ತೆರಿಗೆ ವಸೂಲಿಯಲ್ಲಿ ಶೂನ್ಯ ಸಾಧನೆ ಮಾಡಿದ ನಗರಸಭೆ- ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ನಗರಸಭೆ ಸದಸ್ಯರು

ದೊಡ್ಡಬಳ್ಳಾಪುರ: ನಗರಸಭೆ ನೂತನ ಅಧ್ಯಕ್ಷೆ ಕೆ.ಸುಮಿತ್ರಾ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಮೊದಲ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ನಗರಸಭೆಗೆ ಬರಬೇಕಿರುವ ವಿವಿಧ ತೆರಿಗೆ, ಕಂದಾಯ ಬಾಕಿ ವಸೂಲಿಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಕುರಿತ ವಿಷಯದ ಮೇಲೆಯೇ ಅಧ್ಯಕ್ಷರು ಸೇರಿದಂತೆ ಪಕ್ಷಾತೀತವಾಗಿ ಎಲ್ಲಾ ಸದಸ್ಯರು ಚರ್ಚೆ ನಡೆಸಲಾಯಿತು.

ಆದಾಯ ಇಲ್ಲದೆ ಅಭಿವೃದ್ದಿ ಕೆಲಸಗಳು ಆಗಬೇಕು ಅಂದರೆ ಹೇಗೆ ಸಾಧ್ಯ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ವಹಿಸದೇ ಇದ್ದರೆ ಆದಾಯ ಖೋತವಾಗಲು ಅಧಿಕಾರಿಗಳೇ ಕಾರಣವಾಗಿದ್ದರೆ ಎಂದು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು ಎಂದು ಎಚ್ಚರಿಸಿದರು.

ಸದಸ್ಯ ಎಚ್.ಎಸ್.ಶಿವಶಂಕರ್, ಟಿ.ಎನ್.ಪ್ರಭುದೇವ್, ವಿ.ಎಸ್.ರವಿಕುಮಾರ್ ಮಾತನಾಡಿ, ನಗರಸಭೆಗೆ ಮುಖ್ಯ ಆದಾಯದ ಮೂಲಗಳಲ್ಲಿ ಒಂದಾಗಿದ್ದ ಬಸ್ ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳು ಸೇರಿದಂತೆ ನಗರದ ವಿವಿಧೆಡೆಗಳಲ್ಲಿನ ಸುಮಾರು 40 ವಾಣಿಜ್ಯ ಮಳಿಗೆಗಳು ಎರಡು ವರ್ಷಗಳಿಂದಲು ಖಾಲಿ ಉಳಿದಿವೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದು ಹರಾಜು ಪ್ರಕ್ರಿಯೆ ನಡೆಸುವಲ್ಲಿ ವಿಳಂಭ ಮಾಡುತ್ತಿರುವುದು ಸರಿಯಲ್ಲ. ಕುಡಿಯುವ ನೀರಿನ ಸಂಪರ್ಕ, ಒಳಚರಂಡಿ ಸಂಪರ್ಕ ಶುಲ್ಕ ವಸೂಲಿಯಲ್ಲಿ ಶೇ10ರಷ್ಟು ಪ್ರಗತಿಯಾಗಿಲ್ಲ. ₹8 ಕೋಟಿ ನೀರಿನ ಶುಲ್ಕ ಬಾಕಿ ಇದೆ. ಆದರೆ ವಸೂಲಿಯಾಗಿರುವುದು ಕೇವಲ ₹1 ಕೋಟಿ. ವಾರ್ಷಿಕ ನೀರಿನ ಶುಲ್ಕ ₹2.87 ಕೋಟಿ ವಸೂಲಿಯಾಗಬೇಕು ಎನ್ನುವ ಅಂಕಿ ಅಂಶ ಇದೆ. ಆದರೆ ವಾಸ್ತವ ಲೆಕ್ಕದಲ್ಲಿ ₹1 ಕೋಟಿ ತೋರಿಸಲಾಗಿದೆ ಎಂದು ದೂರಿದರು.

