
ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯ ಪ್ರಕರಣ ನ್ಯಾಯಾಲಯದಲ್ಲಿದ್ದು, ಎಂದು ಮಾಡಬೇಕೆಂದು ನ್ಯಾಯಾಲಯವು ಸೂಚಿಸುತ್ತದೋ ಆಗ ಚುನಾವಣೆ ನಡೆಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ಐಷಾರಾಮಿ ಸವಲತ್ತುಗಳು ದೊರಕುತ್ತಿರುವ ವಿಷಯ ನಮ್ಮ ಸರ್ಕಾರದ ಗಮನಕ್ಕೆ ಬಂದಿದೆ. ಸಂಬಂಧಪಟ್ಟ ಅಧಿಕಾರಿಗಳು ರಜೆಯ ಮೇಲೆ ತೆರಳಿದ್ದರು. ನಾಳೆ ಗೃಹ ಸಚಿವರು ಈ ಬಗ್ಗೆ ಸಭೆ ಕರೆದಿದ್ದಾರೆ. ತಪ್ಪು ಮಾಡಿದವರ ಮೇಲೆ ಗಂಭೀರ ಕ್ರಮ ಕೈಗೊಳ್ಳಲಾಗುವುದು ಹಾಗೂ ಇನ್ನೂ ಮುಂದೆ ಇಂಥದ್ದು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಆರ್.ಎಸ್.ಎಸ್. ನ್ನು ಸೀಮಿತಗೊಳಿಸಿ ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಪಡೆಯುವುದನ್ನು ಕಡ್ಡಾಯ ಮಾಡಿಲ್ಲ. ಯಾವುದೇ ಸಂಘ ಸಂಸ್ಥೆಗಳು ಆಯಾ ಜಿಲ್ಲಾಧಿಕಾರಿಗಳ ಬಳಿ ಅನುಮತಿ ಪಡೆಯಬೇಕು ಎಂದು ಆದೇಶದಲ್ಲಿ ಹೇಳಿದೆ. ಅವರು ಹಾಗೆ ಭಾವಿಸಿಕೊಂಡಿದ್ದಾರೆ ಅಷ್ಟೆ. ಆರ್.ಎಸ್.ಎಸ್ ಮುಖ್ಯಸ್ಥರಾದ ಮೋಹನ್ ಭಾಗವತ್ ಅವರು ಹೇಳಿದ್ದಕ್ಕೆಲ್ಲ ನಾವು ಉತ್ತರಿಸಲಾಗುವುದಿಲ್ಲ ಎಂದು ಹೇಳಿದರು.
ಸಕ್ಕರೆ ಕಾರ್ಖಾನೆ ಮಾಲೀಕರ ಸಮ್ಮುಖದಲ್ಲಿಯೇ ಕಬ್ಬಿನ ಬೆಲೆ ಬಗ್ಗೆ ತೀರ್ಮಾನ ಮಾಡಲಾಗಿದೆ. 50 ರೂ.ಗಳನ್ನು ಎಲ್ಲರೂ ಕೊಡಲೇಬೇಕು. ಕೊಡದಿರುವವರೂ ಕೊಡುತ್ತಾರೆ ಎಂದು ಭಾವಿಸಿದ್ದೇನೆ. ಆದೇಶ ಪಾಲಿಸದ ಸಕ್ಕರೆ ಕಾರ್ಖಾನೆ ಮಾಲೀಕರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಅತಿವೃಷ್ಟಿಯಿಂದ 11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿದ್ದು ರೈತರಿಗೆ ಪರಿಹಾರ ನೀಡಲಾಗುವುದು. 1,70,000 ಜನರಿಗೆ ಕುಡಿಯುವ ನೀರು ಒದಗಿಸುವ ಜೊತೆಗೆ ಕೂಡ್ಲಿಗಿಯ ಅಂತರ್ಜಲ ವೃದ್ಧಿಗೆ ಶ್ರಮಿಸಿ ಯಶಸ್ವಿಯಾದ ಶಾಸಕ ಶ್ರೀನಿವಾಸ್ ಅವರನ್ನು ಪಡೆದ ಕೂಡ್ಲಿಗಿ ಜನತೆ ಅತ್ಯಂತ ಅದೃಷ್ಟವಂತರು ಎಂದು ಹೇಳಿದರು.
ಬರಡು ನೆಲ ಕೂಡ್ಲಿಗಿಯನ್ನು ಹಸಿರಿನ ನೆಲವನ್ನಾಗಿ ಮಾಡಲು ಪಣತೊಟ್ಟು ಕೆಲಸ ಮಾಡುತ್ತಿರುವ ಶಾಸಕ ಶ್ರೀನಿವಾಸ್ ಅವರು ಅತ್ಯಂತ ಕ್ರಿಯಾಶೀಲರು. ಇವರಿಂದ ಕ್ಷೇತ್ರದ ಅಭಿವೃದ್ಧಿ ಅತ್ಯಂತ ವೇಗ ಪಡೆದುಕೊಂಡಿದೆ ಎಂದರು.
