ತಾಲೂಕಿನ ತೂಬಗೆರೆ ಗ್ರಾಮ ಪಂಚಾಯ್ತಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಕೇವಲ ನವೀನ್ ಕುಮಾರ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ನಿಗದಿತ ಅವಧಿಯೊಳಗೆ ಉಳಿದ ಸದಸ್ಯರು ನಾಮಪತ್ರ ಸಲ್ಲಿಸದ ಕಾರಣ ನವೀನ್ ಕುಮಾರ್ ಅವರ ಆಯ್ಕೆಯನ್ನು ರೇಷ್ಮೆ ಸಹಾಯಕ ನಿರ್ದೇಶಕರು ಹಾಗೂ ಚುನಾವಣಾಧಿಕಾರಿ ಎನ್.ಗಿರಿಜಾಂಬ ಅವರು, ಅವಿರೋಧ ಆಯ್ಕೆ ಪ್ರಕಟಿಸಿದರು.
ತೂಬಗೆರೆ ಗ್ರಾಮ ಪಂಚಾಯ್ತಿಯಲ್ಲಿ ಒಟ್ಟು 21 ಮಂದಿ ಸದಸ್ಯರಿದ್ದು, ಎಲ್ಲರೂ ಸರ್ವಾನುಮತದಿಂದ ನವೀನ್ ಕುಮಾರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದರು.
ಪಂಚಾಯ್ತಿಯಲ್ಲಿ ಕಾಂಗ್ರೆಸ್ ಬೆಂಬಲಿತ ನಾಲ್ವರು, ಬಿಜೆಪಿ ಬೆಂಬಲಿತ 12 ಮಂದಿ, ಜೆಡಿಎಸ್ ಬೆಂಬಲಿತ ಮೂವರು ಹಾಗೂ ಇಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಈ ಪೈಕಿ 10 ಮಂದಿ ಮಹಿಳಾ ಸದಸ್ಯರೇ ಇದ್ದಾರೆ.
ನೂತನ ಅಧ್ಯಕ್ಷ ವೈ.ಎನ್.ನವೀನ್ ಕುಮಾರ್ ಮಾತನಾಡಿ, ಎಲ್ಲ ಸದಸ್ಯರು ವಿಶ್ವಾಸವಿಟ್ಟು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ಎಲ್ಲರ ಆಶಯದಂತೆ ಹಾಗೂ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ವೆಂಕಟಸ್ವಾಮಿ, ಬಿಜೆಪಿ ಮುಖಂಡ ಅರವಿಂದ, ಕೆಪಿಸಿಸಿ ಸದಸ್ಯ ಎಸ್.ಆರ್.ಮುನಿರಾಜು, ಶೆಟ್ಟಿಗೆರೆ ರಾಜಣ್ಣ, ಶಾಂತಕುಮಾರ್, ಚಂದ್ರಣ್ಣ, ಸತ್ಯನಾರಾಯಣಪ್ಪ, ವೆಂಕಟೇಗೌಡ, ವೆಂಕಟೇಶ್, ಮುನಿಕೃಷ್ಣಪ್ಪ, ಕೃಷ್ಣಪ್ಪ, ನಾಗಮ್ಮ ಇತರರು ನೂತನ ಅಧ್ಯಕ್ಷ ನವೀನ್ ಕುಮಾರ್ ಅವರನ್ನು ಅಭಿನಂದಿಸಿದರು.