ಸದಸ್ಯ ಟಿ.ಎನ್.ಪ್ರಭುದೇವ್ ಮಾತನಾಡಿ, ನಗರದ ಕೋಟೆ ರಸ್ತೆ, ಸೌದರ್ಯ ಮಹಲ್ ಚಿತ್ರ ಮಂದಿರ ಸಮೀಪದ ವಕ್ಫ್ ಅಧಿನದಲ್ಲಿ ಇರುವ ವಾಣಿಜ್ಯ ಮಳಿಗೆಗಳಿಂದ ನಗರಸಭೆಗೆ ಪಾವತಿಸಬೇಕಿರುವ ಲಕ್ಷಾಂತರ ರೂಪಾಯಿ ತೆರಿಗೆ ಭಾಕಿ ಉಳಿದಿದೆ. ಹಾಗೆಯೇ ಚಿತ್ರಮಂದಿರ, ಕಲ್ಯಾಣ ಮಂದಿರ, ನಗರದಲ್ಲಿನ ವಿವಿಧ ಪಾರ್ಟಿ ಹಾಲ್, ಪೆಟ್ರೋಲ್ ಬಂಕ್ಗಳ ಮಾಲೀಕರು ಉಳಿಸಿಕೊಂಡಿರುವ ತೆರಿಗೆ ಭಾಕಿ ವಸೂಲಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಹತ್ತಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಸಹ ಕುಂಟು ನೆಪಗಳನ್ನು ಹೇಳುತ್ತಲೇ ಕಾಲಾಹರಣ ಮಾಡಲಾಗುತ್ತಿದೆ ಎಂದು ತೀವ್ರ ಅಸಮಧಾನ ವ್ಯಕ್ತಪಡಿಸಿದರು.

ನಗರ ವಿಸ್ತಾರವಾಗಿ ಬೆಳೆಯುತ್ತಿದೆ. ಬೃಹತ್ ವಾಣಿಜ್ಯ ಸಂಕೀರ್ಣಗಳು ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿನ ಮನೆಗಳನ್ನು ವಾಣಿಜ್ಯ ಮಳಿಗೆಗಳಾಗಿ ಪರಿವರ್ತಿಸಲಾಗಿದೆ. ಆದರೆ ನಗರದಲ್ಲಿ ಎಷ್ಟು ವಾಣಿಜ್ಯ ಮಳಿಗೆಗಳು ಇವೆ ಎನ್ನುವ ನಿಖರವಾದ ಮಾಹಿತಿಯೇ ನಗರಸಭೆಯಲ್ಲಿ ಇಲ್ಲದಾಗಿದೆ. ಹೀಗಾದರೆ ತೆರಿಗೆ ವಸೂಲಿ ಮಾಡುವುದಾದರು ಹೇಗೆ ? ನಗರದ ಅಭಿವೃದ್ದಿಗೆ ಹಣ ಕ್ರೂಢೀಕರಿಸುವುದಾದರು ಎಲ್ಲಿಂದ ಎಂದು ಪ್ರಶ್ನಿಸಿದರು. ಮುಂದಿನ ಸಾಮಾನ್ಯ ಸಭೆಯ ವೇಳೆಗೆ ನಗರದಲ್ಲಿನ ವಾಣಿಜ್ಯ ಮಳಿಗೆಗಳ ಸಮೀಪಕ್ಷೆ ನಡೆಸಿ ಅಧಿಕೃತ ಪಟ್ಟಿಯನ್ನು ಸಭೆಯ ಗಮನಕ್ಕೆ ತರಬೇಕು ಎಂದು ಆಗ್ರಹಿಸಿದರು.

ಎಲ್ಲಾ ಖರ್ಚುಗಳ ಹೊರೆ ನಗರಸಭೆಗೆ:

ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯಿಂದ ನಡೆಯುವ ಎಲ್ಲಾ ಕಾರ್ಯಕ್ರಮಗಳ ಖರ್ಚುಗಳನ್ನು ನಗರಸಭೆ ವತಿಯಿಂದಲೇ ಭರಿಸುವ ಹೊಸ ಸಂಪ್ರದಾಯ ಪ್ರಾರಂಭವಾಗಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ನಗರಸಭೆ ಉಪಾಧ್ಯಕ್ಷ ಎಂ.ಮಲ್ಲೇಶ್, ಸದಸ್ಯರಾದ ವಿ.ಎಸ್.ರವಿಕುಮಾರ್ ಹೇಳಿದರು.

