ನಿರಂತರ ಪ್ರಯತ್ನದ ಫಲವಾಗಿ ತೂಬಗೆರೆಯಿಂದ ಹೆಬ್ಬಾಳಕ್ಕೆ ಸಂಚರಿಸಲು ಬಿಎಂಟಿಸಿ ಬಸ್ ಭಾಗ್ಯ ಲಭಿಸಿದೆ. ಈಗ ಜನರ ಮುಖದಲ್ಲಿ ಸಂತೋಷದ ಭಾವನೆ ಕಾಣುತ್ತಿದೆ. ಬಸ್ಸಿನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರೂ ಸರ್ಕಾರಿ ಬಸ್ ಎಂಬುವ ಭಾವನೆ ಮರೆತು ತಮ್ಮ ಸ್ವಂತ ವಾಹನದಂತೆ ಭಾವಿಸಿ ಸ್ವಚ್ಛತೆ ಕಾಪಾಡುವಲ್ಲಿ ಮುಂದಾಗಬೇಕಿದೆ ಎಂದು ಕೆಪಿಸಿಸಿ ಸದಸ್ಯ ಎಸ್.ಆರ್.ಮುನಿರಾಜು ತಿಳಿಸಿದರು.
ಬಸ್ ತನ್ನ ಮೊದಲ ಪ್ರಯಾಣ ಪ್ರಾರಂಭಿಸುವ ಮುನ್ನ ಊರಿನ ಗ್ರಾಮಸ್ಥರು, ಮುಖಂಡರ ಜೊತೆಗೂಡಿ ಬಹಳ ಅದ್ದೂರಿಯಾಗಿ ತಮಟೆ, ನಾದದೊಂದಿಗೆ ಬಸ್ ನ್ನ ಊರಿಗೆ ಸ್ವಾಗತಿಸಿ, ನಂತರ ಗ್ರಾಮದ ಪ್ರಸಿದ್ಧ ದೇವಾಲಯ ಶ್ರೀ ಲಕ್ಷ್ಮಿ ವೆಂಕಟೇಶ್ವರ ಗುಡಿಯ ಮುಂದೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು. ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಗ್ರಾಮಕ್ಕೆ ಬಿಎಂಟಿಸಿ ಬಸ್ಸಿನ ಅವಶ್ಯಕತೆ ತುಂಬಾ ಇದ್ದು, ನಮ್ಮೆಲ್ಲಾ ಗ್ರಾಮಸ್ಥರು, ಮುಖಂಡರ ಸತತ ಪ್ರಯತ್ನದಿಂದಾಗಿ ಇಂದು ಗ್ರಾಮದಿಂದ ಹೆಬ್ಬಾಳದ ಮಾರ್ಗವಾಗಿ ಚಲಿಸುವ ಬಿಎಂಟಿಸಿ ವಾಹನ ಲಭಿಸಿದೆ ಎಂದರು.
ಸ್ಥಳೀಯ ಮುಖಂಡರಾದ ಅರವಿಂದ್ ಮಾತನಾಡಿ, ಬಹಳ ವರ್ಷಗಳಿಂದ ತೂಬಗೆರೆ ಗ್ರಾಮಸ್ಥರ ಬಹು ಬೇಡಿಕೆ ಇಂದು ಈಡೇರಿದೆ. ಸ್ಥಳೀಯವಾಗಿ ಬಸ್ ವಾಹನದ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಅನಾನುಕೂಲವಾಗಿತ್ತು. ಶಾಲಾ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಮುಂಜಾನೆ 7ಕ್ಕೆ ಬಸ್ ವ್ಯವಸ್ಥೆ ಇಲ್ಲದ ಕಾರಣ ಆಟೋಗಳ ಮೇಲೆ ಅವಲಂಬಿತರಾಗಿದ್ದರು. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರಾದ ಕೆ.ಎಚ್.ಮುನಿಯಪ್ಪ ರವರ ಬಳಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಲಾಗಿತ್ತು. ಈ ಹಿನ್ನೆಲೆ ಬಿಎಂಟಿಸಿ ಬಸ್ ಭಾಗ್ಯ ಲಭಿಸಿದೆ ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ತೂಬಗೆರೆ ಪಂಚಾಯಿತಿ ಅಧ್ಯಕ್ಷರಾದ ನಂಜಮ್ಮ ಬಿ ನರಸಿಂಹಮೂರ್ತಿ, ಪಂಚಾಯಿತಿ ಮಾಜಿ ಸದಸ್ಯರಾದ ವೆಂಕಟೇಶ್ ಟಿ ವಿ, ಕಿಟ್ಟಿ , ಮಾಜಿ ಯೋಧರಾದ ರಾಘವೇಂದ್ರ, ಅನಂತ್ ರಾಜಗೋಪಾಲ, ಮುನಿಕೃಷ್ಣಪ್ಪ ಸೇರಿದಂತೆ ತೂಬಗೆರೆ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು