ತಾಲೂಕಿನ ತೂಬಗೆರೆ ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಗ್ರಾಮ ಪಂಚಾಯಿತಿಯಿಂದ ಸರ್ಕಾರಿ ಶಾಲೆವರೆಗಿನ ರಸ್ತೆ ತಳಿರು ತೋರಣಗಳಿಂದ ಕಂಗೊಳಿಸುತ್ತಿತ್ತು. ಈ ಎಲ್ಲಾ ಸಂಭ್ರಮಕ್ಕೆ ಕಾರಣ ತೂಬಗೆರೆಯಲ್ಲಿ ಶಿಕ್ಷಣ ಇಲಾಖೆ ಆಯೋಜಿಸಿದ್ದ ಕಲಿಕಾ ಹಬ್ಬ.
ಗ್ರಾಮ ಪಂಚಾಯಿತಿಯಿಂದ ಆರಂಭವಾದ ಮೆರವಣಿಗೆಯಲ್ಲಿ ಶಾಲಾ ಮಕ್ಕಳು ಬಾರಿಸುತ್ತಿದ್ದ ಬ್ಯಾಂಡಿನ ಲಯಬದ್ಧ ಸ್ವರಕ್ಕೆ, ಗ್ರಾಮದ ಮುಖಂಡರು, ಪಾಲಕರು ಚಪ್ಪಾಳೆ ತಟ್ಟುತ್ತಾ ಹೆಜ್ಜೆ ಹಾಕಿದರು.
ಮೆರವಣಿಗೆ, ಶಾಲಾ ಮಕ್ಕಳ ವಿವಿಧ ನೃತ್ಯ, ಹುಲಿವೇಷ, ಕರಡಿವೇಷ, ಭಾವಚಿತ್ರಗಳ ಪ್ರದರ್ಶನ, ಸರ್ಕಾರದ ಯೋಜನೆಗಳ ಬಿತ್ತಿ ಪತ್ರ ಪ್ರದರ್ಶನದ ಮೂಲಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದ ವೇದಿಕೆ ತಲುಪಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್ ಕುಮಾರ್, ಗ್ರಾಮೀಣ ಸೊಗಡಿನ ಕಲಿಕಾ ಹಬ್ಬವು ಪ್ರತಿ ಮಕ್ಕಳ ಪ್ರತಿಭೆಯನ್ನು ಹೊರತರಲು ವೇದಿಕೆಯಾಗಿದೆ ಎಂದರು.
ಸಮೂಹ ಸಂಪನ್ಮೂಲ ವ್ಯಕ್ತಿ ಗಂಗಾಧರ್ ಮಾತನಾಡಿ ವಿದ್ಯಾರ್ಥಿಗಳು, ಪಾಲಕರು, ಸರ್ಕಾರಿ ಶಾಲೆಗಳತ್ತ ಬರುವಂತೆ ಮಾಡಲು ನಮ್ಮ ಕ್ಲಸ್ಟರ್ ವ್ಯಾಪ್ತಿಯ ಹದಿನೈದು ಶಾಲೆಗಳ 120 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಕಲಿಕಾ ಹಬ್ಬ ಆಯೋಜಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ಕಲಿಕಾ ಹಬ್ಬದ ಮೂಲಕ ಭಾವೈಕ್ಯತೆ, ನಾಯಕತ್ವ ಗುಣ, ಪರಿಸರ ಜ್ಞಾನ ಹೆಚ್ಚಿಸುವುದರೊಂದಿಗೆ, ಪರಿಸರದ ಬಗ್ಗೆ ಕಾಳಜಿ ವಹಿಸಲು ಪ್ರೇರೇಪಿಸುವುದಾಗಿದೆ. ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯ ಜೊತೆಗೆ 21ನೇ ಶತಮಾನದ ಕೌಶಲ್ಯಗಳನ್ನು ಸಂತೋಷದಾಯಕ ಕಲಿಕೆಯ ಮೂಲಕ ಕಲಿಸುವುದು ಈ ಕಲಿಕಾ ಹಬ್ಬದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ವೇದಿಕೆ ಕಾರ್ಯಕ್ರಮದ ನಂತರ ಶಾಲೆಯಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕೇವಲ ಪಠ್ಯಗಳಲ್ಲಿ ಮುಳುಗುತ್ತಿದ್ದ ವಿದ್ಯಾರ್ಥಿಗಳು ಕಲಿಕಾ ಹಬ್ಬದಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಕುಣಿದ ಕುಪ್ಪಳಿಸಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯರಾದ ಎಸ್ ಆರ್ ಮುನಿರಾಜು, ಗ್ರಾಮ ಪಂಚಾಯಿತಿ ಸದಸ್ಯರಾದ ಗಂಗಾಧರ್, ನಾಗೇಶ್, ಚೆಲುವ, ವೆಂಕಟಪ್ಪ ರವಿಸಿದ್ದಪ್ಪ, ಕೃಷ್ಣಪ್ಪ, ನರಸಿಂಹಮೂರ್ತಿ, ಮುಖ್ಯ ಶಿಕ್ಷಕರಾದ ನಾಗರಾಜು, ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ವಸಂತಗೌಡ ಎಸ್ ನೋಡಲ್ ಅಧಿಕಾರಿ ಗಿರೀಶ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟೇಶ್ ಟಿ ವಿ, ಸುರೇಶ್ ಮುಖಂಡರಾದ ಕನಕದಾಸ ಲಿಂಗಣ್ಣ, ಯುವ ಮುಖಂಡರಾದ ಉದಯ ಆರಾಧ್ಯ ಮತ್ತು ತೂಬಗೆರೆ ಕ್ಲಸ್ಟರ್ ವ್ಯಾಪ್ತಿಯ ಶಿಕ್ಷಕರು ಇತರರು ಪಾಲ್ಗೊಂಡಿದ್ದರು.