12ನೇ ಶತಮಾನದಲ್ಲಿ ಬಿಜ್ಜಳ ರಾಜನ ಆಸ್ಥಾನದ ಪ್ರಧಾನಮಂತ್ರಿಯಾಗಿದ್ದ ಜಗಜ್ಯೋತಿ ಬಸವೇಶ್ವರರು ಸಮಾನತೆ, ಸಹೋದರತೆ, ಮತ್ತು ಶಾಂತಿಯನ್ನು ಆಧ್ಯಾತ್ಮಿಕ ಪ್ರಜಾಪ್ರಭುತ್ವ ಮೂಲಕ ಅನುಷ್ಠಾನಗೊಳಿಸಲು ಮುಂದಾದರು ಎಂದು ಗ್ರಾಮದ ಮುಖಂಡ ಉದಯ್ ಆರಾಧ್ಯ ತಿಳಿಸಿದರು.
ತಾಲೂಕಿನ ತೂಬಗೆರೆ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಬಸವ ಜಯಂತಿ ಪ್ರಯುಕ್ತ ತೂಬಗೆರೆ ಹೋಬಳಿ ಕೇಂದ್ರದಲ್ಲಿ ಬಸವಮೂರ್ತಿಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಪ್ರಸಾದ ವಿನಿಯೋಗ ಮಾಡುವುದರ ಮೂಲಕ ಮಹನೀಯರ ಜಯಂತಿಯನ್ನು ಆಚರಿಸಿದರು. ಈ ವೇಳೆ ಮಾತನಾಡಿದ ಅವರು, ಬ್ರಾಹ್ಮಣ್ಯ – ವೈದಿಕ ಪರಂಪರೆಗೆ ಸೇರಿದ ಅನಿಷ್ಟಗಳ ವಿರುದ್ಧ ಹೋರಾಡಿ ಶೋಷಿತ ವ್ಯಕ್ತಿಗಳ ಸುಧಾರಣೆಗೆ ನಿಂತ ಮಹಾ ಮಾನವತಾವಾದಿ ಎಂದರು.
ಬಸವಣ್ಣನವರ ವಿಚಾರಧಾರೆಗಳನ್ನು ವಿಶ್ವಕ್ಕೆ ಪರಿಚಯಿಸಲು ಕರ್ನಾಟಕದ ಗಾಂಧಿಯಂದೇ ಪ್ರಸಿದ್ಧರಾಗಿರುವ ಹರ್ಡೇಕರ್ ಮಂಜಪ್ಪನವರು 1913ರಲ್ಲಿ ಮೊಟ್ಟ ಮೊದಲ ಬಾರಿಗೆ ಬಸವ ಜಯಂತಿ ಆಚರಣೆ ಜಾರಿಗೆ ತಂದರು. ಇದರ ಜೊತೆಗೆ ರೈತಾಪಿ ಜನರು ತಮ್ಮ ಮನೆಯ ಹಸುಗಳು ಎತ್ತುಗಳನ್ನು ಪೂಜಿಸುವುದು ಸಾಕೆತ್ತುಗಳಿಗೆ ವಿಶೇಷ ಭಕ್ಷಗಳನ್ನು ನೀಡುವುದು ಅತ್ಯಂತ ವಿಶೇಷವಾಗಿದೆ ಎಂದರು.
ನೂರಾರು ಭಕ್ತರು ಗ್ರಾಮದ ಬಸವೇಶ್ವರ ದೇವಾಲಯದಲ್ಲಿ ಬಸವ ಮೂರ್ತಿಗೆ ವಿಶೇಷ ಅಲಂಕಾರದೊಂದಿಗೆ ಪೂಜಿಸಿ ಭಕ್ತಿಭಾವ ಮೆರೆದರು. ಆಗಮಿಸಿದ ಎಲ್ಲ ಭಕ್ತಾದಿಗಳಿಗೆ ಪಾನಕ ಕೋಸಂಬರಿ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಮಹಾನಂದ ಆರಾಧ್ಯ, ಬೇಕರಿ ಬಸವರಾಜ್, ವೀರಭದ್ರಾರಾಧ್ಯ, ಸೋಮಣ್ಣ, ರೇಣುಕಾರಾಧ್ಯ, ಲೋಕೇಶ್, ಗ್ರಾಮದ ಹಿರಿಯರಾದ ವೆಂಕಟೇಶಪ್ಪ, ನಾರಾಯಣಪ್ಪ, ರವಿ ಮುಂತಾದವರಿದ್ದರು.