ತೂಬಗೆರೆ ಹೋಬಳಿಯ ವಿವಿಧ ಗ್ರಾಮಗಳಲ್ಲಿ 18 ಕೋಟಿ‌ ರೂ. ವೆಚ್ಚದ ಕಾಮಗಾರಿಗಳಿಗೆ ಭೂಮಿಪೂಜೆ

ತಾಲೂಕಿನ ತೂಬಗೆರೆ ಹೋಬಳಿಯ ವಿವಿಧ ಗ್ರಾಮಗಳಲ್ಲಿ ₹18 ಕೋಟಿ ವೆಚ್ಚದ ಕಾಮಗಾರಿಗಳ ಉದ್ಘಾಟನೆ ಹಾಗೂ‌ ಭೂಮಿ ಪೂಜೆಯನ್ನು ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು ನೆರವೇರಿಸಿದರು.

ತಿರುಮಗೊಂಡನಹಳ್ಳಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಗೆ ಚಾಲನೆ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ನಿಸರ್ಗ ನಾರಾಯಣಸ್ವಾಮಿ ಅವರು, ಎಸ್ಸಿಪಿ/ಟಿಎಸ್ಪಿ ಯೋಜನೆಯಡಿ 1 ಕೋಟಿ, ವಿಶೇಷ ಅನುದಾನದಡಿ 2 ಕೋಟಿ ಹಾಗೂ ರಸ್ತೆ ಡಾಂಬರೀಕರಣಕ್ಕೆ 15 ಕೋಟಿ ಸೇರಿ ಒಟ್ಟು 18 ಕೋಟಿ ವೆಚ್ಚದ ಕಾಮಗಾರಿಗಳ ಉದ್ಘಾಟನೆ ಹಾಗೂ ಭೂಮಿಪೂಜೆ ನೆರವೇರಿಸಲಾಗಿದೆ. ಬೆಳಿಗ್ಗೆ ಹೆಗ್ಗಡಿಹಳ್ಳಿಯಲ್ಲಿ ನೂತನ ಅಂಬೇಡ್ಕರ್ ಸಮುದಾಯ ಭವನ ಉದ್ಘಾಟನೆ, ಹೈಮಾಸ್ಟ್ ದೀಪ ಅಳವಡಿಕೆಗೆ ಚಾಲನೆ ನೀಡಲಾಯಿತು. ಅಲ್ಲಿಂದ ಗೂಳ್ಯ, ಮೆಳೇಕೋಟೆ, ದೊಡ್ಡರಾಯಪ್ಪನಹಳ್ಳಿ, ತೂಬಗೆರೆ ಸೇರಿದಂತೆ ಹಲವು ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ್ದೇನೆ ಎಂದು ಹೇಳಿದರು.

ಹಲವು ವರ್ಷಗಳಿಂದ ತೂಬಗೆರೆ ಹೋಬಳಿ ಹಿಂದುಳಿದಿತ್ತು. ರಸ್ತೆಗಳು ಹಾಳಾಗಿದ್ದವು. ಯಾವುದೇ ಶಾಸಕರು ಬಂದರೂ ಅಭಿವೃದ್ಧಿ ಕಾಮಗಾರಿಗಳು ನಡೆದಿರಲಿಲ್ಲ. ನಾನು ಅಧಿಕಾರಕ್ಕೆ ಬಂದ ಮೇಲೆ ಹೋಬಳಿಯ ಪ್ರತಿ ಗ್ರಾಮದಲ್ಲಿ‌ 50 ಲಕ್ಷದಿಂದ 2 ಕೋಟಿಯವರೆಗಿನ ಕಾಮಗಾರಿಗಳನ್ನು ಮಾಡಿದ್ದೇನೆ ಎಂದು‌ ಹೇಳಿದರು.

ತೂಬಗೆರೆಯಲ್ಲಿ 1.38 ಕೋಟಿ‌ ಮೊತ್ತದಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲಾ ಕಾಮಗಾರಿಗಳನ್ನು ನಿಗದಿಯೊಳಗೆ ಪೂರ್ಣಗೊಳಿಸಬೇಕು. ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಜೆಡಿಎಸ್ ಹಿರಿಯ ಮುಖಂಡ ಎಚ್.ಅಪ್ಪಯ್ಯಣ್ಣ, ದೇವನಹಳ್ಳಿ ತಾಲೂಕು ಜೆಡಿಎಸ್ ಅಧ್ಯಕ್ಷ ಮುನೇಗೌಡ, ಉಪಾಧ್ಯಕ್ಷ ಮಂಜುನಾಥ್. ಕಾರ್ಯದರ್ಶಿ ಮಂಜುನಾಥ್ ಎಸ್ ಬಿ. ಮುಖಂಡರಾದ ರಬ್ಬನಹಳ್ಳಿ ಮಹೇಶ್, ಪ್ರಭಾಕರ್, ಹೆಗ್ಗಡಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಲ್ಲವಿ, ಮೇಳೆಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ವೇತಾ, ಉದ್ಯಮಿ ಸಂದೀಪ್, ತೂಬಗೆರೆ ಹೋಬಳಿಯ ಜೆಡಿಎಸ್ ಅಧ್ಯಕ್ಷ ಜಗನ್ನಾಥ, ಯುವ ಜನತಾದಳ ಅಧ್ಯಕ್ಷ ಮುರುಳಿ, ಮುಖಂಡರಾದ ರಾಮಣ್ಣ ಗೌರೀಶ್, ಉದಯ್ ಆರಾಧ್ಯ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *