಟಾರೆ 8-10 ಟನ್‌ ಗಳು ಹಣ್ಣನ್ನು ಕಟಾವು ಮಾಡಿ ಬೆಂಗಳೂರು, ಚೆನ್ನೈ, ಹೈದರಾಬಾದ್‌ ನಗರಗಳಿಗೆ ದೊಡ್ಡ ದೊಡ್ಡ ಸೂಪರ್‌ ಮಾರ್ಕೆಟ್‌ ಗಳಿಗೆ ತೈವಾನ್‌ ಪಿಂಕ್‌ ಸೀಬೆ ಹಣ್ಣು  ಮಾರಾಟವಾಗುತ್ತಿವೆ. ಸಾಮಾನ್ಯವಾಗಿ ಸೀಬೆ ಹಣ್ಣು 100ರಿಂದ 250 ಗ್ರಾಂ ತೂಗುವುದೇ ಹೆಚ್ಚು. ಈ ತೈವಾನ್ ತಳಿಯ ಪ್ರತಿ ಹಣ್ಣು ಕನಿಷ್ಠ 600 ಗ್ರಾಂ ನಿಂದ 1 ಕೆ.ಜಿ  ತೂಕವಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ ₹ 85 ರಿಂದ ₹ 90 ದರವಿದೆ. ಉತ್ತಮ ಬೇಡಿಕೆ ಇರುವುದರಿಂದ ಹೆಚ್ಚಿನ ಆದಾಯ ಲಭಿಸುತ್ತಿದೆ.

ಸೀಬೆ ಬೆಳೆಯಲ್ಲಿ ವರ್ಷಕ್ಕೆ ಎರಡು ಫಸಲು ಪಡೆಯಬಹುದು. ಫಸಲು ಬಂದಾಗ ವಾರಕ್ಕೆ ಒಂದು ಬಾರಿ ಇಳುವರಿ ಕಟಾವಿಗೆ ಸಿಗುತ್ತದೆ. ಈಗಾಗಲೇ ಅವರು ಎರಡು ಬಾರಿ ಸೀಬೆ ಫಸಲನ್ನು ಸ್ಯಾಂಪಲ್ ಆಗಿ ಕಟಾವು ಮಾಡಿದ್ದಾರೆ. ಸ್ಥಳೀಯ ವ್ಯಾಪಾರಸ್ಥರು ಬಂದು ಕಡಿಮೆ ಬೆಲೆಗೆ ಫಸಲು ನೀಡುವಂತೆ ಒತ್ತಾಯಿಸಿದ್ದಾರೆ. ಆದರೆ, ಅವರು ಕ್ರೇಟ್‌ಗಳಲ್ಲಿ ತುಂಬಿಸಿ ಬೆಂಗಳೂರಿನ ಮಾರುಕಟ್ಟೆಗೆ ರವಾನಿಸುತ್ತಿದ್ದಾರೆ. ತೈವಾನ್ ಪಿಂಕ್ ಸೀಬೆ ಬೆಳೆದಿರುವ ಚನೇಗೌಡ ರವರು ಹೊಸ ಪ್ರಯತ್ನ ಹಲವು ರೈತರಿಗೆ ಪ್ರೇರಣೆಯಾಗಿದೆ.

ಸಾವಯವ ಗೊಬ್ಬರ: 

ಬೇರೆ ಬೆಳೆಗಳಿಗೆ ಹೋಲಿಸಿದರೆ ಸೀಬೆ ಕೃಷಿಯ ನಿರ್ವಹಣೆ ವೆಚ್ಚ ಕಡಿಮೆ ಎಂಬುದು ಅವರ ಅನುಭವ. ಸಾವಯವ ಗೊಬ್ಬರವನ್ನೇ ಬಳಸುತ್ತಿದ್ದಾರೆ. ಈ ಗಿಡಕ್ಕೆ ರಸಗೊಬ್ಬರವನ್ನು ಹಾಕಬೇಕು; ಇಲ್ಲವಾದರೆ ಗಿಡಗಳು ಸತ್ತು ಹೋಗುತ್ತವೆ ಮತ್ತು ಸೀಬೆ ಫಸಲು ಸರಿಯಾಗಿ ಬರುವುದಿಲ್ಲ ಎಂದು ಗಿಡ ಪೂರೈಸಿದವರು ಹೇಳಿದ್ದರು. ಆದರೆ, ನಾನು ಯಾವುದೇ ಕಾರಣಕ್ಕೂ ರಸಗೊಬ್ಬರ ಹಾಕುವುದಿಲ್ಲ ಎಂದು ನಿರ್ಧರಿಸಿ, ಹಸುವಿನ ಗೊಬ್ಬರ, ಗಂಜಲ, ಕುರಿ ಗೊಬ್ಬರ, ಒಣ ಎಲೆಗಳು ಮತ್ತು ಹಸಿರೆಲೆಗಳನ್ನು ಕೊಳೆಸಿ ಗೊಬ್ಬರ ಮಾಡಿ ಗಿಡಗಳಿಗೆ ಹಾಕುತ್ತಾ ಬಂದಿದ್ದೇನೆ. ಫಸಲು ಚೆನ್ನಾಗಿದೆ.

ಜಿಲ್ಲೆಯ ತೋಟಗಾರಿಕಾ ಬೆಳೆಗಳನ್ನು ಮಾವು, ಗುಲಾಬಿ, ಸೀಬೆ, ದ್ರಾಕ್ಷಿ, ನುಗ್ಗೆ ಉತ್ತೇಜಿಸಲು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸಣ್ಣ ರೈತರಿಗೆ ಜೀವಿತಾವಧಿಯಲ್ಲಿ ರೂ 5 ಲಕ್ಷದವರೆಗೂ ಸಹಾಯಧಾನ ನೀಡಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.‌ಎನ್.ಅನುರಾಧ ಅವರು ತಿಳಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಬೆಟ್ಟಕೋಟೆ ಗ್ರಾಮದ  ರೈತ ಸಿ. ಚನೇಗೌಡ ಅವರು ಎರಡು ಎಕರೆ ಜಮೀನನಲ್ಲಿ ನರೇಗಾ ಯೋಜನೆಯಡಿ ತೈವಾನ್‌ ಪಿಂಕ್‌ ತಳಿಯ ಸೀಬೆ ಬೆಳೆದು ರೈತ ಸಂತಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *