ತೆಲುಗು ಚಿತ್ರರಂಗದ ಹಿರಿಯ ನಟ ಚಂದ್ರ ಮೋಹನ್ (80) ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಶನಿವಾರ ನಿಧನರಾಗಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಹೈದರಾಬಾದ್‌ನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ 9:45 ಕ್ಕೆ ಚಿರನಿದ್ರೆಗೆ ಜಾರಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಚಂದ್ರಮೋಹನ್ ಅವರು ಪತ್ನಿ ಜಲಂಧರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಸೋಮವಾರ ಹೈದರಾಬಾದ್‌ನಲ್ಲಿ ನಡೆಯಲಿದೆ ಎಂಬ ಮಾಹಿತಿ ಒದಗಿಬಂದಿದೆ.
ಚಂದ್ರ ಮೋಹನ್ ಅವರು ಮಲ್ಲಂಪಲ್ಲಿ ಚಂದ್ರಶೇಖರ ರಾವ್ ಆಗಿ 23 ಮೇ 1943 ರಂದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪಮಿಡಿಮುಕ್ಕಲ ಗ್ರಾಮದಲ್ಲಿ ಜನಿಸಿದರು. ಚಂದ್ರ ಮೋಹನ್ 1966 ರಲ್ಲಿ ರಂಗುಲ ರತ್ನಂ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರ.
ಬೆಳ್ಳಿತೆರೆಯಲ್ಲಿ ನಾಯಕನಾಗಿ, ಹಾಸ್ಯನಟನಾಗಿ, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಹಲವು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಮಿಂಚಿದ್ದ ತೆಲುಗಿನ ಮಹಾನ್ ನಾಯಕಿಯರೆಲ್ಲ ಮೊದಲು ಚಂದ್ರಮೋಹನ್ ಎದುರು ನಟಿಸಿದ್ದಾರೆ. ಜಯಸುಧಾ, ಜಯಪ್ರದಾ ಅವರಿಂದ ಹಿಡಿದು ಸುಹಾಸಿನಿವರೆಗೆ ಎಲ್ಲರೂ ಅವರ ಜತೆಗೆ ಆರಂಭಿಕ ದಿನಗಳಲ್ಲಿ ನಟಿಸಿದ್ದರು.