ತೂಬಗೆರೆ ಪ್ರಸನ್ನ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಸಂಭ್ರಮ

ಇಂದು ನಾಡಿನಾದ್ಯಂತ ವೈಕುಂಠ ಏಕಾದಶಿ ಸಂಭ್ರಮ. ಇತಿಹಾಸ ಪ್ರಸಿದ್ಧ ತೂಬಗೆರೆಯ ಪ್ರಸನ್ನ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

ತಾಲೂಕಿನ ವಿವಿಧ‌ ಗ್ರಾಮಗಳಿಂದ ಸಾವಿರಾರು‌ ಜನರು ದೇವಸ್ಥಾನಕ್ಕೆ‌ ಆಗಮಿಸಿ ಸ್ವಾಮಿಯ ದರ್ಶನ ಪಡೆದು ಪುನೀತರಾದರು.

ಗ್ರಾಮದ ಪ್ರಸನ್ನ ಲಕ್ಷ್ಮಿ ವೆಂಕಟರಮಣ ಸ್ವಾಮಿ‌ ದೇವಾಲಯದಲ್ಲಿ ತಿರುಪತಿಯಿಂದ ತಂದಿರುವ ಉತ್ಸವ ಮೂರ್ತಿಗೆ ಇಲ್ಲಿ‌ ನಿತ್ಯ‌ ಪೂಜೆ‌ ನಡೆಯುತ್ತದೆ. ಚೋಳರ ಕಾಲದಲ್ಲಿ‌ ಲಕ್ಷಿ ನರಸಿಂಹಸ್ವಾಮಿ ದೇವಾಲಯವಾಗಿತ್ತು. ಉಗ್ರಸ್ವರೂಪಿಯಾದ ನರಸಿಂಹಸ್ವಾಮಿಗೆ ಅಂಟು‌ಮುಂಟು ಆಗುತ್ತಿರಲಿಲ್ಲ.‌ ಹೀಗಾಗಿ‌ ಮಹಿಳೆಯರು ದೇವಾಲಯಕ್ಕೆ ಬರಲು ಹೆದರುತ್ತಿದ್ದರು. ಆಗ ಅಂದಿನ ಪಾಳೆಗಾರರಿಗೆ ಕನಸಿನಲ್ಲಿ‌ ಬಂದ ಸ್ವಾಮಿಯೇ ತಿರುಪತಿಯಿಂದ ವಿಗ್ರಹ ತಂದು ಪ್ರತಿಷ್ಠಾಪಿಸುವಂತೆ ಸೂಚನೆಯಾಯಿತು. ಅಂತೆಯೇ ತಿರುಪತಿಗೆ ಹೋಗಿ ವಿಗ್ರಹ ಕೇಳಿದಾಗ ಒಪ್ಪಲಿಲ್ಲ. ಒಂದು ವಾರ ಅಲ್ಲಿಯೇ ತಂಗಿ ವಿಗ್ರಹಮೂರ್ತಿಯನ್ನು ಹೊತ್ತು ತರಲಾಯಿತು.

ಲಕ್ಷ್ಮಿವೆಂಕಟರಮಣಸ್ವಾಮಿ ಅವರ ಉತ್ಸವ ಮೂರ್ತಿ ತಂದು ಪ್ರತಿಷ್ಠಾಪಿಸಿದ ಬಳಿಕ ಉಗ್ರ‌ನರಸಿಂಹ ಶಾಂತರಾದರು ಎಂದು ಸ್ಥಳೀಯರು ಹೇಳುತ್ತಾರೆ. ಅಂದಿನಿಂದ ದೇವಾಲಯವು ಪ್ರಸನ್ನ ಲಕ್ಷ್ಮಿವೆಂಕಟರಮಣ ಸ್ವಾಮಿ ಎಂದು ಹೆಸರಾಯಿತು‌ ಎಂದು ದೇವಾಲಯದ ಅರ್ಚಕ ನಾಗರಾಜ್ ಪ್ರತಿಕ್ರಿಯಿಸಿದರು.

ಯುವ ಮುಖಂಡ ಉದಯ ಆರಾಧ್ಯ ಮಾತನಾಡಿ, ದೇವಸ್ಥಾನದ ವತಿಯಿಂದ ವೈಕುಂಠ‌ ಏಕಾದಶಿಯನ್ನು ಅದ್ಧೂರಿಯಾಗಿ ಆಚರಿಸಲಾಗಿದೆ. ಗ್ರಾಮಸ್ಥರಿಂದ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.

ಮುಂಜಾನೆಯಿಂದ ಸುತ್ತಲಿನ‌ ಗ್ರಾಮಗಳ ಜನರು ಬಂದು ಸ್ವಾಮಿಯ ದರ್ಶನ ಪಡೆಯುತ್ತಿದ್ದಾರೆ. ವೈಕುಂಠ ದ್ವಾರದ ವ್ಯವಸ್ಥೆಯನ್ನೂ ಮಾಡಲಾಗಿದೆ. ಭಕ್ತರಿಗೆ ತಿರುಪತಿ ಲಡ್ಡು ವಿತರಿಸಲಾಗುತ್ತಿದೆ ಎಂದು ಹೇಳಿದರು.

ಈ‌ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರಾದ ಕೃಷ್ಣಪ್ಪ, ರವಿಸಿದ್ಧಪ್ಪ ಮಾತನಾಡಿ, ವೆಂಕಟರಮಣಸ್ವಾಮಿಗೆ 600 ವರ್ಷಗಳ ಇತಿಹಾಸವಿದೆ. ಭಕ್ತರ‌ಎಲ್ಲ‌ ಅಭೀಷ್ಟೆಗಳನ್ನು ಈಡೇರಿಸುತ್ತಾ ಗ್ರಾಮ ರಕ್ಷಣೆ ಮಾಡುತ್ತಿದೆ ಎಂದು ವಿವರಿಸಿದರು.

Leave a Reply

Your email address will not be published. Required fields are marked *