ತುರ್ತುಪರಿಸ್ಥಿತಿ ಹೇರಲು ಜನಸಂಘದ ಪಿತೂರಿ ಕಾರಣ- ಸಚಿವ ಕೆ.ಜೆ.ಜಾರ್ಜ್

ಅಧಿಕಾರ ಪಡೆಯುವುದಕ್ಕಾಗಿ ಹುಟ್ಟಿಕೊಂಡ ಜನಸಂಘದ ಪಿತೂರಿಯಿಂದಲೇ ದೇಶ ತುರ್ತು ಪರಿಸ್ಥಿತಿ ಹೇರಬೇಕಾಯಿತು ಎಂದು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿಯನ್ನೂ ಹೊಂದಿರುವ ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.

ಚಿಕ್ಕಮಗಳೂರು ಹಾಗೂ ಸಖರಾಯಪಟ್ಟಣ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ನಗರದ ರೋಟರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸರ್ಕಾರದ ನಡೆ ಕಾರ್ಯಕರ್ತರ ಕಡೆ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, “ಜನಸಂಘವು ಬಿಜೆಪಿಯಾಗಿ ಬದಲಾದ ಬಳಿಕ ಸುಳ್ಳು ವದಂತಿಗಳನ್ನು ಹಬ್ಬಿಸಿ ಜನರ ಗಮನ ಸೆಳೆಯುವ ಕೆಲಸ ಮಾಡುತ್ತಿದೆ. ಆದರೆ, ಸಂವಿಧಾನಬದ್ಧವಾಗಿ ಕೆಲಸ ಮಾಡುವ ಕಾಂಗ್ರೆಸ್ ಜನರಿಗಾಗಿ ಶ್ರಮಿಸುತ್ತಿದೆ. ಇದು ಕಾಂಗ್ರೆಸ್ ಮತ್ತು ಬಿಜೆಪಿಗಿರುವ ವ್ಯತ್ಯಾಸ”, ಎಂದರು.

“ಕಾಂಗ್ರೆಸ್ ಹುಟ್ಟಿಕೊಂಡಿದ್ದು ಅಧಿಕಾರಕ್ಕಾಗಿ ಅಲ್ಲ, ದೇಶದ ಏಳಿಗೆಗಾಗಿ. ದೇಶದಲ್ಲಿ ನೆಲೆಯೂರಿದ್ದ ಬ್ರಿಟೀಷರನ್ನು ಓಡಿಸಲು ಹುಟ್ಟಿಕೊಂಡ ಕಾಂಗ್ರೆಸ್ ಆ ಕೆಲಸವನ್ನು ಯಶಸ್ವಿಯಾಗಿ ಮಾಡಿ ದೇಶದಲ್ಲಿ ಪ್ರಜಾಪ್ರಭುತ್ವವನ್ನು ನೆಲೆಗೊಳಿಸಿತು. ಸಂದರ್ಭಕ್ಕೆ ತಕ್ಕಂತೆ ಹಲವು ತೀರ್ಮಾನಗಳನ್ನು ತೆಗೆದುಕೊಂಡು ಅದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿತ್ತು. ಆದರೆ, ಈ ವಿಷಯದಲ್ಲಿ ಅಂದಿನ ಜನಸಂಘ ಜನರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಿತು. ಅಂತಹ ಸಂದರ್ಭದಲ್ಲಿ ದೇಶದ ಪ್ರಜಾಪ್ರಭುತ್ವವನ್ನು ಉಳಿಸಲೋಸುಗ ತುರ್ತು ಪರಿಸ್ಥಿತಿ ಘೋಷಿಸಲಾಯಿತು”, ಎಂದು ಹೇಳಿದರು.

“ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಬ್ಯಾಂಕ್‌ಗಳ ರಾಷ್ಟ್ರೀಕರಣ, ಹಸಿರು ಕ್ರಾಂತಿ ಸೇರಿದಂತೆ 20 ಅಂಶಗಳ ಕಾರ್ಯಕ್ರಮವನ್ನು ಜಾರಿಗೊಳಿಸಿ ದೇಶದಲ್ಲಿ ಆಮೂಲಾಗ್ರ ಬದಲಾವಣೆ ಮಾಡಿದೆ. ಶೋಷಿತರ, ಬಡವರ ಜೀವನ ಮಟ್ಟ ಸುಧಾರಿಸಿದೆ. ಜನಸಂಘ ಬಿಜೆಪಿಯಾಗಿ ಬದಲಾದರೂ ಸುಳ್ಳು ವದಂತಿಗಳನ್ನು ಹಬ್ಬಿಸುವ ಅವರ ಮನಸ್ಥಿತಿ ಬದಲಾಗದೆ ಕಾಂಗ್ರೆಸ್ ವಿರುದ್ಧ ಸುಳ್ಳುಗಳನ್ನು ಹೇಳಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂತು”, ಎಂದು ತಿಳಿಸಿದರು.

