ತಿರುಮಗೊಂಡಹಳ್ಳಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಘಾಟಿ ಪ್ರಾಧಿಕಾರದ ಸದಸ್ಯರ ಮನವಿ

ದೊಡ್ಡಬಳ್ಳಾಪುರ ತಾಲೂಕಿನ ತಿರುಮಗೊಂಡನಹಳ್ಳಿ‌‌ ಗ್ರಾಮದ ಮೂಲಕ ಹಾದುಹೋಗುವ ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಸ್ಥನ ರಸ್ತೆಗೆ ಅಡ್ಡಲಾಗಿ ರೈಲು ಹಳಿ ಹಾದುಹೋಗಿದ್ದು, ಇಲ್ಲಿ ರೈಲ್ವೆ ಗೇಟ್ ಇದ್ದು, ಇದರಿಂದ ಕ್ಷೇತ್ರಕ್ಕೆ ಬರುವ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ, ಪ್ರಯಾಣಿಕರ ಅನುಕೂಲಕ್ಕಾಗಿ ತಿರುಮಗೊಂಡಹಳ್ಳಿ ರೈಲ್ವೆ ಗೇಟ್ ನಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವರಾದ ವಿ.ಸೋಮಣ್ಣರವರಿಗೆ ಘಾಟಿ ಪ್ರಾಧಿಕಾರದ ಸದಸ್ಯರು ಮನವಿ ಮಾಡಿದರು.

ಘಾಟಿ ಕ್ಷೇತ್ರದ ಬಳಿಯ ಹಾಡೋನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಸನ್ಮಾನ್ ಕಾರ್ಯಕ್ರಮವನ್ನು ಅಯೋಜನೆ ಮಾಡಲಾಗಿತ್ತು, ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ವಿ.ಸೋಮಣ್ಣ ಭಾಗವಹಿಸಿದ್ದರು, ಈ ವೇಳೆ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು ತಿರುಮನಗೊಂಡನಹಳ್ಳಿ ರೈಲ್ವೆ ಗೇಟ್ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಮನವಿ ಮಾಡಿದರು.

ಕರ್ನಾಟಕ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಸಹ ಒಂದಾಗಿದೆ, ನಾಗಾರಾಧನೆ ಕ್ಷೇತ್ರವಾಗಿರುವುದರಿಂದ ಪ್ರತಿದಿನ ಕ್ಷೇತ್ರಕ್ಕೆ ಸಾವಿರಾರು ಭಕ್ತರು ಭೇಟಿ ನೀಡುವರು, ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮಾಡಲಾಗಿದೆ. ಭಕ್ತರ ಅನುಕೂಲಕ್ಕಾಗಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾಡಬೇಕೆಂಬುದು ಬಹುದಿನಗಳ ಬೇಡಿಕೆಯಾಗಿದೆ.

ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಘಾಟಿ ಪ್ರಾಧಿಕಾರದ ಸದಸ್ಯರಾದ ಆರ್.ವಿ.ಮಹೇಶ್ ಕುಮಾರ್, ಘಾಟಿ ಕ್ಷೇತ್ರಕ್ಕೆ ಪ್ರತಿದಿನ 2 ರಿಂದ 3 ಸಾವಿರ ಮತ್ತು ರಜಾ ದಿನಗಳಲ್ಲಿ 10 ರಿಂದ 15 ಸಾವಿರ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡುವರು, ಭಕ್ತರು ಕ್ಷೇತ್ರಕ್ಕೆ ಬರುವ ಮಾರ್ಗದಲ್ಲಿ ತಿರುಮಗೊಂಡನಹಳ್ಳಿಯಲ್ಲಿ ರೈಲ್ವೆ ಗೇಟ್ ಇದೆ, ಈ ರೈಲು ಮಾರ್ಗದಲ್ಲಿ 30 ನಿಮಿಷಕ್ಕೊಮ್ಮೆ ರೈಲುಗಳು ಸಂಚಾರಿಸುತ್ತವೆ, ರೈಲ್ವೆ ಗೇಟ್ ಹಾಕುವುದರಿಂದ ಭಕ್ತರು ಕಾಯುವ ಬೇಕಾದ ಪರಿಸ್ಥಿತಿ ಇದೆ, ರೈಲ್ವೆ ಮೇಲ್ಸೇತುವೆ ನಿರ್ಮಾಣದಿಂದ ಭಕ್ತರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅನುಕೂಲವಾಗುತ್ತೆ ಎಂದರು.

ಈ ವೇಳೆ ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಪ್ರಾಧಿಕಾರದ ಸದಸ್ಯರಾದ ರಂಗಪ್ಪ, ತೂಬಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರವಿ ಸಿದ್ಧಪ್ಪ ಸೇರಿದಂತೆ ಮುಖಂಡರು ಇದ್ದರು.

Leave a Reply

Your email address will not be published. Required fields are marked *

error: Content is protected !!