ತಿಗಳ ಸಮಾಜಕ್ಕೆ ಎಂಎಲ್ ಸಿ ಸ್ಥಾನ ನೀಡುವಂತೆ ಎಲ್.ಎ ಮಂಜುನಾಥ್ ಒತ್ತಾಯ

ಕೋಲಾರ: ಮುಂದಿನ ಜೂನ್ ತಿಂಗಳಲ್ಲಿ ರಾಜ್ಯ ವಿಧಾನ ಪರಿಷತ್ತಿನಲ್ಲಿ ತಮ್ಮ ಅವಧಿ ಮುಕ್ತಾಯವಾಗುವ ವಿಧಾನ ಪರಿಷತ್ ಸ್ಥಾನಕ್ಕೆ ರಾಜ್ಯ ತಿಗಳ ಸಮುದಾಯವನ್ನು ಪರಿಗಣಿಸುವಂತೆ ರಾಜ್ಯ ಸರಕಾರವನ್ನು ಮತ್ತು ಕಾಂಗ್ರೆಸ್ ಹೈಕಮಾಂಡ್ ಅವರನ್ನು ಕೆಪಿಸಿಸಿ ಪ್ರಚಾರ ಸಮಿತಿ ಸಹ ಸಂಯೋಜಕ ಹಾಗೂ ಜಿಲ್ಲಾ ಕಾಂಗ್ರೆಸ್ ವಕ್ತಾರ ಎಲ್.ಎ ಮಂಜುನಾಥ್ ಒತ್ತಾಯಿಸಿದರು

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್‌ ಪಕ್ಷ ಎಂದರೆ ಅದು ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡುವಂತ ಪಕ್ಷವಾಗಿದೆ. ರಾಜ್ಯದಲ್ಲಿ ತಿಗಳ ಸಮುದಾಯವು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಕಾಂಗ್ರೆಸ್ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ. ಅದೇ ರೀತಿಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಸಹ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲಾಗಿದೆ. ಅದರಿಂದಲೇ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಹೆಚ್ಚಿನ ಸ್ಥಾನಗಳನ್ನು ಪಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಚಿವರಾದ ಕೆ.ಎಚ್ ಮುನಿಯಪ್ಪ ಹಾಗೂ ಬೈರತಿ ಸುರೇಶ್ ಅವರು ತಿಗಳ ಸಮುದಾಯವನ್ನು ಗುರುತಿಸಿ ಎಂಎಲ್ಸಿ ಸ್ಥಾನವನ್ನು ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯದ ರಾಜಕಾರಣದ ದಿಕ್ಕನ್ನು ಬದಲಾಸುವ ಶಕ್ತಿ ತಿಗಳ ಸಮುದಾಯಕ್ಕೆ ಇದ್ದರೂ ಸಹ ರಾಜಕೀಯವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದೆ ಬಿದ್ದಿದ್ದೇವೆ. ಸಮಾಜವು ಬೇರೆ ಬೇರೆ ಸಮುದಾಯಗಳಂತೆ ತಿಗಳ ಸಮುದಾಯವು ಸಮಾಜದ ಮುಖ್ಯವಾಹಿನಿಗೆ ಬರಬೇಕಾಗಿದೆ. ಸಮುದಾಯದ ಏಳಿಗೆಗಾಗಿ ಸರಕಾರವು ಸಹ ಸ್ಥಾನಮಾನವನ್ನು ನೀಡಬೇಕಾಗಿದೆ. ಸಮಾಜದ ಪ್ರತಿನಿಧಿಯಾಗಿ ಇದ್ದಾಗ ಮಾತ್ರ ಸಮುದಾಯದ ಅಭಿವೃದ್ಧಿ ಸಾಧ್ಯವಾಗುತ್ತದೆ. ಅನಿಟ್ಟಿನಲ್ಲಿ ಸರಕಾರ ಮತ್ತು ಕಾಂಗ್ರೆಸ್ ಪಕ್ಷವು ಗಮನ ಹರಿಸಬೇಕಾಗಿದೆ ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ತಿಗಳ ಸಮಾಜದ ಅಭಿವೃದ್ಧಿಗಾಗಿ ದುಡಿಯುತ್ತಿದ್ದ ಸಮುದಾಯ ಮುಖಂಡ ಪಿ.ಆರ್. ರಮೇಶ್ ಅವರನ್ನು ಹಿಂದೆ ಎಂಎಲ್ಸಿ ಮಾಡಲಾಗಿತ್ತು. ಅವರ ಅವಧಿ ಮುಗಿದ ನಂತರ ತಿಗಳ ಸಮುದಾಯಕ್ಕೆ ಯಾವುದೇ ಪ್ರಾತಿನಿಧ್ಯವನ್ನು ನೀಡಲಿಲ್ಲ. ರಾಜ್ಯದ 224 ಶಾಸಕರಲ್ಲಿ ಯಾರು ಕೂಡ ಸಮುದಾಯದ ಶಾಸಕರು ಇಲ್ಲ ಜೊತೆಗೆ ಸ್ಪರ್ಧೆ ಮಾಡಲು ಕಾಂಗ್ರೆಸ್ ಪಕ್ಷದಲ್ಲಿ ಯಾರಿಗೂ ಅವಕಾಶವನ್ನು ಮಾಡಿಕೊಟ್ಟಿಲ್ಲ. ಹಾಗಾಗಿ ತಿಗಳ ಸಮುದಾಯವರನ್ನು ಎಂಎಲ್ಸಿ ಮಾಡಬೇಕು ಎಂಬುದು ನಮ್ಮೆಲ್ಲರ ಒತ್ತಾಯವಾಗಿದೆ ಎಂದು ಎಲ್.ಎ ಮಂಜುನಾಥ್ ತಿಳಿಸಿದರು.

Leave a Reply

Your email address will not be published. Required fields are marked *