ತಾಲೂಕಿನ ತೂಬಗೆರೆ ಗ್ರಾಮದಲ್ಲಿ 600 ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಪಾರಂಪರಿಕ ಜನಪದ ಹಬ್ಬವಾದ ಭೂತ ನೆರಿಗೆ ಆಚರಣೆ ಜೂನ್ 30 (ನಾಳೆ) ಸಂಜೆ 4 ಗಂಟೆಗೆ ನಡೆಯಲಿದೆ.
ಕರಿಯಣ್ಣ – ಕೆಂಚಣ್ಣರ ವೇಷಧಾರಿಯಾದವರ ಮೇಲೆ ಭೂತ ಆಹ್ವಾನಿಸಿ, ಆರ್ಭಟಿಸುತ್ತವೆ. ಈ ವೇಳೆ, ಇವರ ಹಸಿವು ತಣಿಸುವ ಕೆಲಸ ಆಗುತ್ತದೆ. ವೇಷಧಾರಿಗಳು ಮನೆಗೆ ಬಂದರೆ ಮನೆಯಲ್ಲಿನ ದೆವ್ವ ಪೀಡೆ ಪಿಶಾಚಿಗಳು ಓಡಿ ಹೋಗುತ್ತವೆ ಎಂಬ ನಂಬಿಕೆಯೂ ಇದೆ.
ಪ್ರತಿವರ್ಷದಂತೆ ಈ ವರ್ಷವೂ ಸಹ ಆಷಾಡ ಮಾಸದ ಏಕಾದಶಿಯಾದ ಮಾರನೇ ದಿನವಾದ ದ್ವಾದಶಿಯಂದು ಭೂತ ನೆರಿಗೆ ಹಬ್ಬವನ್ನು ಆಚರಿಸಲು ಸಜ್ಜಾಗಿದೆ.
ವಿಷ್ಣುವಿನ ದ್ವಾರಪಾಲಕರಾದ ಜಯ-ವಿಜಯರು ಶಾಪಕ್ಕೆ ಗುರಿಯಾಗಿ ಕಲಿಯುಗದಲ್ಲಿ ಕರಿಯಣ್ಣ ಕೆಂಚಣ್ಣರಾಗಿ ಭೂಲೋಕಕ್ಕೆ ಬರುತ್ತಾರೆ ಎಂಬ ಐತಿಹಾಸಿಕ ಹಿನ್ನೆಲೆ ಇದೆ.
ಸುಮಾರು 600 ವರ್ಷಗಳ ಇತಿಹಾಸವಿರುವ ಈ ಭೂತನೆರಿಗೆ ಹಬ್ಬ ಇಂದಿಗೂ ಸಹ ತೂಬಗೆರೆ ಹಾಗೂ ಕಲ್ಲುಕೋಟೆ ಗ್ರಾಮದಲ್ಲಿ ನಡೆದುಕೊಂಡು ಬರುತ್ತಿದೆ.
ಭೂತನೆರಿಗೆ ಹಬ್ಬದಲ್ಲಿ ಕರಿಯಣ್ಣ ಮತ್ತು ಕೆಂಚಣ್ಣ ವೇಷಧಾರಿಗಳು ಒಂದು ಕೈಯಲ್ಲಿ ಭೂತದ ಮುಖ ಹೋಲುವ ವರ್ತುಲಾಕಾರದ ನೆರಿಗೆ ಹಿಡಿದಿರುತ್ತಾರೆ. ಮತ್ತೊಂದು ಕೈಯಲ್ಲಿ ಕತ್ತಿ ಹಿಡಿದಿರುತ್ತಾರೆ. ಲಕ್ಷ್ಮಿನರಸಿಂಹಸ್ವಾಮಿ ಭಕ್ತರು ಕೆಂಚಣ್ಣ-ಕರಿಯಣ್ಣರ ಮುಂದೆ ವಿಷ್ಣುವಿನ ನಾಮಸ್ಮರಣೆ ಮತ್ತು ಗುಣಗಾನ ಮಾಡುತ್ತಾ ಇವರನ್ನು ಕೆಣಕುತ್ತಾರೆ. ವಿಷ್ಣುವಿನ ನಾಮಸ್ಮರಣೆ ಸಹಿಸದ ಈ ಕರಿಯಣ್ಣ ಮತ್ತು ಕೆಂಚಣ್ಣ ಭಕ್ತರ ಮೇಲೆ ಕೋಪಗೊಂಡು ಅವರೆಡೆಗೆ ನುಗ್ಗುತ್ತಾರೆ.
ಕೋಪಗೊಂಡ ಕರಿಯಣ್ಣ ಕೆಂಚಣ್ಣರನ್ನು ಸಮಾಧಾನ ಮಾಡಲು ಇತರರು ಅವರ ಬಾಯಿಗೆ ಬಾಳೆ ಹಣ್ಣಿನ, ಹಲಸಿನ ಹಣ್ಣಿನಿಂದ ತಯಾರಿಸಿದ ರಸಾಯನವನ್ನು ತಿನ್ನಿಸುತ್ತಾರೆ. ಆವೇಶಕ್ಕೆ ಒಳಗಾದ ಈ ಭೂತಗಳು ಆ ಸಂದರ್ಭದಲ್ಲಿ ಏನು ಕೊಟ್ಟರೂ ತಿನ್ನುತ್ತಾರೆ ಎಂಬುದು ಜಾನಪದರ ನಂಬಿಕೆ. ಕೆಲವು ಗ್ರಾಮಗಳಲ್ಲಿ ನಡೆಯುವ ಈ ಹಬ್ಬದಲ್ಲಿ ಕರಿಯಣ್ಣ ಮತ್ತು ಕೆಂಚಣ್ಣರ ಬಾಯಿಗೆ ಕುರಿ-ಕೋಳಿಗಳನ್ನು ನೀಡುತ್ತಾರೆ. ಇವುಗಳ ರಕ್ತ ಹೀರುವುದರೊಂದಿಗೆ ಕರಿಯಣ್ಣ-ಕೆಂಚಣ್ಣ ಶಾಂತರಾಗುತಾರೆ ಎನ್ನುವುದು ಈ ಭಾಗದ ಭಕ್ತರ ನಂಬಿಕೆ.