ನಗರಸಭೆಯ ಮೊದಲನೇ ಅವಧಿಯ ಸ್ಥಾಯಿ ಸಮಿತಿ ಅಧ್ಯಕ್ಷರ ಅಧಿಕಾರಾವಧಿ ಮುಗಿದ ಹಿನ್ನೆಲೆ ಶುಕ್ರವಾರ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಎಲ್ಲಾ ಪಕ್ಷದ ನಗರಸಭೆ ಸದಸ್ಯರು ಒಮ್ಮತವಾಗಿ ನನ್ನನ್ನು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಿರುವುದು ಸಂತಸದ ಸಂಗತಿ. ನಗರಸಭೆ ವ್ಯಾಪ್ತಿಯ 31 ವಾರ್ಡ್ ಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದು ನೂತನ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್ (ವಡ್ಡರಹಳ್ಳಿ ರವಿ) ಹೇಳಿದರು.
ನಗರಸಭೆ ವ್ಯಾಪ್ತಿಯ ವಾರ್ಡ್ ಗಳ ಸರ್ವತೋಮುಖ ಅಭಿವೃದ್ಧಿಗೆ ನಗರಸಭೆ ಅನುದಾನ ಸಾಕಾಗುವುದಿಲ್ಲ, ಎಂಎಲ್ ಸಿ, ಎಂಎಲ್ ಎ ಅನುದಾನವೂ ಬೇಕಾಗುತ್ತದೆ, ಈ ನಿಟ್ಟಿನಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಗರಸಭೆ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ನಂತರ ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಮಾತನಾಡಿ, ನೂತನ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ವಿ.ಎಸ್.ರವಿಕುಮಾರ್ ರವರಿಗೆ ಶುಭವಾಗಲಿ. ಸ್ಥಳೀಯ ಅಭಿವೃದ್ಧಿಗಾಗಿ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಕಾರ್ಯ ನಿರ್ವಹಿಸಲಿದ್ದು, ನಗರದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಿದೆ. ರಾಜ್ಯದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಇಲ್ಲಿ ಕಾಣಬಹುದಾಗಿದೆ ಎಂದರು.
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಅಲ್ಪಸಂಖ್ಯಾತರ ಕಾಲೋನಿಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಬಿಡುಗಡೆ ಆಗಿದ್ದ ಅನುದಾನವನ್ನು ದೇವನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ವರ್ಗಾವಣೆ ಮಾಡಿರುವುದು ಸರ್ಕಾರದ ಸ್ವಾರ್ಥದ ಮನೋಭಾವನೆ. ಅಂದಿನ ಬಿಜೆಪಿ ಸರ್ಕಾರ ಅಳೆದು ತೂಗಿ ದೊಡ್ಡಬಳ್ಳಾಪುರ ತಾಲೂಕಿನ ಅಲ್ಪಸಂಖ್ಯಾತರ ಕಾಲೋನಿಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಅನುದಾನ ಬಿಡುಗಡೆ ಮಾಡಲಾಗಿತ್ತು. ಆದರೆ ಇಂದಿನ ಕಾಂಗ್ರೆಸ್ ಸರ್ಕಾರ ದೊಡ್ಡಬಳ್ಳಾಪುರ ಬದಲಿಗೆ ದೇವನಹಳ್ಳಿಗೆ ವರ್ಗಾಯಿಸಿರುವುದು ಪ್ರಶ್ನಾತೀತವಾಗಿದೆ ಎಂದರು.
ನಮ್ಮ ತಾಲೂಕಿಗೆ ಬಿಡುಗಡೆ ಆಗಿದ್ದ ಅನುದಾನವನ್ನು ಮತ್ತೆ ವಾಪಸ್ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಲಾಗುವುದು ಎಂದು ತಿಳಿಸಿದರು. ಇವತ್ತಿನ ರಾಜಕಾರಣ ದ್ವೇಷದಿಂದ ಕೂಡಿದೆ. ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ಅವಳಿಜವಳಿ ತಾಲೂಕುಗಳು, ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿರುತ್ತದೆ. ತೂಬಗೆರೆ ಹೋಬಳಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಇದನ್ನ ಗಮನದಲ್ಲಿಟ್ಟುಕೊಂಡು ಜಿಲ್ಲಾ ಉಸ್ತುವಾರಿ ಸಚಿವರು ತಾಲೂಕಿಗೆ ನೀಡಿದ್ದ ಅನುದಾನ ವಾಪಸ್ ನೀಡಬೇಕು ಎಂದರು.
ಈ ವೇಳೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹೆಚ್. ಅಪ್ಪಯ್ಯಣ್ಣ, ನಗರಸಭೆ ಅಧ್ಯಕ್ಷೆ ಸುಧಾರಾಣಿ ಲಕ್ಷ್ಮಿ ನಾರಾಯಣ್, ಉಪಾಧ್ಯಕ್ಷೆ ಫರ್ಹಾನ ತಾಜ್, ಎ.ನರಸಿಂಹಯ್ಯ, ತಾ.ನ.ಪ್ರಭುದೇವ್ ಸೇರಿದಂತೆ ಇತರರು ಉಪಸ್ಥಿತರಿದ್ದರು.