ತಾಲೂಕಿನ ಬಚ್ಚಹಳ್ಳಿ ಗ್ರಾಮದಲ್ಲಿ ಪದೇ ಪದೇ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರ ನಿದ್ದೆಗೆಡಿಸಿದ ಚಿರತೆ

ತಾಲೂಕಿನ ಬಚ್ಚಹಳ್ಳಿ, ಅಂತರಹಳ್ಳಿ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಗ್ರಾಮಸ್ಥರು ಆತಂಕದಲ್ಲಿ‌ ಬದುಕುವಂತಾಗಿದೆ.

ಕುಂಟನಕುಂಟೆ‌ ಸಮೀಪದ ಅಂತರಹಳ್ಳಿ, ಬಚ್ಚಹಳ್ಳಿ, ಕೋಳೂರು ಹಾಗೂ ಶಿರವಾರ ಗ್ರಾಮದಲ್ಲಿ ಪದೇ ಪದೇ ಒಂಟಿ ಚಿರತೆ ಪ್ರತ್ಯಕ್ಷವಾಗುತ್ತಿದೆ. ಶುಕ್ರವಾರ ಬೆಳಿಗ್ಗೆ 7.30 ರ ಸಮಯದಲ್ಲಿ ಅಂತರಹಳ್ಳಿ ಗ್ರಾಮದ ರೈತ ತಿಪ್ಪಯ್ಯ ಅವರ ತೋಟದ ಬಳಿ ಚಿರತೆ ಕಾಣಿಸಿಕೊಂಡಿದೆ. ಭಯಭೀತರಾಗಿ ಕಿರುಚಿಕೊಳ್ಳುತ್ತಿದ್ದಂತೆ ನೀಲಗಿರಿ ತೋಪಿನತ್ತ ಪರಾರಿಯಾಗಿದೆ.

ಬಚ್ಚಹಳ್ಳಿ ಗ್ರಾಮದಲ್ಲಿ ಕೆಲ ದಿನಗಳಿಂದ ಕಾಣಿಸಿಕೊಳ್ಳುತ್ತಿರುವ ಚಿರತೆಯಿಂದ ಜನರು ಬೆಚ್ಚಿ ಬಿದ್ದಿದ್ದು, ಜೀವ ಭಯದಲ್ಲಿ ಮನೆಗಳಿಂದ ಹೊರಬರುತ್ತಿಲ್ಲ. ಹಗಲಲ್ಲಿ ಒಬ್ಬೊಬ್ಬರೇ ಹೊಲ,ತೋಟದತ್ತ ತೆರಳಲು ಭಯಪಡುತ್ತಿದ್ದಾರೆ.

ಚಿರತೆಯಿಂದ ಅದೃಷ್ಟವಶಾತ್ ಇದುವರೆಗೂ ಯಾವುದೇ ಅಪಾಯವಾಗಿಲ್ಲ. ಅಪಾಯಕ್ಕೂ ಮುನ್ನ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಗ್ರಾಮದ ಸುತ್ತಮುತ್ತ ನೀಲಿಗಿರಿ ತೋಪುಗಳಿದ್ದು, ಚಿರತೆಯ ಆವಾಸಸ್ಥಾನವಾಗಿ ಮಾರ್ಪಟ್ಟಿದೆ. ಸುತ್ತಲಿನ ಜನರಿಗೆ ಬೆಳಿಗ್ಗೆ 6 ರಿಂದ 7 ಗಂಟೆಯೊಳಗೆ ಕಾಣಿಸಿಕೊಳ್ಳುತ್ತಿದೆ.

ಈ ಕುರಿತು ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದು, ಬಚ್ಚಹಳ್ಳಿಯ ಹಳ್ಳದ ಬಳಿ ಜ.26 ರಂದೇ ಬೋನು ಇರಿಸಿದ್ದಾರೆ. ಆದರೆ ಖತರ್ನಾಕ್ ಚಿರತೆ ಈವರೆಗೂ ಬೋನಿಗೆ ಬಿದ್ದಿಲ್ಲ. ಶುಕ್ರವಾರ‌ ಅಂತರಹಳ್ಳಿ ಬಳಿ ಚಿರತೆ ಕಂಡು ಬಂದ ಬಗ್ಗೆ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಹೆಜ್ಜೆ ಗುರುತು ಪರಿಶೀಲಿಸಿ ಖಚಿತಪಡಿಸಿದರು.

ಶೀಘ್ರದಲ್ಲೇ ಚಿರತೆಯನ್ನು ಸೆರೆ ಹಿಡಿದು ಜನರನ್ನು ಜೀವ ಭಯದಿಂದ ಮುಕ್ತಿಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

Leave a Reply

Your email address will not be published. Required fields are marked *