ನಗರದಲ್ಲಿ ಸರ್ಕಾರದ ಇತರೆ ಇಲಾಖೆಗಳು ಇವೆ. ಎಲ್ಲಾ ಇಲಾಖೆಗಳಿಗು ಖರ್ಚುಗಳನ್ನು ಸಮಾನವಾಗಿ ಹಂಚಿಕೆ ಮಾಡಬೇಕು. ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ನಗರಸಭೆ ವತಿಯಿಂದ ನಗರಸಭೆ ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲಾ ಮಕ್ಕಳಿಗೆ ಪ್ರತಿ ವರ್ಷವು ಸಿಹಿ ತಿಂಡಿಯನ್ನು ನೀಡಲಾಗುತ್ತದೆ. ಆದರೆ ಪೋಷಕರಿಂದ ಸಾವಿರಾರು ರೂಪಾಯಿ ಶುಲ್ಕ ವಸೂಲಿ ಮಾಡುವ ಖಾಸಗಿ ಶಾಲೆಗಳಿಗು ಸಿಹಿ ವಿತರಣೆ ಮಾಡುವುದು ಸೂಕ್ತ ನಿರ್ಧಾರ ಅಲ್ಲ. ಹಾಗೆಯೇ ನಗರದಲ್ಲಿ ಯಾವುದೇ ಕಾರ್ಯಕ್ರಮಗಳು ನಡೆದರು ನಗರಸಭೆ ಅಧಿಕಾರಿಗಳು ಹಾಗೂ ಇತರೆ ಸಿಬ್ಬಂದಿಯೇ ಕೆಲಸ ನಿರ್ವಹಿಸಬೇಕು. ಇದರಿಂದ ನಗರಸಭೆಯಲ್ಲಿ ಸಾರ್ವಜನಿಕರ ಕೆಲಸಗಳಿಗೆ ಅಡ್ಡಿಯಾಗುತ್ತಿದೆ. ಇತರೆ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಯನ್ನು ತಾಲ್ಲೂಕು ಆಡಳಿತ ಬಳಸಿಕೊಳ್ಳಬೇಕು ಎಂದರು.

ಕಟ್ಟಡ ಪರವಾನಗಿಯೇ ಪಡೆಯುತ್ತಿಲ್ಲ:

ನಗರದ ವ್ಯಾಪ್ತಿಯಲ್ಲಿ ಅಭಿವೃದ್ದಿ ಪ್ರಾಧಿಕಾರದಿಂದ ಅನುಮೋದಿತವಾಗಿರುವ 20 ಬಡಾವಣೆಗಳು ಇವೆ. ನಗರದ ಒಳ ಭಾಗವು ಸೇರಿದಂತೆ ಹೊಸ ಬಡಾವಣೆಗಳಲ್ಲಿ ನೂರಾರು ಕಟ್ಟಡ ನಿರ್ಮಾಣ ಕಾಮಗಾರಿಗಳು ನಡೆಯುತ್ತಿವೆ. ಆದರೆ ಏಪ್ರಿಲ್ ನಿಂದ ಇಲ್ಲಿಯವರೆಗೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಸಲ್ಲಿಕೆಯಾಗಿರುವ ಅರ್ಜಿಗಳು 103. ಇವುಗಳ ಪೈಕಿ 25 ಅರ್ಜಿಗಳಿಗೆ ನಗರಸಭೆಯಿಂದ ಅನುಮೋದನೆ ದೊರೆತಿವೆ. ಕಟ್ಟಡ ಪರವಾನಿಗಿ ಶುಲ್ಕ ₹1ಲಕ್ಷ ಸಂಗ್ರಹವಾಗಿದೆ. ನಗರಸಭೆಯಿಂದ ಕುಡಿಯುವ ನೀರಿನ ಸಂಪರ್ಕ, ಒಳಚರಂಡಿ ಸೌಲಭ್ಯ, ಬೀದಿ ದೀಪ, ರಸ್ತೆ, ಕಸ ಗುಡಿಸುವುದು ಸೇರಿದಂತೆ ಎಲ್ಲಾ ಸೌಕರ್ಯಗಳು ನೀಡಬೇಕು. ಆದರೆ ಶುಲ್ಕ ಪಾವತಿಸಿ ಪರವಾನಗಿ ಮಾತ್ರ ಪಡೆಯದೇ ಕಟ್ಟಡಗಳನ್ನು ನಿರ್ಮಿಸುತ್ತಿದ್ದರು ಸಹ ಮಾಲೀಕರನ್ನು ಅಧಿಕಾರಿಗಳು ಪ್ರಶ್ನಿಸದೇ ಇದ್ದರೆ ನಗರಸಭೆ ಆಡಳಿತ ನಡೆಯುವುದಾರು ಹೇಗೆ, ಅಧಿಕಾರಿಗಳಿಗೆ ಸಂಬಳ ಏಕೆ ನೀಡಬೇಕು ಎಂದು ಸದಸ್ಯರಾದ ಶಿವಣ್ಣ, ವಿ.ಎಸ್.ರವಿಕುಮಾರ್, ಆನಂದ್, ಸುಬ್ಬು ಪ್ರಶ್ನಿಸಿದರು.

