ದೊಡ್ಡಬಳ್ಳಾಪುರ: ತಾಲ್ಲೂಕಿನ ಹುಸ್ಕೂರು ಗೇಟ್ ಬಳಿ 15 ಎಕರೆ ವಿಸ್ತೀರ್ಣದಲ್ಲಿ ಬಮುಲ್ ವತಿಯಿಂದ 250 ಕೋಟಿ ವೆಚ್ಚದಲ್ಲಿ ಟೆಟ್ರಾಪ್ಯಾಕ್ ತಯಾರಿಕಾ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಶೀಘ್ರದಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಬಮುಲ್ ನಿರ್ದೇಶಕ ಬಿ.ಸಿ. ಆನಂದ್ ಕುಮಾರ್ ತಿಳಿಸಿದರು.
ನಗರದ ಹಾಲು ಶೀತಲೀಕರಣ ಶಿಬಿರದ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ 73ನೇ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದಿನ ಆಡಳಿತ ಮಂಡಳಿಯಿಂದಲೂ ಸರ್ಕಾರ ಹಾಗೂ ಬಮುಲ್ ಮೇಲೆ ನಿರಂತರ ಒತ್ತಡ ತಂದು ದೊಡ್ಡಬಳ್ಳಾಪುರಕ್ಕೆ ಸುಮಾರು 250 ಕೋಟಿ ಮೊತ್ತದ ಮಹತ್ವದ ಯೋಜನೆಯನ್ನು ತರಲು ಪ್ರಯತ್ನಿಸಲಾಗಿದೆ. ಘಟಕದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ಹಾಗೂ ಸಹಕಾರ ಸಚಿವರು ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಸಹಕಾರಿ ಕ್ಷೇತ್ರದ ಸೌಲಭ್ಯಗಳು ಮತ್ತು ಯೋಜನೆಗಳನ್ನು ಒಬ್ಬರಿಂದ ಮತ್ತೊಬ್ಬರಿಗೆ ತಿಳಿಸುವ ಮೂಲಕ ಹೆಚ್ಚಿನ ಜನರಿಗೆ ತಲುಪಿಸುವುದೇ ಸಹಕಾರ ಸಪ್ತಾಹದ ಮುಖ್ಯ ಉದ್ದೇಶವಾಗಿದೆ. ನಾವು ಯಾವುದೇ ಅಧಿಕಾರ ಅಥವಾ ಸ್ಥಾನದಲ್ಲಿದ್ದರೂ ಅದಕ್ಕೆ ಗೌರವ ನೀಡಬೇಕು. ವಹಿಸಿಕೊಂಡ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಕೇವಲ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಪ್ರಯೋಜನವಿಲ್ಲ. ಜನರಿಗೆ ಸೌಲಭ್ಯಗಳನ್ನು ತಲುಪಿಸಿದಾಗ ಮಾತ್ರ ಸಮಾಜದ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಹೇಳಿದರು.
ನಿರ್ದೇಶಕ ಸ್ಥಾನದಲ್ಲಿ ದೊರೆಯುವ ಸೌಲಭ್ಯಗಳನ್ನು ರೈತರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಸ್ಥಳೀಯ ಶಾಸಕರ ಸಹಕಾರದಿಂದ ಹಲವು ಉತ್ತಮ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗಿದೆ. ದೊಡ್ಡಬಳ್ಳಾಪುರದ ರೈತರ ಹೋರಾಟಗಳು ಎಂದಿಗೂ ವಿಫಲವಾಗಿಲ್ಲ. ಯಾವುದೇ ಹೋರಾಟದಲ್ಲಿ ಬದ್ಧತೆ ಮತ್ತು ಪ್ರಾಮಾಣಿಕ ಪ್ರಯತ್ನವಿದ್ದರೆ ಯಶಸ್ಸು ಖಚಿತ. ರೈತರ ಕಷ್ಟಗಳನ್ನು ಅರಿಯದವರು ಹೋರಾಟಗಳ ಬಗ್ಗೆ ಟೀಕೆ ಮಾಡುತ್ತಾರೆ. ಇಂತಹ ಟೀಕೆಗಳಿಂದ ಸಮಾಜಕ್ಕೆ ಯಾವುದೇ ಪ್ರಯೋಜನವಿಲ್ಲ ಎಂದರು.
ಹಾಲಿನ ಖರೀದಿ ದರ ಹೆಚ್ಚಳಕ್ಕಾಗಿ ರೈತರು ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆಸಿದ ಹೋರಾಟದ ಫಲವಾಗಿ ಸರ್ಕಾರ ಹಾಲಿನ ದರ ಹೆಚ್ಚಳ ಮಾಡಿದೆ. ಇದು ರೈತರ ಸಂಘಟಿತ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ತಿಳಿಸಿದರು.
