ತೂಬಗೆರೆಯಲ್ಲಿ ರಾಮಭಕ್ತರಿಂದ ಮಂತ್ರಾಕ್ಷತೆಯ ಅದ್ಧೂರಿ ಮೆರವಣಿಗೆ

ಅಯೋಧ್ಯಾ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಅಯೋಧ್ಯೆಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆಯ ಭವ್ಯ ಮೆರವಣಿಗೆ ಹೋಬಳಿಯಾದ್ಯಾಂತ  ಭಾನುವಾರ ವಿಜೃಂಭಣೆಯಿಂದ ಜರುಗಿತು. ಮಂತ್ರಾಕ್ಷತೆ ಹೊತ್ತ ರಾಮಭಕ್ತರು ರಾಮನಾಮ ಭಜನೆ ಮಾಡುವ ಮೂಲಕ ಭಕ್ತಿ ಮೆರೆದರು.

ತೂಬಗೆರೆ ಶ್ರೀ ಲಕ್ಷ್ಮಿವೆಂಕಟೇಶ್ವರ ದೇವಾಲಯದಲ್ಲಿ   ಮಂತ್ರಾಕ್ಷತೆಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಂತ್ರಾಕ್ಷತೆ ಹಾಗೂ ಶ್ರೀರಾಮಚಂದ್ರನ ಭಾವಚಿತ್ರವನ್ನು ಸಾರೋಟದಲ್ಲಿ ಇರಿಸಿ ಮೆರವಣಿಗೆ ಆರಂಭಿಸಲಾಯಿತು. ರಾಮನ ಮಂತ್ರಾಕ್ಷತೆಗೆ ಸಾರ್ವಜನಿಕರು ಹೂವು ಚೆಲ್ಲಿದರು. ಕೇಸರಿ ಶಾಲುಗಳು ರ‌್ಯಾಲಿಯಲ್ಲಿ ಗಮನ ಸೆಳೆದವು. ಮೆರವಣಿಗೆ ದೊಡ್ಡಬಳ್ಳಾಪುರ ದಿಂದ ಕಂಟನಕುಂಟೆ, ತಿರಮಗೊಂಡನಹಳ್ಳಿ, ಹಾಡೋನಹಳ್ಳಿ ಮುಖಾಂತರ ಸಾಗಿ ತೂಬಗೆರೆ ಪ್ರಮುಖ ರಸ್ತೆಗಳಲ್ಲಿ ಸಾಗಿ ನಂತರ ಮುಕ್ತಾಯಗೊಂಡಿತು.

ಈ ಮೆರವಣಿಗೆ ಕಾರ್ಯಕ್ರಮದಲ್ಲಿ ವಕೀಲ, ಬಿಜಪಿ ಮುಖಂಡ ಪ್ರತಾಪ್ ಭಾಗವಹಿಸಿ‌ ಮಾತನಾಡಿದ ಅವರು, ಜನವರಿಯಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರದ ಲೋಕಾರ್ಪಣೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಲ್ಲಿ ಪೂಜಿಸಲ್ಪಟ್ಟ ಮಂತ್ರಾಕ್ಷತೆಯನ್ನು ಮನೆಮನೆಗೆ ವಿತರಿಸುವ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ. ಇಂದಿನಿಂದ ದೇಶದ ಪ್ರತಿ ಮನೆ ಮನೆಗೂ ಮಂತ್ರಾಕ್ಷತೆಯನ್ನು ತಲುಪಿಸುವಂತ ಕಾರ್ಯ ಮಾಡಲಾಗುವುದು. ದೇಶದ ಜನತೆಗೆ ಭಗವಂತನ ಆಶೀರ್ವಾದ ತಲುಪಬೇಕು. ಈ ನಿಟ್ಟಿನಲ್ಲಿ ನಾವು ನಮ್ಮ ಕಾರ್ಯಕರ್ತರು ಅವಿರತವಾಗಿ ಶ್ರಮಿಸುತ್ತೇವೆ ಎಂದರು.

ಅಯೋಧ್ಯೆಯಲ್ಲಿ ಜನವರಿ 22ರ ಬೆಳಗ್ಗೆ 11ರಿಂದ ಮಧ್ಯಾಹ್ನ 1ರ ಸುಮುಹೂರ್ತದಲ್ಲಿ ಶ್ರೀರಾಮ ದೇವರ ಪ್ರಾಣಪ್ರತಿಷ್ಠೆ ನಡೆಯಲಿದೆ. ಇದನ್ನು ಪ್ರತೀ ರಾಮ ಭಕ್ತರು ತಮ್ಮತಮ್ಮ ಊರು, ಮನೆಗಳಲ್ಲಿ ಸಂಭ್ರಮದಿಂದ ಆಚರಿ ಸುವಂತಾಗಲು ಈ ಅಭಿಯಾನ ಆಯೋಜನೆ ಮಾಡಿಲಾಗಿದೆ ಎಂದು ಹೇಳಿದರು.

ನಂತರ ತೂಬಗೆರೆ ಬಿಜೆಪಿ ಮುಖಂಡ ಕೃಷ್ಣಪ್ಪ ಮಾತನಾಡಿ, ಶ್ರೀರಾಮನ ಜನ್ಮಸ್ಥಳದಲ್ಲಿ ಮಂದಿರ ನಿರ್ಮಾಣ ಕೋಟ್ಯಂತರ ಭಾರತೀಯ ರ ಕನಸಾಗಿತ್ತು. ಅದು ಈಗ ನನಸಾಗುತ್ತಿದೆ. ಈ ಮೂಲಕ ಭಾರತ ಮತ್ತೆ ವಿಶ್ವಗುರು ಆಗುವ ಭರವಸೆ ಮೂಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ನಾಡಿನ ಸಮಸ್ತ ರಾಮಭಕ್ತರಿಂದ ಮಂದಿರ ನಿರ್ಮಾಣವಾಗುತ್ತಿದೆ.ಧರ್ಮಾತೀತವಾಗಿ, ಪಕ್ಷಾತೀತವಾಗಿ, ಜ್ಯಾತ್ಯಾತೀತವಾಗಿ ಎಲ್ಲರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ದೇಶದ ಏಕತೆ ಸಾರುವ ಒಂದು ಶುಭ ಸಂದರ್ಭ ಇದಾಗಿದೆ. ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ ಎಲ್ಲ ಮನೆ, ಮನ ತುಂಬಲಿ ಎಂದು ಹಾರೈಸಿದರು.

Leave a Reply

Your email address will not be published. Required fields are marked *