ಅಭಿವೃದ್ಧಿ ಕೆಲಸಗಳು ಸಮಾನ ಹಂಚಿಕೆಯಾಗಲಿ:

ನಗರಸಭೆ ಸದಸ್ಯೆ ನಾಗರತ್ನಕೃಷ್ಣಮೂರ್ತಿ ಮಾತನಾಡಿ, ನಗರದ ಹೊರಭಾಗದ ಬಡಾವಣೆಗಳಲ್ಲಿ ಇದು ಯಾವ ತಿರುವು, ಯಾವುದು ಮುಖ್ಯ ರಸ್ತೆ ಎನ್ನುವ ಮಾಹಿತಿಗಳೆ ಇಲ್ಲದಾಗಿವೆ. ಇದರಿಂದ ಸಾರ್ವಜನಿಕರು ಸೂಕ್ತ ವಿಳಾಸಗಳೆ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸೂಚನ ಫಲಕಗಳು ಸೇರಿದಂತೆ ಮುಖ್ಯಧ್ವಾರಗಳ ನಿರ್ಮಾಣಕ್ಕೆ ಪ್ರಥಮ ಆದ್ಯತೆ ನೀಡಬೇಕು. ಅಭಿವೃದ್ಧಿ ಕೆಲಸಗಳ ಹಂಚಿಕೆಯಲ್ಲಿ ಎಲ್ಲಾ ವಾರ್ಡ್ಗಳಿಗು ಸಮಾನ ಹಂಚಿಕೆಯಾಬೇಕು ಎಂದರು.

ಸದಸ್ಯರ ಎಲ್ಲಾ ಪ್ರಶ್ನಿಗಳಿಗು ಉತ್ತರ ನೀಡಿದ ಪೌರಾಯುಕ್ತ ಕಾರ್ತೀಕ ಈಶ್ವರ್, ನಗರಸಭೆ ವತಿಯಿಂದ ನಿರ್ಮಿಸಲಾಗಿರುವ ಕೆಲವು ವಾಣಿಜ್ಯ ಮಳೆಗಳ ಬಾಡಿಗೆ ವಿವಾದ ನ್ಯಾಯಲಯದಲ್ಲಿ ಇವೆ. ಯಾವುದೇ ವಿವಾದ ಇಲ್ಲದ ಮಳಿಗೆಗಳ ಹರಾಜು ಪ್ರಕ್ರಿಯೆ ಇದೇ ಪ್ರಥಮ ಬಾರಿಗೆ ಇ-ಟೆಂಡರ್ ಮೂಲಕ ನಡೆಸಲಾಗುತ್ತಿದೆ. ಈಗಾಗಲೇ ಜಿಲ್ಲಾಧಿಕಾರಿಗಳು ಅನುಮತಿ ನೀಡಿದ್ದಾರೆ. ವಾಣಿಜ್ಯ ಮಳಿಗೆಗಳ ಬಾಡಿಗೆ ವಸೂಲಿ ಆನ್ ಲೈನ್ ಮಾಡಲಾಗುತ್ತಿದೆ. ಇದರಿಂದ ತೆರಿಗೆ ವಸೂಲಿ ಸರಳವಾಗಲಿದೆ ಎಂದರು.