ನಮ್ಮದು ಅಭಿವೃದ್ಧಿ ಪರವಾದ ನುಡಿದಂತೆ ನಡೆಯುತ್ತಿರುವ ಸರ್ಕಾರ. ಕಳೆದ ಎರಡು ವರ್ಷಗಳಲ್ಲಿ ಕೂಡ್ಲಿಗಿ ಕ್ಷೇತ್ರಕ್ಕೆ ₹1,750 ಕೋಟಿಗೂ ಅಧಿಕ ಮೊತ್ತದ ಹಣದಲ್ಲಿ ಬೇರೆ ಬೇರೆ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಜೊತೆಗೆ ಚುನಾವಣೆ ವೇಳೆ ಘೋಷಿಸಿದ್ದಂತೆ ಐದು ಗ್ಯಾರಂಟಿಗಳನ್ನು ಘೋಷಿಸಿ, ಐದಕ್ಕೆ ಐದನ್ನೂ ಜಾರಿ ಮಾಡಿದ್ದೇವೆ. ರಾಜ್ಯದ ಜನರ ಮನೆ ಬಾಗಿಲಿಗೆ ಪ್ರತೀ ತಿಂಗಳು ಸರ್ಕಾರದ ಗ್ಯಾರಂಟಿಗಳು ತಲುಪುತ್ತಿವೆ. 1.20 ಕೋಟಿ ಕುಟುಂಬಗಳ ಮನೆ ಯಜಮಾನಿಯರಿಗೆ ಗೃಹಲಕ್ಷ್ಮಿ ಹಣ ಮತ್ತು ಗೃಹಜ್ಯೋತಿಯ ಸವಲತ್ತು ತಲುಪುತ್ತಿದೆ ಎಂದು ಹೇಳಿದರು.
ಎರಡು ವರ್ಷದಲ್ಲಿ ನಮ್ಮ ಸರ್ಕಾರ ಒಂದು ಲಕ್ಷ ಕೋಟಿ ರೂಪಾಯಿಗಳನ್ನು ನೇರವಾಗಿ ರಾಜ್ಯದ ಜನರ ಜೇಬಿಗೆ ಹಾಕಿದೆ. ನಾವು ನುಡಿದಂತೆ ನಡೆದು ಜನರ ಜೇಬಿಗೆ ಹಣ ಹಂಚುತ್ತಿದ್ದರೆ, ಸುಳ್ಳನ್ನೇ ಮನೆ ದೇವರು ಮಾಡಿಕೊಂಡಿರುವ ಬಿಜೆಪಿಯವರು ಮಾನ ಮರ್ಯಾದೆ ಬಿಟ್ಟು ರಾಜ್ಯದ ಜನರಿಗೆ ಸುಳ್ಳುಗಳನ್ನು ಹಂಚುತ್ತಿದ್ದಾರೆ ಎಂದರು.
ಸುಳ್ಳಿನ ಸರದಾರ ಬಿಜೆಪಿಯವರು ಈಗ ಸಾರ್ವಜನಿಕವಾಗಿ ಹರಾಜಾಗಿದ್ದಾರೆ. ಇವರು ಲಜ್ಜೆಗೆಟ್ಟು ಮತಗಳ್ಳತನಕ್ಕೆ ಇಳಿದು ಸಿಕ್ಕಿ ಬಿದ್ದಿದ್ದಾರೆ. FRP ಮತ್ತು MSP ಎರಡನ್ನೂ ನಿಗದಿ ಮಾಡೋದು ಕೇಂದ್ರದ ಬಿಜೆಪಿ ಸರ್ಕಾರ. ಕಬ್ಬು ಬೆಳೆಗಾರರಿಗೆ ದ್ರೋಹ ಬಗೆದದ್ದು ಪ್ರಹ್ಲಾದ್ ಜೋಶಿ. ಆದರೆ, ವಿಜಯೇಂದ್ರ ತಮ್ಮದೇ ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರಿಗೆ ಮಾಡಿದ ದ್ರೋಹವನ್ನು ಮರೆಮಾಚಿ ಬೆಳಗಾವಿಗೆ ಹೋಗಿ ಪ್ರತಿಭಟನೆಯ ಡ್ರಾಮಾ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರಿಗೆ ದ್ರೋಹ ಬಗೆದರೂ ರಾಜ್ಯ ಸರ್ಕಾರ ಹೆಚ್ಚುವರಿ ಹಣ ನೀಡಿ ನಮ್ಮ ಕಬ್ಬು ಬೆಳೆಗಾರರನ್ನು ಕಾಪಾಡೊ ಕೆಲಸ ಮಾಡಿದೆ ಎಂದು ತಿಳಿಸಿದರು.