“ಭಾರತದ ಈಗಿನ ಪ್ರಧಾನಿಯವರು ಅಧಿಕಾರಕ್ಕೆ ಬರು ಮೊದಲು ವಿದೇಶಕ್ಕೆ ಹೋಗುತ್ತಿರುವ ಅಕ್ರಮ ಹಣವನ್ನು ತಡೆಯುವುದಾಗಿ ಭರವಸೆ ನೀಡಿದ್ದರು. ಭಯೋತ್ಪಾದನೆಯನ್ನು ಸಂಪೂರ್ಣ ನಿಗ್ರಹಿಸುವುದಾಗಿ ಹೇಳಿದ್ದರು. ಆದರೆ, ಆ ಭರವಸೆಗಳು ಈಡೇರಲೇ ಇಲ್ಲ. ನೋಟು ಅಮಾನ್ಯೀಕರಣ ಮಾಡಿ ದೇಶದ ಅರ್ಥ ವ್ಯವಸ್ಥೆಯನ್ನೇ ಹಾಳು ಮಾಡಿದರು”, ಎಂದು ಆರೋಪಿಸಿದರು.

*ಜನಪ್ರಿಯತೆ ಕಳೆದುಕೊಳ್ಳುತ್ತಿರುವ ಬಿಜೆಪಿ*:

“ಬಿಜೆಪಿಯವರ ಪೊಳ್ಳು ಭರವಸೆಗಳ ಬಗ್ಗೆ ಜನರಿಗೆ ಅರಿವಾಗುತ್ತಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೂ ಸಂಖ್ಯಾಬಲ ಕಡಿಮೆಯಾಗುತ್ತಿರುವುದು ಬಿಜೆಪಿ ಮೇಲೆ ಜನ ಭರವಸೆ ಕಳೆದುಕೊಳ್ಳುತ್ತಿದ್ದಾರೆ, ಜನಪ್ರಿಯತೆ ಕುಸಿಯುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಮುಂದಿನ ಚುನಾವಣೆಯಲ್ಲಿ ಅದು ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ಮತ್ತೆ ದೇಶದ ಆಡಳಿತ ಚುಕ್ಕಾಣಿ ಹಿಡಿಯಲಿದೆ”, ಎಂದರು.

“ದಿವಂಗತ ಇಂದಿರಾ ಗಾಂಧಿ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಐದಕ್ಕೆ ಐದೂ ಕ್ಷೇತ್ರಗಳನ್ನು ಗೆಲ್ಲಿಸುವ ಮೂಲಕ ಕಾರ್ಯಕರ್ತರು ದೇಶಕ್ಕೆ ಒಂದು ಸಂದೇಶ ನೀಡಿದ್ದಾರೆ. ಜಿಲ್ಲೆಯಲ್ಲಿ ಗಟ್ಟಿಯಾಗಿರುವ ಕಾಂಗ್ರೆಸ್ ಮುಂದೆ ದೇಶಾದ್ಯಂತ ಗಟ್ಟಿಯಾಗಿ ಅಧಿಕಾರಕ್ಕೇರಲಿದೆ”, ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಎಚ್‌.ಡಿ. ತಮ್ಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ರಮಾನಾಥ್‌ ರೈ, ಎಐಸಿಸಿ ಕಾರ್ಯದರ್ಶಿ ಬಿ.ಎಂ. ಸಂದೀಪ್‌, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಅಂಶುಮಂತ್‌, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಡಾ. ಡಿ.ಎಲ್‌. ವಿಜಯಕುಮಾರ್‌, ರೇಖಾ ಹುಲಿಯಪ್ಪಗೌಡ, ವಕ್ತಾರ ಎಚ್‌.ಎಚ್‌. ದೇವರಾಜ್‌, ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್‌ ಅಹಮದ್‌, ಜಿಲ್ಲಾ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಎಂ.ಎಲ್‌. ಮೂರ್ತಿ, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಬಾನಾ ಪರ್ವಿನ್‌, ಕೆ.ಮಹಮದ್‌, ಮಲ್ಲೇಶ್‌ಸ್ವಾಮಿ, ಸಖರಾಯಪಟ್ಟಣ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಮಹಡಿಮನೆ ಸತೀಶ್‌, ಚಿಕ್ಕಮಗಳೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಂಜೇಗೌಡ ಮತ್ತಿತರರು ಪಾಲ್ಗೊಂಡಿದ್ದರು.