ನಗರೋತ್ತಾನ ನಿಧಿಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿಗಳ ಗುತ್ತಿಗೆ ವಿಳಂಭವಾಗುತ್ತಿರುವ ಕುರಿತು ಗುತ್ತಿಗೆದಾರೊಂದಿಗೆ ಸಭೆ ನಡೆಸಿ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸದೇ ಇದ್ದರೆ ಗುತ್ತಿಗೆ ರದ್ದು ಮಾಡಲಾಗುವುದು.
ತೆರಿಗೆ ವಸೂಲಿಯ ಕಡೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಮಾಸಿಕ ಪ್ರಗತಿ ಶೇ 60 ರಿಂದ 70 ಇದೆ. ಡಿಸೆಂಬರ್ ಅಂತ್ಯಕ್ಕೆ ಶೇ 90 ರಷ್ಟು ಗುರಿ ಮುಟ್ಟು ಉದ್ದೇಶ ಹೊಂದಲಾಗಿದೆ. ಕಟ್ಟಡ ನಿರ್ಮಾಣ ಪರವಾನಿಗಿ ನೀಡಲು ಸರ್ಕಾರದ ನಿಯಮಗಳು ಕಠಿಣವಾಗಿವೆ. ಈ ನಿಯಮದ ಪ್ರಕಾರವೇ ಪರವಾನಿಗಿ ನೀಡಬೇಕು. ಹಾಗಾಗಿಯೇ ಸಾರ್ವಜನಿಕರು ಪರವಾನಗಿ ಪಡೆಯದೇ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ. ಇಂತಹವರಿಗೆ ನೋಟಿಸ್ ನೀಡಲಾಗುತ್ತಿದೆ. ನಗರಸಭೆಯಿಂದ ನೋಟಿಸ್ ನೀಡುತ್ತಿದ್ದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತರುತ್ತಾರೆ. ಹಾಗಾಗಿ ನಾವು ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ಕಟ್ಟಡ ನಿರ್ಮಾಣವಾದ ನಂತರ ಎರಡು ಪಟ್ಟು ತೆರಿಗೆ ವಿಧಿಸಲಾಗುತ್ತಿದೆ ಎಂದರು.

Ramesh Babu

Journalist

Recent Posts

ನಟ ಪ್ರಥಮ್ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ಆರೋಪ: ಹಲ್ಲೆ ಎಲ್ಲಿ ಆಯ್ತು…? ಘಟನೆ ಬಗ್ಗೆ ನಟ ಪ್ರಥಮ್ ಏನಂದ್ರು… ಗೊತ್ತಾ….? ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ….

ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…

13 hours ago

ಈ ವರ್ಷ ಕೇಂದ್ರ ಸರ್ಕಾರ ಸರಬರಾಜು ಮಾಡಿರುವ ರಸಗೊಬ್ಬರ ಸಾಕಾಗುತ್ತಿಲ್ಲ- ಸಿಎಂ ಸಿದ್ದರಾಮಯ್ಯ

ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…

20 hours ago

ಹಣ ಕೇಂದ್ರೀಕೃತ ಸಮಾಜಕ್ಕೆ ಬದಲಾಗಿ ಮನುಷ್ಯತ್ವ ಕೇಂದ್ರಿತ ಸಮಾಜ ನಿರ್ಮಾಣವಾಗಲಿ…..

ಬದಲಾವಣೆ......... ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು...... ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು..... ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........ ಭ್ರಷ್ಟಾಚಾರದ…

23 hours ago

ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆದ ನಟ ದರ್ಶನ್

ನಟ ದರ್ಶನ್ ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಥಾಯ್ಲೆಂಡ್ ನಿಂದ ತಡ ರಾತ್ರಿ 11:45…

24 hours ago

ಭೀಮನ ಅಮವಾಸ್ಯೆ ದಿನದಂದು ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವು

ನಿನ್ನೆ(ಜು.24 ಗುರುವಾರ) ಭೀಮನ ಅಮವಾಸ್ಯೆ ಹಿನ್ನೆಲೆ ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ…

1 day ago

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರು ಬೆಳೆ ವಿಮೆಗೆ ನೊಂದಾಯಿಸಿ

ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಸಂಭವಿಸಿದರೆ ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಪ್ರಧಾನ…

1 day ago