ತೆರಿಗೆ ವಸೂಲಿಯಲ್ಲಿ ಶೇ.100ರಷ್ಟು ಸಾಧನೆ-ನಗರಸಭೆ ಅಧ್ಯಕ್ಷೆ ಸುಮಿತ್ರಾ ಆನಂದ್‌

ತೆರಿಗೆ ವಸೂಲಿ ಹಾಗೂ ಸರ್ಕಾರ ಜಾರಿಗೆ ತಂದಿರುವ ಇ-ಖಾತೆ ಆಂದೋಲನ ಸಾಧನೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯಲಾಗಿದೆ ಎಂದು ದೊಡ್ಡಬಳ್ಳಾಪುರ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆನಂದ್‌ ಹೇಳಿದರು.

ಸೋಮವಾರ ನಗರಸಭೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ಇದೇ ಪ್ರಥಮ ಬಾರಿಗೆ ತೆರಿಗೆ ವಸೂಲಿಯಲ್ಲಿ ಶೇ100ರಷ್ಟು ಸಾಧನೆ ಮಾಡಲಾಗಿದೆ. ಸ್ಥಳೀಯವಾಗಿ ಸಂಪನ್ಮೂಲ ಕ್ರೋಡೀಕರಣದಿಂದಾಗಿ ನಗರದಲ್ಲಿ 31ವಾರ್ಡ್‌ಗಳಲ್ಲೂ ನಗರಸಭೆ ನಿಧಿಯಲ್ಲಿ ತಲಾ ₹10 ಲಕ್ಷ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಟೆಂಡರ್‌ ಕರೆಯಲಾಗಿದೆ ಎಂದರು.

ಉಪಾಧ್ಯಕ್ಷ ಎಂ.ಮಲ್ಲೇಶ್‌ ಮಾತನಾಡಿ, ನಗರದ ಕೆ.ಆರ್‌.ಮಾರುಕಟ್ಟೆ ಪ್ರದೇಶ, ಎಲ್‌ಐಸಿ ಕಚೇರಿ ಸಮೀಪ ವಾಣಿಜ್ಯ ಮಳಿಗೆ ನಿರ್ಮಾಣ ಮಾಡಲಾಗುತ್ತಿದೆ. ನಗರದ ಪ್ರಮುಖ ನಾಲ್ಕು ರಸ್ತೆಗಳ ವಿಸ್ತರಣೆಗೆ ಸರ್ವೆ ಕೆಲಸ ನಡೆಸಲಾಗಿದೆ. ಶಾಸಕರು ಅಗತ್ಯ ಆರ್ಥಿಕ ನೆರವು ನೀಡುವ ಭರವಸೆ ನೀಡಿದ್ದಾರೆ. ನಗರದಲ್ಲಿನ ಮುತ್ತೂರು, ನಾಗರಕೆರೆ, ಕಲ್ಯಾಣಿ ಅಭಿವೃದ್ಧಿಗೆ ಅಮೃತ-2.0 ಯೋಜನೆಯಲ್ಲಿ ₹10ಕೋಟಿ ಅನುದಾನ ದೊರೆತಿದೆ ಎಂದರು.

ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್‌.ರವಿಕುಮಾರ್‌ ಮಾತನಾಡಿ, ವಾಣಿಜ್ಯ ಪರವಾನಗಿ ನೀಡುವಲ್ಲಿ ಶೇ70ರಷ್ಟು ಸಾಧನೆ ಮಾಡಲಾಗಿದೆ. ನಗರಸಭೆ ಪ್ರತಿ ವಾರ್ಡ್‌ಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಿಧಿಯಲ್ಲಿ ₹4ಲಕ್ಷ ನೀಡಿದ್ದಾರೆ. ಇ-ಖಾತಾ ಆಂದೋಲನದಿಂದಾಗಿ ಖಾತೆಗಳಿಗಾಗಿ ಅರ್ಜಿ ಸಲ್ಲಿಕೆ ಹೆಚ್ಚಾಗಿರುವುದರಿಂದ ಸಾರ್ವಜನಿಕರ ಕೆಲಸ ವಿಳಂಬವಾಗುತ್ತಿವೆ. ಖಾತಾ ಆಂದೋಲನ ಕಾಲ ಮಿತಿಯಲ್ಲಿ ಮುಗಿಸಬೇಕಿದೆ. ನಗರಸಭೆಗೆ ಸಾರ್ವಜನಿಕರು ಪಾವತಿಸುವ ತೆರಿಗೆ ಸೇರಿದಂತೆ ಇತರ ಲೆಕ್ಕಪತ್ರ ಗಣಕೀಕೃತಗೊಳಿಸಲಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ನಿಖರವಾದ ಲೆಕ್ಕ ಹಾಗೂ ತೆರಿಗೆ ಪಾವತಿ ಸರಳೀಕೃತವಾಗಲಿದೆ ಎಂದರು.

Leave a Reply

Your email address will not be published. Required fields are marked *