Ramesh Babu

Journalist

Share
Published by
Ramesh Babu

Recent Posts

ದೇಶದ ಅತ್ಯುತ್ತಮ ಪೊಲೀಸ್ ಠಾಣಾ ಪ್ರಶಸ್ತಿಗೆ ರಾಯಚೂರಿನ ಕವಿತಾಳ ಪೊಲೀಸ್ ಠಾಣೆ ಆಯ್ಕೆ

ಕೇಂದ್ರ ಸಚಿವಾಲಯ ನೀಡುವ ಅತ್ಯುತ್ತಮ ಪೊಲೀಸ್ ಠಾಣಾ ಪ್ರಶಸ್ತಿಗೆ ಕರ್ನಾಟಕದ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪೊಲೀಸ್ ಠಾಣೆ…

4 hours ago

ನಾಯಿ, ಹಾವು/ ಇತರೆ ಪ್ರಾಣಿಗಳ ದಾಳಿ ಪ್ರಕರಣಗಳಲ್ಲಿ ಚಿಕಿತ್ಸೆ ನೀಡುವ ಬಗ್ಗೆ ಸರ್ಕಾರಿ- ಖಾಸಗಿ ಆಸ್ಪತ್ರೆಗಳು ಅನುಸರಿಸಬೇಕಾದ ಕ್ರಮಗಳು

ನಮ್ಮ‌ ದೇಶದ ಸರ್ವೋಚ್ಚ ನ್ಯಾಯಾಲಯವು, ನಾಯಿ ಕಡಿತಕ್ಕೆ ಚಿಕಿತ್ಸೆ ನೀಡುವ ಬಗ್ಗೆ ಸರ್ಕಾರಿ- ಖಾಸಗಿ ಆಸ್ಪತ್ರೆಗಳು ಅನುಸರಿಸಬೇಕಾದ ಕ್ರಮಗಳಿಗೆ ಸಂಬಂಧಿಸಿದಂತೆ…

6 hours ago

ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಚಲಿಸುವುದು ಮನಸ್ಸು….ಮನಸ್ಸಿನ ದಾರಿಯಲ್ಲಿ ಅನಂತ ಪಯಣ….

ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಚಲಿಸುವುದು ಮನಸ್ಸು. ಕ್ಷಣ ಮಾತ್ರದಲ್ಲಿ ಲೆಕ್ಕಕ್ಕೂ ಸಿಗದಷ್ಟು ದೂರ ಚಲಿಸಬಲ್ಲದು. ಬೆಳಕಿನ ವೇಗವೂ ಅದಕ್ಕೆ ಸಾಟಿಯಲ್ಲ.....…

9 hours ago

ನಿರ್ಜನ ಪ್ರದೇಶದಲ್ಲಿ ದೊರೆತಿದ್ದ ನವಜಾತ ಶಿಶುವಿನ ಆರೋಗ್ಯ ಸ್ಥಿರ: ಜಿಲ್ಲಾ ಸರ್ಕಾರಿ ದತ್ತು ಕೇಂದ್ರಕ್ಕೆ ಹಸ್ತಾಂತರ

ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಒಂದು ವಾರದ ಹಿಂದೆ ದೊರೆತ ಐದು ದಿನಗಳ ನವಜಾತ ಶಿಶುವಿನ ಜೀವ ಉಳಿಸುವಲ್ಲಿ…

10 hours ago

ಕೆ.ಸಿ.ವ್ಯಾಲಿಯಿಂದ ಜಿಲ್ಲೆಯ ರೈತರ ಬದುಕು ಹಸನು- ಕಾಂಗ್ರೆಸ್‌ ಮುಖಂಡ ಜನಪಹಳ್ಳಿ ನವೀನ್‌

ಕೋಲಾರ: ಕೆ.ಸಿ.ವ್ಯಾಲಿ ಯೋಜನೆಯಿಂದ ಅಂತರ್ಜಲ ಹೆಚ್ಚಿ ರೈತರ ಬದುಕು ಹಸನಾಗಿದ್ದು, ಜೆಡಿಎಸ್‌ ಪಕ್ಷ ಸೇರಿದಂತೆ ಕೆಲ ಮುಖಂಡರಿಂದ ದಾರಿ ತಪ್ಪಿಸುವ…

21 hours ago

ಸಾಲುಮರದ ತಿಮ್ಮಕ್ಕ ಅವರಿಗೆ ನುಡಿನಮನ

ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು  ವತಿಯಿಂದ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಗೆ ನುಡಿನಮನ…

21 hours ago