ತಾಲೂಕಿನ ಪಾಲ್ ಪಾಲ್ ದಿನ್ನೆ ಗ್ರಾಮದಲ್ಲಿ ಊರು ಜಾತ್ರೆ ಪ್ರಯುಕ್ತ ಜು.8ರಿಂದ 10ರವರೆಗೆ ಮದ್ದೂರಮ್ಮ, ಮಹೇಶ್ವರಮ್ಮ, ಸಪ್ಪಲಮ್ಮ, ಮುತ್ಯಾಲಮ್ಮ ಸೇರಿದಂತೆ 9 ದೇವರಿಗೆ ವಿಶೇಷ ಅಲಂಕಾರ, ಪೂಜೆ ಪುನಸ್ಕಾರ, ಆರತಿ ಬೆಳಗಿ ಭಕ್ತಿಯಲ್ಲಿ ಮಿಂದೆದ್ದ ಗ್ರಾಮಸ್ಥರು.
ತಲೆಯ ಮೇಲೆ ಹೂಗಳಿಂದ ಅಲಂಕರಿಸಿದ ದೀಪಗಳನ್ನು ಹೊತ್ತುಕೊಂಡು ಮಹಿಳೆಯರು ಮಂಗಳ ವಾದ್ಯಗಳೊಂದಿಗೆ ಊರ ಪ್ರಮುಖ ದೇವರುಗಳು ಮತ್ತು ಶಕ್ತಿದೇವರುಗಳಾದ ಮದ್ದೂರಮ್ಮ, ಮಹೇಶ್ವರಮ್ಮ, ಸಪ್ಪಲಮ್ಮ, ಮುತ್ಯಾಲಮ್ಮ, ಗಣೇಶ, ಆಂಜನೇಯ ಸ್ವಾಮಿ, ಶ್ರೀರಾಮ ದೇವರು, ತಿರುಮಲ, ಗಾಳಮ್ಮ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ದೇವರುಗಳಿಗೆ ಪೂಜೆ ಸಲ್ಲಿಸುವುದರಿಂದ ಊರಿನಲ್ಲಿರುವ ಕೆಟ್ಟದ್ದು ತೊಲಗಿ ಒಳ್ಳೆಯದಾಗುತ್ತದೆ. ಮಳೆ ಬೆಳೆ ಚೆನ್ನಾಗಿ ನಡೆದು ಊರು ಪ್ರಗತಿ ಸಾಧಿಸುತ್ತದೆ ಎಂಬ ನಂಬಿಕೆಯಿದೆ. ಮಹಿಳೆಯರನ್ನು ತವರಿಗೆ ಕರೆಸಿಕೊಂಡು ಅರಿಶಿನ, ಕುಂಕುಮ ಕೊಡುವುದು ವಾಡಿಕೆ ಈ ಗ್ರಾಮದಲ್ಲಿದೆ.
ಸತತ 9 ವರ್ಷಗಳ ನಂತರ ಗ್ರಾಮದಲ್ಲಿ ಜಾತ್ರಾ ಮಹೋತ್ಸವನ್ನು ಅದ್ಧೂರಿ, ಸಂಭ್ರಮ, ಸಡಗರದಿಂದ ನಡೆಸಲಾಯಿತು. ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿ ಭಕ್ತಿಯಲ್ಲಿ ಗ್ರಾಮಸ್ಥರೆಲ್ಲಾ ಮಿಂದೆದ್ದರು. ಜಾತ್ರಾ ಸಂಭ್ರಮವನ್ನು ಕಣ್ತುಂಬಿಕೊಳ್ಳು ಅಕ್ಕಪಕ್ಕದ ಊರಿನವರು ಆಗಮಿಸಿ ಸಂಭ್ರಮಿಸಿದರು.