
ತಾಲ್ಲೂಕಿನ ರಾಜಕಾರಣದ ಇತಿಹಾಸದಲ್ಲಿ ಸಿದ್ದಲಿಂಗಯ್ಯ, ರಾಮೇಗೌಡ, ಆರ್.ಎಲ್ ಜಾಲಪ್ಪ, ನರಸಿಂಹಸ್ವಾಮಿ ಸೇರಿದಂತೆ ಘಟಾನುಘಟಿ ನಾಯಕರ ರಾಜಕಾರಣದಲ್ಲಿ ಈವರೆಗೆ ರಾಜಕೀಯದ ಎಲ್ಲೆ ಮೀರಿ ಮಾತನಾಡಿದ್ದಾಗಲಿ.. ಆಣೆ ಪ್ರಮಾಣ ರಾಜಕೀಯಗಳಾಗಲಿ.. ವೈಯಕ್ತಿಯ ಆರೋಪ – ಪ್ರತ್ಯಾರೋಪಗಳಾಗಿ ನಡೆದಿರಲಿಲ್ಲ. ಇದೀಗ ಬದಲಾದ ರಾಜಕಾರಣದಲ್ಲಿ ಹಾಲಿ ಶಾಸಕ ಧೀರಜ್ ಮುನಿರಾಜು ಮತ್ತು ಮಾಜಿ ಶಾಸಕ ವೆಂಕಟರಮಣಯ್ಯ ಮಧ್ಯೆ ವೈಯಕ್ತಿಯ ಆರೋಪ-ಪ್ರತ್ಯಾರೋಪಗಳು ಆರಂಭವಾಗಿದ್ದು, ಸವಾಲು – ಎದಿರು ಸವಾಲುಗಳು ನಡೆಯುತ್ತಿವೆ. ಮಾಜಿ ಶಾಸಕರ ವೆಂಕಟರಮಣಯ್ಯ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿ ಮಾಡುತ್ತಿದ್ದಾರೆ ಎಂದು ಅನುದಾನ ವಿಚಾರಗಳಿಗೆ ಸರ್ಕಾರದಲ್ಲಿ ಪರೋಕ್ಷವಾಗಿ ಅಡ್ಡಿಪಡಿಸುತ್ತಿದ್ದಾರೆ ಎಂದು ಶಾಸಕ ಧೀರಜ್ ಮುನಿರಾಜು ನೇರವಾಗಿ ದೂರುತ್ತಿದ್ದಾರೆ. ಇತ್ತ ಮಾಜಿ ಶಾಸಕ ವೆಂಕಟರಮಣಯ್ಯ ನಾನು ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಪಡಿಸಿಲ್ಲ. ಕುಣಿಯಲಾರದೆ ನೆಲ ಡೋಂಕು ಎನ್ನುತ್ತಿದ್ದಾರೆ. ಪ್ರಬುದ್ಧತೆಯೇ ಇಲ್ಲ, ಬೇಕಾದರೆ ಧರ್ಮಸ್ಥಳದ ಮಂಜುನಾಥಸ್ವಾಮಿ ದೇವರ ಸನ್ನಿಧಿಯಲ್ಲಿ ಪ್ರಮಾಣ ಮಾಡಿ ಹೇಳುತ್ತೇನೆ. ನೀನು ಬಂದು ಪ್ರಮಾಣ ಮಾಡು ಎಂದು ಶಾಸಕ ಧೀರಜ್ ಮುನಿರಾಜುಗೆ ಸವಾಲು ಹಾಕಿದ್ದಾರೆ.
‘ನಿನ್ನ ಕೈಲಿ ಒಂದು ಸಭೆ ಮಾಡಕ್ಕೆ ಆಗ್ತಿಲ್ಲ’..