ರೈತರ ತರಕಾರಿಗಳಿಗೂ ಸೂಕ್ತ ಮಾರುಕಟ್ಟೆ ವ್ಯವಸ್ಥೆ:
ರೈತರಿಂದ ಹಾಲು ಖರೀದಿಸಿ ಮಾರುಕಟ್ಟೆ ಒದಗಿಸುತ್ತಿರುವ ಮಾದರಿಯಲ್ಲಿಯೇ ತರಕಾರಿಗಳನ್ನು ಸಹಕಾರಿ ಕ್ಷೇತ್ರದ ಮೂಲಕ ಮಾರಾಟ ಮಾಡುವ ವ್ಯವಸ್ಥೆ ಜಾರಿಗೆ ತರಬೇಕಿದೆ. ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ನಿಗದಿಪಡಿಸಿ, ಸರ್ಕಾರವೇ ಖರೀದಿಸುವ ವ್ಯವಸ್ಥೆ ರೂಪಿಸುವ ಕುರಿತು ಚಿಂತನೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ರೈತರು ಒಗ್ಗಟ್ಟು ಪ್ರದರ್ಶಿಸಿ ಇಂತಹ ಯೋಜನೆಗಳಿಗೆ ಬೆಂಬಲ ನೀಡಬೇಕು ಎಂದು ಕರೆ ನೀಡಿದರು.
ಬಮುಲ್ ನಿರ್ದೇಶಕ ಸತೀಶ್ ಕಡತನಮಲೆ ಮಾತನಾಡಿ, ಕೃಷಿಯಲ್ಲಿ ತೊಡಗಿಸಿಕೊಂಡಿರುವ ರೈತರಿಗೆ ಸಾಲ ಸೌಲಭ್ಯ ಒದಗಿಸುವುದು ಸಹಕಾರ ಒಕ್ಕೂಟದ ಪ್ರಮುಖ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ಅವರು ಸಹಕಾರ ಒಕ್ಕೂಟದಲ್ಲಿ 130 ಕೋಟಿ ಮೀಸಲಿಡಲು ಶ್ರಮಿಸಿದ್ದಾರೆ. ಇದರಡಿ 10 ಗುಂಟೆ ಜಮೀನು ಹೊಂದಿರುವ ರೈತರಿಗೂ ಕನಿಷ್ಠ 15 ಲಕ್ಷ ಸಾಲ ನೀಡಲು ತೀರ್ಮಾನಿಸಲಾಗಿದೆ. ಹಸುಗಳ ಖರೀದಿ ಸೇರಿದಂತೆ ಪಶುಸಂಗೋಪನೆಗೆ ಸಾಲ ನೀಡಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಹಾಲು ಸರಬರಾಜು ಮಾಡಿದ ರೈತರಾದ ಆಶಾ, ಕಿರಣ್ ಕುಮಾರ್ ಹಾಗೂ ಲಕ್ಷ್ಮಮ್ಮ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಸಿ. ಮುನಿರಾಜು, ನಿರ್ದೇಶಕ ಬಿ.ಟಿ. ಶ್ರೀನಿವಾಸಮೂರ್ತಿ, ಟಿಎಪಿಎಂಸಿಎಸ್ ಅಧ್ಯಕ್ಷ ಸಿದ್ದರಾಮಯ್ಯ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಗೋವಿಂದರಾಜು, ಕೆ. ರಮೇಶ್, ಡಿಆರ್ ಮಂಜುಳಮ್ಮ, ಅಂಬರೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ದೊಡ್ಡಬಳ್ಳಾಪುರ: ಬಿಲ್ಡಿಂಗ್‌ಗೆ ಪೇಂಟ್ ಮಾಡಲು ಬಂದಿದ್ದ ಕಾರ್ಮಿಕನೊಬ್ಬ ಆಕಸ್ಮಿಕವಾಗಿ ಕಟ್ಟಡದ ಮೇಲಿಂದ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ…
ಕೇರಳ: ತಿರುರ್‌ನ 19 ವರ್ಷದ ಸಫಾನಾ ಎಂಬ ಯುವತಿ ತನ್ನ ಪ್ರಿಯಕರನನ್ನು ಅಪಹರಿಸಿ ಹಲ್ಲೆ ನಡೆಸಿದ ಆರೋಪದ ಮೇಲೆ…
ಕುಣಿಗಲ್, ನ.15: ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಹೋಬಳಿಯ ಚೌಡನಾಯಕನಪಾಳ್ಯ ಗ್ರಾಮದಲ್ಲಿ ತಂದೆಯೇ ತನ್ನ 16 ವರ್ಷದ ಮಗನನ್ನು ಹಾರೆಕೋಲಿನಿಂದ ಹೊಡೆದು…
ದೊಡ್ಡಬಳ್ಳಾಪುರ: ತಿಂಗಳ ಸಂಬಳಕ್ಕಾಗಿ ಮತ್ತೊಬ್ಬರ ಬಳಿ ಕೆಲಸ ಮಾಡುವುದಕ್ಕಿಂತ ಸ್ವಂತ ಕೃಷಿ ಭೂಮಿಯಲ್ಲೇ ಹೊಸ ಉದ್ಯಮ ಆರಂಭಿಸಿ ಸ್ವಾವಲಂಬಿ ಬದುಕು…
ದೊಡ್ಡಬಳ್ಳಾಪುರ: ನಗರದ ಮಾರುತಿನಗರದಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸಿಸಿಡಿಸಿ (ಸೆಂಟರ್ ಫಾರ್ ಕ್ರಾನಿಕ್ ಡಿಸೀಸ್ ಕಂಟ್ರೋಲ್) ಸಂಸ್ಥೆಯ ಸಹಯೋಗದೊಂದಿಗೆ ಉಚಿತ…
ಮಧ್ಯಪ್ರದೇಶದ ಸಾತ್ಪುರ ಹುಲಿ ಸಂರಕ್ಷಿತ ಪ್ರದೇಶದ ಸಹಾಯಕ ನಿರ್ದೇಶಕರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ₹26.36 ಲಕ್ಷ ನಗದು,…