ತಿರುಮಲ ಘಾಟ್ ರಸ್ತೆಯಲ್ಲಿ ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳಿಗೆ ಎಚ್ಚರಿಕೆ ನೀಡಲಾಗಿದೆ.
ಟಿಟಿಡಿ ವಿಜಿಲೆನ್ಸ್ ಅಧಿಕಾರಿಗಳ ಪ್ರಕಾರ, ಬುಧವಾರ ಮುಂಜಾನೆ ಕಾರಿನಲ್ಲಿ ತಿರುಪತಿಯಿಂದ ತಿರುಮಲಕ್ಕೆ ತೆರಳುತ್ತಿದ್ದ ಯಾತ್ರಾರ್ಥಿಗಳ ಕಣ್ಣಿಗೆ ಕಾಣಿಸಿಕೊಂಡಿದೆ. ಬಳಿಕ, ಚಿರತೆ ಮತ್ತೆ ಅರಣ್ಯ ಪ್ರದೇಶದಲ್ಲಿ ಕಣ್ಮರೆಯಾಗಿದೆ. ಇದರಿಂದ ಭಕ್ತಾಧಿಗಳಲ್ಲಿ ಭಯ ಹುಟ್ಟಿಸಿದೆ.
ಶೇಷಾಚಲಂ ಅರಣ್ಯದಲ್ಲಿ ಚಿರತೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ ಸಂಗತಿಯಾದರೂ, ಪಾದಚಾರಿ ಮಾರ್ಗ ಮತ್ತು ಘಾಟ್ ರಸ್ತೆಗಳ ಮೂಲಕ ತಿರುಮಲಕ್ಕೆ ತೆರಳುವ ಭಕ್ತರು ಜಾಗರೂಕರಾಗಿರಲು ಟಿಟಿಡಿ ಎಚ್ಚರಿಕೆ ನೀಡಿದೆ.
ಕಳೆದ ವರ್ಷ ಆಗಸ್ಟ್ 11 ರಂದು ಆರು ವರ್ಷದ ಬಾಲಕಿ ಅಲಿಪಿರಿ ಪಾದಚಾರಿ ಮಾರ್ಗದಲ್ಲಿ ತಿರುಮಲಕ್ಕೆ ತೆರಳುತ್ತಿದ್ದಾಗ ಚಿರತೆ ದಾಳಿ ನಡೆಸಿತ್ತು.