ತಾಲ್ಲೂಕಿನ ನಿರಾಶ್ರಿತರ ಆಶಾಕಿರಣವಾದ ಆಶ್ರಯ ಕಮಿಟಿ, ವಿದ್ಯಾರ್ಥಿಗಳ ಅನುಕೂಲ ಮತ್ತು ಕಾಲೇಜು ಅಭಿವೃದ್ಧಿಗೆ ಕಾಲೇಜು ಕಮಿಟಿ, ಬಡ ರೋಗಿಗಳ ಸಂಜೀವಿನಿಯಾದ ಆಸ್ಪತ್ರೆ ಕಮಿಟಿ, ರೈತರ ಪರವಾದ ಭೂ ಮಂಜೂರಾತಿ ಕಮಿಟಿ ಸಭೆಗಳನ್ನು ಈವರೆಗೆ ಒಂದೇ ಒಂದು ಮಾಡಿಲ್ಲ. ಏನಕ್ಕೆ ನಿನ್ನ ಜನ ಆರಿಸಿರುವುದು. ನಾನು ಪ್ರತಿ ಎರಡು ಮೂರು ತಿಂಗಳಿಗೆ ಸಭೆ ಮಾಡ್ತಿದ್ದೆ. ಜಿಲ್ಲಾಆಸ್ಪತ್ರೆ ವಿಚಾರದಲ್ಲಿ ನನ್ನ ಕುಟುಂಬದವರ ಹೆಸರು ಹಾಕುವ ಆಸೆ ಇಲ್ಲ.. ತಾಲ್ಲೂಕಿನಲ್ಲಿ ಹಲವಾರು ಮಹನೀಯರಿದ್ದಾರೆ. ಜಿಲ್ಲಾಸ್ಪತ್ರೆಗೆ ಎಲ್ಲೂ ನಾನು ಅಡ್ಡಿಪಡಿಸಿಲ್ಲ. ಬೇಕಾದರೆ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಪ್ರಮಾಣ ಮಾಡಲು ನಾನು ಸಿದ್ಧ ನೀನು ಬಾ.. ಎಂದು ಮಾಜಿ ಶಾಸಕ ವೆಂಕಟರಮಣಯ್ಯ, ಶಾಸಕ ಧೀರಜ್ ಮುನಿರಾಜುಗೆ ಸವಾಲು ಹಾಕಿದ್ದಾರೆ.
ಹಳೆ ಬಾಟಲ್ ಗೆ ಹೊಸ ಮದ್ಯ..
ರಾಮೇಗೌಡ ವೃತ್ತದಿಂದ ಕನಕದಾಸ ವೃತ್ತದವರೆಗೆ ರಸ್ತೆ ಅಭಿವೃದ್ದಿಗೆ ಎಸ್ಎಚ್.ಜಿಪಿ ಯೋಜನೆಯಡಿ ೧೦ ಕೋಟಿ ರೂ. ಟೆಂಡರ್ ಆಗಿದೆ. ಆದರೆ ನೀನು ಫೋಟೊ ಶೂಟ್ ಮಾಡಿಸಲು ಪೂರ್ಣ ರಸ್ತೆ ಅಭಿವೃದ್ಧಿ ಬಿಟ್ಟು, ವೈಟ್ ಟ್ಯಾಪಿಂಗ್ ಹೆಸರಲ್ಲಿ ಕೇವಲ ಒಂದು ಕಿಲೊಮೀಟರ್ ರಸ್ತೆ ಅಭಿವೃದ್ಧಿ ಮಾಡುತ್ತಿದ್ದಿಯಾ. ಆ ರಸ್ತೆಯ ಅಗಲೀಕರಣ ಮಾಡಿ ಡಾಂಬರು ಹಾಕಿ, ರಸ್ತೆ ಬದಿ ದೀಪಗಳನ್ನು ಹಾಕಿ ಅಭಿವೃದ್ಧಿ ಮಾಡಿದ್ದು ನಾನು, ಈಗ ಹಳೆ ರಸ್ತೆಯ ಬೀದಿ ದೀಪ, ಡಿವೈಡರ್ ಗಳನ್ನೇ ಬಳಸಿಕೊಂಡು ಫೋಟೊ ಶೂಟ್ ಮಾಡಿಸಿಕೊಂಡು ಜನರಿಗೆ ಯಾಮಾರಿಸುತ್ತಿದ್ದೀಯಾ. ಹಳೇ ಬಾಟಲ್ ಗೆ ಹೊಸ ಮದ್ಯ ಎಂಬಂತೆ ಕೆಲಸ ಮಾಡುತ್ತಿದ್ದಿಯಾ ಎಂದು ಮಾಜಿ ಶಾಸಕ ವೆಂಕಟರಮಣಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫೋಟೋ ಶೂಟ್.. ಬಾಯ್ಬಿಟ್ಟರೆ ಸುಳ್ಳು…
