ತೂಬಗೆರೆ ಶ್ರೀ ಪ್ರಸನ್ನ ಲಕ್ಷ್ಮೀ ವೆಂಕಟೇಶ್ವರ ದೇವಾಲಯ ರಾಜಗೋಪುರ ಉದ್ಘಾಟನೆ

ದೊಡ್ಡಬಳ್ಳಾಪುರ: ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಪ್ರಸನ್ನ ಲಕ್ಷ್ಮೀ ವೆಂಕಟೇಶ್ವರ ದೇವಾಲಯದ ನೂತನ ರಾಜಗೋಪುರ ಉದ್ಘಾಟನೆ, ಕುಂಭಾಭಿಷೇಕ ಹಾಗೂ ಕಲ್ಯಾಣ ಮಂಟಪ ಶಂಕುಸ್ಥಾಪನೆಯನ್ನು ಮಾಜಿ ಸಿಎಂ ಎಂ.ವೀರಪ್ಪ ಮೊಯ್ಲಿ, ಆಹಾರ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಕೆ.ಎಚ್.ಮುನಿಯಪ್ಪನವರು ಅದ್ಧೂರಿಯಾಗಿ ನೆರವೇರಿಸಿದರು.

ವಿವಿಧ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ, 108 ಕಳಸ ಸ್ಥಾಪನೆ, ಗಣಪತಿ ಹೋಮ, ಪುಣ್ಯಾಹ, ಪೂರ್ಣಾಹುತಿ ಮತ್ತು ಮಹಾ ಕುಂಭಾಭಿಷೇಕದೊಂದಿಗೆ ರಾಜಗೋಪುರ ಲೋಕಾರ್ಪಣೆಗೊಂಡಿತು. ವಿಶೇಷ ಪೂಜೆ, ಅಲಂಕಾರ, ಪ್ರಸಾದ ವಿನಿಯೋಗ ಕಾರ್ಯಕ್ರಮ ಹಾಗೂ ವಿಶೇಷ ದರ್ಶನ ವ್ಯವಸ್ಥೆ ಮಾಡಲಾಗಿತ್ತು.

ದ್ವಾರ ಪಾಲಕರಿಗೆ ಪೂಜೆ, ರಾಜಗೋಪುರಕ್ಕೆ ಪ್ರಧಾನ ದೇವರ ಆರಾಧನೆ, ಪ್ರಾಣಪ್ರತಿಷ್ಠಾಪನೆ, ಬಲಿ‌ಹರಣ,‌‌ ರಾಜಗೋಪುರದ ಮೂಲ ಮಂತ್ರದ ಹೋಮ, ತ್ವತ್ವನ್ಯಾಸ, ಕಲಾನ್ಯಾಸ ಹೋಮ, ಪೂರ್ಣಾಹುತಿ, ಕಳಸ ವಿಸರ್ಜನೆ, ಪ್ರದಕ್ಷಣೆ, ರಾಜಗೋಪುರಕ್ಕೆ ಕುಂಭಾಭಿಷೇಕ, ದೀಪಾರಾಧನೆ, ದ್ವಾರ ಉದ್ಘಾಟನೆ, ಕೂಷ್ಮಾಂಡ ಛೇದನ (ಕುಂಬಳ ಕಾಯಿ ಛೇದನ), ಗೋ ಪ್ರವೇಶ, ಕನ್ನಡಿಯಲ್ಲಿ ದೇವರ ದರ್ಶನ ಆದನಂತರ ಭಕ್ತರ‌ ಒಳ ಪ್ರವೇಶ ಮಾಡಲಾಯಿತು.

ಜಿಲ್ಲೆಯಲ್ಲಿ ಸುಮಾರು 2ಸಾವಿರದಿಂದ ಮೂರು ಸಾವಿರ ಬಡವರಿಗೆ ಸೈಟ್ ಕೊಟ್ಟು, ಮನೆ‌ಕಟ್ಟಿಸಿ ಕೊಡುತ್ತೇವೆ. ಅದರ ಜೊತೆಗೆ ಸುಮಾರು ವರ್ಷಗಳಿಂದ ಫಾರಂ ನಂ. 53‌ರ ಅರ್ಜಿ ಹಾಕಿಕೊಂಡು ಸರ್ಕಾರಿ ಭೂಮಿಯಲ್ಲಿ ಉತ್ತುಬಿತ್ತು ಬೆಳೆಬೆಳೆಯುತ್ತಿರುವ ರೈತರಿಗೆ ಆದಷ್ಟು ಬೇಗ ಜಮೀನು ಮಂಜೂರು ಮಾಡುವ ಕೆಲಸ ಮಾಡುತ್ತೇವೆ ಎಂದು ಕೆ.ಎಚ್ ಮುನಿಯಪ್ಪ ಹೇಳಿದರು.

ಕಾರ್ಯಕ್ರಮದಲ್ಲಿ ಯಾದಗಿರಿ ಜಿಲ್ಲೆಯ ಕಣ್ವ ಮಠದ ಶ್ರೀ ವಿದ್ಯಾ ಕಣ್ವ ವಿರಾಜ ತೀರ್ಥ ಶ್ರೀಪಾದಗಳು, ಕೆಪಿಸಿಸಿ ಸದಸ್ಯ ಎಸ್. ಆರ್. ಮುನಿರಾಜ್, ಘಾಟಿ ಸುಬ್ರಹ್ಮಣ್ಯ ಅಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ರಂಗಪ್ಪ, ಆರ್.ವಿ.ಮಹೇಶ್ ಕುಮಾರ್, ತಾಲೂಕು ಕೃಷಿ ಸಮಾಜದ ಅಧ್ಯಕ್ಷ ಮುರಳಿಧರ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಘಟಕದ ಕಾರ್ಯದರ್ಶಿ ಪ್ರತಾಪ್, ದೇವನಹಳ್ಳಿ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಪಿಳ್ಳಮುನಿಯಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮುನಿಲಕ್ಷಮ್ಮ ರಾಮಕೃಷ್ಣ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎನ್. ಅರವಿಂದ್, ಗ್ರಾಮ ಪಂಚಾಯತಿ ಸದಸ್ಯ ಮುನಿಕೃಷ್ಣಪ್ಪ, ತೂಬಗೆರೆ ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿಸಿದ್ದಪ್ಪ ಹಾಗೂ ಊರಿನ ಗ್ರಾಮಸ್ಥರು ಮಹಿಳೆಯರು ಕಳಸ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *