ಮನೆ ಮುಂದಿನ ತೆಂಗಿನ ಮರ ಬಿದ್ದು ಎರಡು ವರ್ಷದ ಮಗು ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಹಾಲಗಾನಹಳ್ಳಿ ಗ್ರಾಮ ಪಂಚಾಯಿತಿಯ ಎಚ್. ಕಾಲೊನಿಯಲ್ಲಿ ಇಂದು (ಭಾನುವಾರ) ನಡೆದಿದೆ.
ಎರಡು ವರ್ಷದ ಪೃಥ್ವಿ ಮೃತಪಟ್ಟ ಮಗು. ಮೋನಿಕಾ ನಾಗರಾಜು ಎಂಬುವರು ಮನೆಯ ಮುಂದಿನ ತೆಂಗಿನ ಮರದ ಕೆಳಗೆ ತಮ್ಮ ಮಗುವನ್ನು ಆಟವಾಡಿಸುತ್ತಿದ್ದರು. ಇದ್ದಕ್ಕಿದ್ದಾಗೆ ಜೋರಾಗಿ ಬೀಸಿದ ಗಾಳಿಗೆ ತೆಂಗಿನ ಮರ ಮಗು ಮತ್ತು ತಾಯಿ ಮೇಲೆ ಉರುಳಿ ಬಿದ್ದಿದೆ. ಮರದ ಕೆಳಗೆ ಸಿಲುಕಿದ ಮಗು ಸ್ಥಳದಲ್ಲೇ ಮೃತಪಟ್ಟಿದ್ದು, ಮಗುವಿನ ತಾಯಿ ಮೋನಿಕಾ (21) ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆಕೆ ಏಳು ತಿಂಗಳ ಗರ್ಭಿಣಿಯಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ.