ದೊಡ್ಡಬಳ್ಳಾಪುರ(ನ.18): ತಾಲೂಕಿನ ತೂಬಗೆರೆಯ ಕುರುಬ ಸಮಾಜದ ವತಿಯಿಂದ ದಾಸವರೇಣ್ಯ ಕನಕದಾಸ ಜಯಂತಿಯನ್ನು ಆಚರಿಸಲಾಯಿತು.
ಗ್ರಾಮದ ಬಸ್ ನಿಲ್ದಾಣದಲ್ಲಿ ಪುಷ್ಪಾಲಂಕಾರಗೊಂಡಿದ್ದ ವೇದಿಕೆಯಲ್ಲಿ ಕನಕದಾಸರ ಭಾವಚಿತ್ರವಿಟ್ಟು ಪುಷ್ಪಾರ್ಚನೆ, ಅನ್ನದಾನ ಮಾಡುವುದರ ಮೂಲಕ ಮಹನೀಯರ ಜಯಂತಿಯನ್ನು ಆಚರಿಸಿದರು.
ತೂಬಗೆರೆ ಹಿತರಕ್ಷಣಾ ಸಮಿತಿ ಅಧ್ಯಕ್ಷರಾದ ರವಿಸಿದ್ದಪ್ಪ ಮಾತನಾಡಿ, ಕನಕದಾಸರ ಹುಟ್ಟು, ಬಾಲ್ಯದ ಜೀವನ ಅವರ ಸಾಧನೆಗಳನ್ನು ತಿಳಿಸಿಕೊಟ್ಟರು.
ಕನಕದಾಸರು ಕೀರ್ತನಕಾರರಾಗಿ, ತತ್ವಜ್ಞಾನಿಯಾಗಿ, ಸಂತರಾಗಿ, ದಾರ್ಶನಿಕರಾಗಿ ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಗೆ ಕನಕದಾಸರು ನೀಡಿದ ಕೊಡುಗೆ ಅನನ್ಯವಾಗಿದೆ. ಉಡುಪಿ ಶ್ರೀ ಕೃಷ್ಣನ ಪರಮ ಭಕ್ತರಾದ ಕನಕದಾಸರು, ತಮ್ಮ ಭಕ್ತಿಯಿಂದ ಶ್ರೀ ಕೃಷ್ಣನನ್ನು ಒಲಿಸಿಕೊಂಡಿದ್ದು ಇತಿಹಾಸ. ದಾಸರ ಬದುಕಿನ ಹೆಜ್ಜೆ ಗುರುತುಗಳೇ ನಮಗೆ ಮಾರ್ಗದರ್ಶನವಾಗಿದ್ದು, ಅವರ ವಿಚಾರಧಾರೆಗಳು ನಮ್ಮ ಬದುಕಿಗೆ ದಾರಿದೀಪ ಎಂದರು.
ಕನಕದಾಸರು, ಕರ್ನಾಟಕದಲ್ಲಿ 15-16ನೇ ಶತಮಾನದಲ್ಲಿ ಜನಪ್ರಿಯವಾಗಿದ್ದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರಾಗಿದ್ದಾರು. ತನ್ನ ಕೃತಿಗಳ ಮೂಲಕ ಧಾರ್ಮಿಕ ಆಚರಣೆಗಳಲ್ಲಿದ್ದ ಜಾತಿ ಪದ್ಧತಿಯನ್ನು ಅವರು ತಿರಸ್ಕರಿಸಿದ್ದರು. ನಳಚರಿತ್ರೆ, ಹರಿಭಕ್ತಿಸಾರ, ನೃಸಿಂಹಸ್ತವ, ರಾಮಧಾನ್ಯಚರಿತ್ರೆ ಮತ್ತು ಮೋಹನತರಂಗಿಣಿ ಅವರ ಕೆಲವು ಪ್ರಸಿದ್ಧ ಕೃತಿಗಳು. ಎಂದರು.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಅರವಿಂದ, ಕೆಪಿಸಿಸಿ ಸದಸ್ಯರಾದ ಮುನಿರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮುನಿಲಕ್ಷ್ಮಮ್ಮ, ಸದಸ್ಯರುಗಳಾದ ಮುನಿಕೃಷ್ಣಪ್ಪ, ನಾಗೇಶ್, ಗಂಗಾಧರ ಕುರುಬ ಸಮಾಜದ ಮುಖಂಡರಾದ ದೇವೇಂದ್ರ ಸ್ವಾಮಿ, ಕಿಟ್ಟಿ, ಕೇಬಲ್ ಮಂಜು, ಸುನೀಲ್, ಯುವ ಮುಖಂಡ ಉದಯ ಆರಾಧ್ಯ. ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟೇಶ್ ಊರಿನ ಮುಖಂಡರುಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.