ಇದು ಹಳೆದು. ಇದು ಹೊಸದು ಎಂದು ಫೋಟೋ, ವಿಡಿಯೋ ಹಾಕಿಕೊಳ್ಳಲು ಮಾತ್ರ ಸಿಮೀತವಾಗಿ ಕೆಲಸ ಮಾಡುವುದಲ್ಲ. ಬದಲಾಗಿ ತಾಲ್ಲೂಕಿನ ಜನರಿಗಾಗಿ ಮಾಡಬೇಕು. ಚುನಾವಣೆ ಸಮಯದಲ್ಲಿ ಹೇಳಿದ್ದ ಯಾವ ಕೆಲಸ ಮಾಡಿದ್ದೀಯಾ? ನವ ದೊಡ್ಡಬಳ್ಳಾಪುರ ಎಂದು ಜನರಿಗೆ ಮಂಕು ಬೂದಿ ಎರಚಿದ್ದೀಯಾ? ಬಾಯ್ಬಿಟ್ಟರೆ ಸುಳ್ಳು ಹೇಳ್ತಿಯಾ. ನನಗೆ ಸುಳ್ಳು ಹೇಳಲು ಬರುವುದಿಲ್ಲ. ಎಂದು ಶಾಸಕ ಧೀರಜ್ ಮುನಿರಾಜು ವಿರುದ್ಧ ಹರಿಹಾಯ್ದಿದ್ದಾರೆ.
ರಾಜಕೀಯ ಉದ್ದೇಶಕ್ಕೆ ವೃಷಭಾವತಿಗೆ ವಿರೋಧ..
ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಬೆಂಗಳೂರಿನ ಶುದ್ಧೀಕರಿಸಿದ ನೀರನ್ನು (ವೃಷಭಾವತಿ ನೀರನ್ನು) ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಹರಿಸಬೇಕೆಂದು ಯೋಜನೆ ಪ್ರಾರಂಭ ಮಾಡಲಾಗಿತ್ತು. ಅಧಿವೇಶನದಲ್ಲಿ ಅಂದು ನೆಲಮಂಗಲದಲ್ಲಿ ಜೆಡಿಎಸ್ ಶಾಸಕರಾಗಿದ್ದ ಶ್ರೀನಿವಾಸ್ ಮೂರ್ತಿ ಸಹ ಒಪ್ಪಿಕೊಂಡಿದ್ದರು, ಡಿಪಿಆರ್, ಟೆಂಡರ್ ಸಹ ಆಗಿದೆ. ಈಗ ಆ ನೀರು ಸರಿ ಇಲ್ಲ ಎಂದರೆ ಹೇಗೆ? ರಾಜಕೀಯ ಉದ್ದೇಶಕ್ಕಾಗಿ ಇಂದು ಅದನ್ನ ಬೇಡ ಎನ್ನುವುದು ಎಷ್ಟು ಸರಿ.? ಬಸ್ ಮಾಡಿಕೊಂಡು ಕೋಲಾರ, ಚಿಕ್ಕಬಳ್ಳಾಪುರಕ್ಕೆ ಹೋಗಿ ಅಲ್ಲಿನ ರೈತರನ್ನ ಮಾತನಾಡಿಸಿ, ಯಾವ ರೀತಿ ಅನುಕೂಲವಾಗಿದೆ ಎಂದು ಕೇಳಲಿ ಎಂದು ಪ್ರಶ್ನೆ ಮಾಡಿದ್ದಾರೆ.